ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ತೋಟಕ್ಕೆ ತೆರಳಿದ್ದ ವೇಳೆ ಭಾರಿ ಗಾಳಿ ಮತ್ತು ಮಳೆಗೆ ಮರವೊಂದು ಮುರಿದು ಬಿದ್ದ ಪರಿಣಾಮ ವೃದ್ಧೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಬಸವನಮೂಲೆ ನಿವಾಸಿ ಶೇಷಪ್ಪ ಎಂಬವರ ಪತ್ನಿ ಮೀನಾಕ್ಷಿ ಬಸವನಮೂಲೆ (65) ಮೃತರು. ಮೃತರು ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಮೀನಾಕ್ಷಿ ಅವರು ತಮ್ಮ ತೋಟದಲ್ಲಿ ಕಟ್ಟಿದ್ದ ಜಾನುವಾರು ಬಿಡಿಸಿ ತರಲು ಸಂಜೆ ತೆರಳಿದ್ದ ವೇಳೆ ಗಾಳಿ ಮಳೆಗೆ ತೋಟದಲ್ಲಿನ ಮರವೊಂದು ಇವರ ಮೇಲೆ ಬಿದ್ದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮೀನಾಕ್ಷಿ ಸ್ಥಳದಲ್ಲೇ ಮೃತರಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಕಡಬ ಕಂದಾಯ ನಿರೀಕ್ಷಕ ಪ್ರಥ್ವಿರಾಜ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೈಕ್ ಸವಾರ ಸಾವು: ಪುತ್ತೂರಿನ ಕಾಣಿಯೂರಿನ ಸುಬ್ರಹ್ಮಣ್ಯ ರಸ್ತೆಯ ಪುರುಷರಕಟ್ಟೆ ಎಂಬಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಘಟನೆಯಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದಾನೆ. ಪುರುಷರಕಟ್ಟೆಯಲ್ಲಿರುವ ಪ್ಯಾಕ್ಟರಿಯಲ್ಲಿ ಸಿಪಾನ್ ಮೆಷಿನ್ ಆಪರೇಟರ್ ಆಗಿ ಕೆಲಸ ನಿರ್ವಹಿಸುವ ಮೋಕ್ಷಿತ್ (23) ಅಪಘಾತಕ್ಕೆ ಬಲಿಯಾದ ಯುವಕ.
ಬಸ್ ಮತ್ತು ಬೈಕ್ ನಡುವೆ ಈ ಅಪಘಾತ ಸಂಭವಿಸಿದ್ದು ಸವಾರ ಮೋಕ್ಷಿತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೆಳಗ್ಗಿನ ಜಾವ ಬೈಕ ಅನ್ನು ಸರ್ವಿಸ್ ಸ್ಟೇಷನ್ಗೆ ತೆಗೆದುಕೊಂಡು ಹೋಗಿ ಹಿಂತಿರುಗಿ ಬರುವಾಗ ಅಲ್ಲಿಯೇ 100 ಮೀಟರ್ ಅಂತರದಲ್ಲಿ ಈ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣೆಯ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಯುವಕನ ತಂದೆ ಆನಂದಗೌಡ ಪುತ್ತೂರಿನ ಸಂಚಾರಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ 5 ದಿನ ಮಳೆ ಮುನ್ಸೂಚನೆ - Karnataka Rain Forecast