ಬೆಂಗಳೂರು: ಗುತ್ತಿಗೆದಾರರ ಬಾಕಿ ಹಣವನ್ನು ಗರಿಷ್ಠ ಒಂದು ಅಥವಾ ಎರಡು ವಾರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಮಂಗಳವಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ರಾಜ್ಯ ಸರ್ಕಾರ 2019-20ರಿಂದ 2022-23ರ ಅವಧಿಯಲ್ಲಿ ಗುತ್ತಿಗೆದಾರರಿಗೆ ನೀಡಿರುವ ಕಾಮಗಾರಿಗಳ ಗುಣಮಟ್ಟ ಮತ್ತಿತರ ಅಂಶಗಳ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಏಕವ್ಯಕ್ತಿ ಆಯೋಗ ರಚಿಸಿ 2023 ಆಗಸ್ಟ್ 5ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಮೆರ್ಸಸ್ ನಿಕ್ಷೇಪ್ ಇನ್ಫ್ರಾ ಪ್ರಾಜೆಕ್ಟ್ಸ್ ಸೇರಿದಂತೆ ಹಲವು ಗುತ್ತಿಗೆ ಕಂಪೆನಿಗಳು ಮತ್ತು ಗುತ್ತಿಗೆದಾರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.
ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ಮುಂದಿನ ಒಂದು ಅಥವಾ ಎರಡು ವಾರದಲ್ಲಿ ಬಾಕಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಅರ್ಜಿದಾರರ ಪರ ವಕೀಲರು, ಬಿಬಿಎಂಪಿ ಹೊರತುಪಡಿಸಿ ಉಳಿದೆಲ್ಲ ಪ್ರಾಧಿಕಾರಗಳು ಶೇ.100ರಷ್ಟು ಹಣ ಬಿಡುಗಡೆ ಮಾಡಿವೆ. ಬಿಬಿಎಂಪಿ ಶೇ.75ರಷ್ಟು ಬಾಕಿ ಹಣ ಬಿಡುಗಡೆ ಮಾಡಿದ್ದು, ಶೇ.25ರಷ್ಟು ಹಣ ಬಾಕಿ ಉಳಿಸಿಕೊಂಡಿದೆ. ಸರ್ಕಾರದ ಕಾಮಗಾರಿಗಳಿಂದ ದೊರೆಯುವ ಲಾಭ ಶೇ.10ಕ್ಕೂ ಕಡಿಮೆ. ಶೇ.25ರಷ್ಟು ಹಣ ಉಳಿಸಿಕೊಂಡರೆ ಏನು ಮಾಡುವುದು? ಈ ನಡುವೆ ಸರಕು ಮತ್ತು ಸೇವಾ ತೆರಿಗೆ ಇಲಾಖೆ ನೋಟಿಸ್ ಬಂದಿದೆ ಎಂದರು.
ಇದಕ್ಕೆ ಪೀಠ, ಗುತ್ತಿಗೆದಾರರಿಗೆ ಬಾಕಿ ಹಣ ಬಿಡುಗಡೆ ಮಾಡಲು ಬಿಬಿಎಂಪಿಗೆ ಸಮಸ್ಯೆ ಏನಾದರೂ ಇದೆಯೇ? ನೀರಾವರಿ ನಿಗಮಕ್ಕೆ ಸಂಬಂಧಿಸಿದ ಪ್ರಕರಣದಲ್ಲೂ ಹಣ ಬಿಡುಗಡೆಯಾಗಿಲ್ಲ ಎಂದು ತಿಳಿಸಿತು.
ಇದಕ್ಕೆ ಅಡ್ವೊಕೇಟ್ ಜನರಲ್, ಎರಡು ವಾರಗಳ ಬಳಿಕ ಹಾಲಿ ಅರ್ಜಿ ಮತ್ತು ನೀರಾವರಿ ನಿಗಮದ ಬಾಕಿ ಹಣಕ್ಕೆ ಸಂಬಂಧಿಸಿದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆಗೆ ಪರಿಗಣಿಸಬಹುದು. ಸರ್ಕಾರದಿಂದ ಸೂಚನೆ ಪಡೆಯಲಾಗುವುದು. ಗುತ್ತಿಗೆದಾರರು ಕೆಲಸ ಮಾಡಿದ್ದಾರೆ. ಅವರ ಸಮಸ್ಯೆ ನಮಗೆ ಅರ್ಥವಾಗುತ್ತದೆ ಎಂದರು.
ವಾದ ಆಲಿಸಿದ ಪೀಠ, ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಿತು.
ಇದನ್ನೂ ಓದಿ: ನಗರ ವ್ಯಾಪ್ತಿಯಲ್ಲಿ 474 ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ: ಬಿಬಿಎಂಪಿ - BBMP Property Tax