ಬೆಂಗಳೂರು: ಅಳಿಲು ಸೇವೆ ಮತ್ತು ಯುವ ಧ್ವನಿ ಸಂಘಟನೆ ವತಿಯಿಂದ ಇಂದು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಾರ್ವಜನಿಕರಿಂದ ಇ-ವೇಸ್ಟ್ ಸಂಗ್ರಹ ಅಭಿಯಾನ ನಡೆಯಿತು. ಅಳಿಲು ಸೇವೆ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಭಾಗ್ಯವತಿ ಅಮರೇಶ್, ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆಯ ಟ್ರಸ್ಟಿ ಅಮರೇಶ್(ಅಂಬರೀಶ್) ಮತ್ತು ಯುವ ಧ್ವನಿ ಸಂಘಟನೆಯ ಶ್ರವಣ್ ಸೂರಜ್ ಮತ್ತು ಬಿಜೆಪಿ ಮುಖಂಡರಾದ ರಾಜು, ಅಜಿತ್ ಮತ್ತು ಸ್ವಯಂಸೇವಕರು ಇ-ವೇಸ್ಟ್ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದರು.
ಭಾಗ್ಯವತಿ ಅಮರೇಶ್ ಮಾತನಾಡಿ, "ನಮ್ಮ ಭವಿಷ್ಯದ ಪೀಳಿಗೆಗೆ ಅರೋಗ್ಯಕರ ಮತ್ತು ಸಂತಸದಾಯಕ ವಾತಾವರಣ ನೀಡುವ ಜವಾಬ್ದಾರಿ ನಮ್ಮ, ನಿಮ್ಮ ಮೇಲಿದೆ. ಆದ್ದರಿಂದ ಸುಂದರ ಪರಿಸರ, ಫಲವತ್ತಾದ ಮಣ್ಣು ನಿರ್ಮಾಣಕ್ಕೆ ಪಣ ತೊಟ್ಟಿದ್ದೇವೆ. ಈ ಹಿನ್ನೆಲೆಯಲ್ಲಿ ನಮ್ಮ ಅಳಿಲು ಸೇವೆ ಮತ್ತು ಯುವಧ್ವನಿ ಜಂಟಿಯಾಗಿ ಮನೆಗಳಲ್ಲಿ, ಆಫೀಸ್ಗಳಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ ಇರುವ ಇ-ವೇಸ್ಟ್ ಸಂಗ್ರಹ ಮಾಡುತ್ತಿದ್ದೇವೆ" ಎಂದು ಹೇಳಿದರು.
"ನಿಮ್ಮಲ್ಲಿರುವ ಬಳಕೆಯಾಗದ ಕೆಟ್ಟು ಹೋಗಿರುವ ಸಿ.ಡಿ, ಪೆನ್ಡ್ರೈವ್, ಚಾರ್ಜರ್, ರಿಮೋಟ್ ಮತ್ತು ಹಳೆಯ ಎಲ್ಲಾ ರೀತಿಯ ಕೆಟ್ಟು ಹೋಗಿರುವ ನಿರುಪಯೋಗಿ ಎಲೆಕ್ಟ್ರಾನಿಕ್ ವಸ್ತುಗಳನ್ನು ನಮ್ಮ ಇ-ವೇಸ್ಟ್ ಸಂಗ್ರಹ ಅಭಿಯಾನಕ್ಕೆ ನೀಡಬಹುದಾಗಿದೆ. ಪರಿಸರ ಉಳಿದರೆ ಮಾನವ, ಪ್ರಾಣಿ ಪಕ್ಷಿಗಳು ಜೀವಿಸಲು ಸಾಧ್ಯ. ಪರಿಸರ ಹಾಳಾದರೆ ಮನುಕುಲವೇ ನಾಶವಾಗಲಿದೆ. ಆದ್ದರಿಂದ ಪ್ರತಿಯೊಬ್ಬರು ಪರಿಸರ ಉಳಿಸಿ, ಬೆಳಸಲು ಕೈಜೋಡಿಸಬೇಕು. ಪ್ರತೀ ಮನೆಯನ್ನೂ ಸಸಿ ನೆಟ್ಟು ಪೋಷಣೆ ಮಾಡಬೇಕು" ಎಂದು ಕರೆ ನೀಡಿದರು.
ರಾಜಭವನ ಅಂಗಳದಲ್ಲಿ ಸಸಿ ನೆಟ್ಟ ಕೋವಿಂದ್: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ಕುಟುಂಬದೊಂದಿಗೆ ರಾಜಭವನದ ಆವರಣದಲ್ಲಿ ಕ್ಯಾಸಿಯಾ ಫಿಸ್ಟುಲಾ ಸಸಿ ನೆಟ್ಟರು. ಈ ಸಂದರ್ಭದಲ್ಲಿ ರಾಜ್ಯಪಾಲರು, ಸಸಿಗಳನ್ನು ನೆಟ್ಟು ಪ್ರಕೃತಿಯನ್ನು ಪೋಷಿಸಿ, ಪರಿಸರ ಸಂರಕ್ಷಣೆಗೆ ತಮ್ಮ ಕೊಡುಗೆ ನೀಡುವಂತೆ ಮನವಿ ಮಾಡಿದರು.
ಇದನ್ನೂ ಓದಿ: ಹಾವೇರಿಯ ಹೆಗ್ಗೇರಿ ಕೆರೆಗಾಗಿ ಬದುಕನ್ನೇ ಮುಡಿಪಿಟ್ಟ ಈ ಪರಿಸರಪ್ರೇಮಿಗೊಂದು ಸೆಲ್ಯೂಟ್! - World Environment Day