ಬೆಳಗಾವಿ: ಕಳೆದ ವರ್ಷ ಭೀಕರ ಬರಗಾಲದಿಂದ ಕಂಗೆಟ್ಟಿದ್ದ ಜಿಲ್ಲೆಯ ರೈತರು ಈ ಬಾರಿ ಮುಂಗಾರು ಮಳೆ ಉತ್ತಮ ಆರಂಭ ಪಡೆದಿದ್ದರಿಂದ ಸಂತಸಗೊಂಡಿದ್ದಾರೆ. ಬಿತ್ತನೆ ಚುರುಕೊಂಡಿದ್ದು, ಕೃಷಿ ಚಟುವಟಿಕೆಯಲ್ಲಿ ರೈತರು ನಿರತರಾಗಿದ್ದಾರೆ.
ಹೌದು, ಜಿಲ್ಲೆಯಾದ್ಯಂತ ಭತ್ತ, ಗೋವಿನಜೋಳ, ಸೋಯಾಬಿನ್, ಹತ್ತಿ, ತೊಗರಿ, ಹೆಸರು, ಶೇಂಗಾ ಸೇರಿ ಮತ್ತಿತರ ಬೆಳೆಗಳ ಬಿತ್ತನೆ ಜೋರಾಗಿದೆ. ರೈತರು ಕುಟುಂಬ ಸಮೇತರಾಗಿ ಮತ್ತು ಕೂಲಿ ಕಾರ್ಮಿಕರೊಂದಿಗೆ ಬಂದು ಬಿತ್ತನೆಯಲ್ಲಿ ತೊಡಗಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ 7,42,530 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಗೆ ಕೃಷಿ ಇಲಾಖೆ ಗುರಿ ಹಾಕಿಕೊಂಡಿದೆ. ಈ ಪೈಕಿ ಜೂನ್ 10ರ ವೇಳೆಗೆ, 2,53,000(ಶೇ.35) ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಇದರಲ್ಲಿ 1,79,195 ಹೆಕ್ಟೇರ್‌ನಲ್ಲಿ ಕಬ್ಬಿನ ಬೆಳೆ ಇದ್ದರೆ, 73,533 ಹೆಕ್ಟೇರ್‌ನಲ್ಲಿ ವಿವಿಧ ಬೆಳೆಗಳ ಬಿತ್ತನೆ ಮುಗಿದಿದೆ. ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ 7.11 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. 2023ರ ಜೂನ್ 9ರ ವೇಳೆಗೆ, ಶೇ.16ರಷ್ಟು ಬಿತ್ತನೆಯಾಗಿತ್ತು. ಆದರೆ, ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಬಿತ್ತನೆ ದುಪ್ಪಟ್ಟಾಗಿದೆ. ಕಳೆದ ಬಾರಿ ಮಳೆ ಕೈಕೊಟ್ಟಿದ್ದರಿಂದ 6.73 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಮಾತ್ರ ಬಿತ್ತನೆಯಾಗಿತ್ತು.
ಬೀಜ-ರಸಗೊಬ್ಬರ ಕೊರತೆ ಇಲ್ಲ: 1,36,000 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದೆ. 38 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದ್ದು, ಇದರಲ್ಲಿ 21 ಸಾವಿರ ಕ್ವಿಂಟಾಲ್ ಬೀಜ ಸಹಾಯಧನದಡಿ ವಿತರಣೆಯಾಗಿದೆ. ಬೇಡಿಕೆಗೆ ಅನುಗುಣವಾಗಿ ಸರಬರಾಜು ಮಾಡಲಾಗಿದೆ. ಬೀಜ, ಗೊಬ್ಬರದ ಕೊರತೆ ಇಲ್ಲ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಸಲ ಮುಂಗಾರು ಪೂರ್ವ ಎಂದರೆ 2024ರ ಮಾ.1 ರಿಂದ ಮೇ 31ರ ವರೆಗೆ 93 ಮಿ.ಮೀ ಮಳೆಯಾಗಬೇಕಿತ್ತು. ಆದರೆ, ವಾಡಿಕೆಗಿಂತ 119 ಮಿ.ಮೀ, ಶೇ. 28 ಹೆಚ್ಚು ಮಳೆ ಆಗಿರೋದು ಅನ್ನದಾತರ ಸಂತಸಕ್ಕೆ ಕಾರಣವಾಗಿದೆ. ಮುಂಗಾರು ಹಂಗಾಮಿನಲ್ಲಿ ಜೂನ್ 1ರಿಂದ 12ರ ವರೆಗೆ 50 ಮಿ.ಮೀ ಮಳೆಯಾಗಬೇಕಿತ್ತು. ಈ ಬಾರಿ 121 ಮಿ.ಮೀ ವಾಡಿಕೆಗಿಂತ ಶೇ.144ರಷ್ಟು ಹೆಚ್ಚು ಮಳೆಯಾಗಿರುವುದು ಹೆಚ್ಚಿನ ಪ್ರಮಾಣದಲ್ಲಿ ರೈತರು ಬಿತ್ತನೆ ಮಾಡಲು ಕಾರಣವಾಗಿದೆ.
ಸುವರ್ಣ ವಿಧಾನಸೌಧದ ಕೂಗಳತೆ ದೂರದಲ್ಲಿರುವ ಬೆಳಗಾವಿ ತಾಲೂಕಿನ ಕೊಂಡಸಕೊಪ್ಪದ ತಮ್ಮ ತವರು ಮನೆಯವರ ಜಮೀನಿನಲ್ಲಿ ಬಿತ್ತನೆಗೆ ನೆರವಾಗಲು ಖಾನಾಪುರ ತಾಲೂಕಿನ ದೇವಲತ್ತಿಯಿಂದ ಆಗಮಿಸಿದ್ದ ರೈತ ಮಹಿಳೆ ಸುಶೀಲಾ ಅಪ್ಪಾಜಿ ಸಿಮಾನಗೌಡರ ಈಟಿವಿ ಭಾರತ ಜೊತೆಗೆ ಮಾತನಾಡಿ, ಈ ಸಲ ಮಳಿ ಚೊಲೋ ಆಗೈತ್ರಿ, ನನ್ನ ತವರು ಮನೆಯದು ಎರಡು ಎಕರೆ ಹೊಲ ಐತಿ. ಮನೆಯವರೆಲ್ಲಾ ಕೂಡಕೊಂಡು ಶೇಂಗಾ ಬಿತ್ತಾತೇವ್ರಿ. ಕೂಡಿ ಬಾಳಿದರ ಸ್ವರ್ಗ ಸುಖ. ಹೊಲದಲ್ಲಿ ಕಷ್ಟ ಪಟ್ಟು ದುಡಿದರ ನಮಗ ಸುಖ ಸಿಗ್ತೈತ್ರಿ ಎಂದು ಹೇಳುವ ಮೂಲಕ ಕೃಷಿ ಕಾಯಕದ ಮೇಲಿನ ಆಸಕ್ತಿಯನ್ನು ಬಿಚ್ಚಿಟ್ಟರು.
ಸಮೀಪದ ಹೊಲದಲ್ಲಿ ಟ್ರ್ಯಾಕ್ಟರ್ ಸಹಾಯದಿಂದ ಸೋಯಾಬಿನ್ ಬಿತ್ತುತ್ತಿದ್ದ ಬಸ್ತವಾಡ ಗ್ರಾಮದ ರೈತ ಮಾರುತಿ ಪಾಟೀಲ್ ಮಾತನಾಡಿ, ಸದ್ಯಕ್ಕೆ ಉತ್ತಮ ಮಳೆಯಾಗಿ ಭೂಮಿ ಹಸಿ ಇದೆ. ಹಾಗಾಗಿ, ಬಿತ್ತನೆ ಮಾಡಿದ್ದೇವೆ. ಮುಂದೆಯೂ ಇದೇ ರೀತಿ ಮಳೆಯಾದರೆ ಉತ್ತಮ ಬೆಳೆ ನಿರೀಕ್ಷೆ ಇದೆ. ಕಳೆದ ವರ್ಷದಂತೆ ಮಳೆ ಕೈಕೊಟ್ಟರೆ ತುಂಬಾ ಸಮಸ್ಯೆ ಆಗುತ್ತದೆ. ಇನ್ನು ಮೇಯಿಸಲು ಆಗೋದಿಲ್ಲ ಎಂದು ಎತ್ತುಗಳನ್ನು ಮಾರಾಟಕ್ಕೆ ಕೊಟ್ಟಿದ್ದೇವೆ. ಕಳೆದ ನಾಲ್ಕು ವರ್ಷಗಳಿಂದ ಟ್ರ್ಯಾಕ್ಟರ್ ಸಹಾಯದಿಂದ ಬಿತ್ತುತ್ತಿದ್ದೇವೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಈವರೆಗೆ 19,800 ಹೆಕ್ಟೇರ್ ಹೆಸರು ಬಿತ್ತನೆಯಾಗಿದ್ದು, ಭತ್ತ 9200, ಗೋವಿನಜೋಳ 9,545, ತೊಗರಿ 4,950, ಉದ್ದು 4,758, ಸೋಯಾಬಿನ್ 21,310, ಹತ್ತಿ 2973, ಶೇಂಗಾ 300 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಇದನ್ನೂ ಓದಿ: ಹಾವೇರಿಯಲ್ಲಿ ಅಧಿಕ ದರಕ್ಕೆ ಗೊಬ್ಬರ ಮಾರಾಟ ಆರೋಪ: ಕ್ರಮ ಖಚಿತವೆಂದ ಅಧಿಕಾರಿಗಳು - Fertilizer High Price