ರಾಮನಗರ: ಜಿಲ್ಲೆಯ ಬಿಡದಿಯ ಕೇತಿಗಾನಹಳ್ಳಿಯಲ್ಲಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಬಾಡೂಟ ಆಯೋಜನೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಇಂದು ಯುಗಾದಿಯ ಹೊಸತೊಡಕು ಹಿನ್ನೆಲೆಯಲ್ಲಿ ಪಕ್ಷದ ಕೆಲ ನಾಯಕರು ಹಾಗೂ ಮುಖಂಡರಿಗೆ ಕುಮಾರಸ್ವಾಮಿ ಬಾಡೂಟ ಆಯೋಜಿಸಿದ್ದರು. ಚುನಾವಣಾ ನೀತಿಸಂಹಿತೆ ಹಿನ್ನೆಲೆಯಲ್ಲಿ ಬಾಡೂಟ ಆಯೋಜನೆಗಳಿಗೆ ಕಡಿವಾಣವಿದ್ದರೂ ಬಾಡೂಟ ಆಯೋಜಿಸಿದ್ದರಿಂದ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ತಪಾಸಣೆಗೆ ತೆರಳಿದರು.
ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ 100ರಿಂದ 150 ಮಂದಿಗೆ ಊಟ ಸಿದ್ದಪಡಿಸಲಾಗುತ್ತಿತ್ತು. ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಕಾರ್ಯಕ್ರಮ ಆಯೋಜಿಸದಂತೆ ತಾಕೀತು ಮಾಡಿದ ಚುನಾವಣಾಧಿಕಾರಿಗಳು ಬಳಿಕ ಸ್ಥಳದಿಂದ ತೆರಳಿದ್ದಾರೆ.
ಹಿಂದೂ ಸಂಸ್ಕೃತಿ ಮೇಲೆ ಕಾಂಗ್ರೆಸ್ ಕಾಕದೃಷ್ಟಿ: ಯುಗಾದಿ ಹೊಸತೊಡಕು ಸಂಭ್ರಮಕ್ಕೆ ಅಡ್ಡಿ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ಹಿಂದೂ ಸಂಸ್ಕೃತಿಯ ಮೇಲೆ ತನ್ನ ಕಾಕದೃಷ್ಟಿ ಬೀರಿದೆ ಎಂದು ಜಾತ್ಯತೀತ ಜನತಾದಳ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಪಕ್ಷ, ಯುಗಾದಿ ಹಿಂದೂಗಳ ಹೊಸವರ್ಷ. ಯುಗಾದಿ ಹಿಂದೂಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ಅಸ್ಮಿತೆ. ಈ ಹಬ್ಬದ ಮರುದಿನದ ಸಂಭ್ರಮ ಹೊಸತೊಡಕು ಆಚರಣೆ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಕಾಂಗ್ರೆಸ್ ನಮ್ಮ ಸಂಪ್ರದಾಯ, ಸಂಸ್ಕೃತಿ, ಆಚರಣೆಯ ಮೇಲೆಯೂ ಕಾಕದೃಷ್ಟಿ ಬೀರಿದೆ. ಬಾಡೂಟವನ್ನು ಭಯೋತ್ಪಾದನೆಯಂತೆ ವೈಭವೀಕರಿಸುತ್ತಿದೆ ಎಂದಿದೆ.
ಪ್ರತಿಯೊಬ್ಬ ಹಿಂದೂ ಮನೆಯಲ್ಲಿ ನಡೆಯುವಂತೆ ಕುಮಾರಸ್ವಾಮಿ ಅವರ ಮನೆಯಲ್ಲಿಯೂ ಹೊಸತೊಡಕು ಆಚರಣೆ ನಡೆಯುತ್ತಿದೆ. ಅದರಲ್ಲಿ ವಿಶೇಷವೇನೂ ಇಲ್ಲ. ಹೊಸತೊಡಕು ಊಟಕ್ಕೆ ಸಂಬಂಧಿಕರು, ಸ್ನೇಹಿತರು ಹಾಗೂ ರಾಜಕೀಯ ಸಹಪಾಠಿಗಳನ್ನು ಅವರು ಆಹ್ವಾನಿಸಿದ್ದಾರೆ. ಮಾಂಸದ ಅಡುಗೆ ಈ ದಿನದ ಸಾಮಾನ್ಯ ತಿನಿಸು. ಈ ಊಟಕ್ಕೂ ಕಾಂಗ್ರೆಸ್ ಕಲ್ಲು ಹಾಕಿ ವಿಕೃತಿ ಮೆರೆದಿದೆ ಎಂದು ಜೆಡಿಎಸ್ ಆರೋಪಿಸಿದೆ.
'ಕೋವಿಡ್ ವೇಳೆ ಹಾಕಲಿಲ್ಲ, ಈಗ ಊಟ ಹಾಕುತ್ತಿದ್ದಾರೆ': ಕುಮಾರಸ್ವಾಮಿ ಈಗಲಾದರೂ ಮುಂದೆ ಬಂದು ಜನರಿಗೆ ಊಟ ಹಾಕುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಅವರು ಏನೂ ಮಾಡಲಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.
ಇದನ್ನೂ ಓದಿ: 'ಕುಮಾರಸ್ವಾಮಿ ಈಗ ಜನರಿಗೆ ಊಟ ಹಾಕುತ್ತಿದ್ದಾರೆ, ಕೋವಿಡ್ ಸಮಯದಲ್ಲಿ ಏನೂ ಮಾಡಲಿಲ್ಲ' - D K Shivakumar