ಹುಬ್ಬಳ್ಳಿ/ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳವಾರ ಹಾಗೂ ಬುಧವಾರ ರಾತ್ರಿ ಸುರಿದ ಮಳೆಗೆ ವಾಣಿಜ್ಯ ನಗರಿ ಹುಬ್ಬಳ್ಳಿ, ಧಾರವಾಡ ಹಾಗೂ ಗ್ರಾಮೀಣ ಭಾಗದಲ್ಲಿ ಜನರು ತತ್ತರಿಸಿದ್ದಾರೆ.
ಮಳೆಯಿಂದ ಅವಳಿ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾದರೆ, ಹಲವೆಡೆ ಅನ್ನದಾತರಿಗೆ ನಷ್ಟವುಂಟಾಗಿದೆ. ರಾತ್ರಿಯಿಡೀ ಸುರಿದ ಮಳೆಯಿಂದ ಜಮೀನುಗಳಿಗೆ ನೀರು ನುಗ್ಗಿ, ಕೆರೆಗಳಂತಾಗಿವೆ. ಇದರಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಹತ್ತಿ, ಈರುಳ್ಳಿ, ಮೆಣಸಿನಕಾಯಿ ಬೆಳೆಗಳು ನೀರಿನಲ್ಲಿ ನಿಂತಿವೆ. ಕೆಲವು ಕಡೆ ನೀರಿನ ಹೊಡೆತಕ್ಕೆ ಬೆಳೆದ ಬೆಳೆಗಳು ಕೊಚ್ಚಿ ಹೋಗಿವೆ. ಅದರಲ್ಲೂ ಮಳೆಯಿಂದ ಕುಂದಗೋಳ ಮತ್ತು ನವಲಗುಂದ ತಾಲೂಕಿನ ಅತಿಹೆಚ್ಚು ಬೆಳೆಗಳು ಹಾನಿಯಾಗಿದೆ.

ತುಂಬಿ ಹರಿಯುತ್ತಿರುವ ಹಳ್ಳಗಳು: ಇನ್ನೊಂದೆಡೆ, ಹಲವು ಹಳ್ಳಗಳು ತುಂಬಿ ಹರಿಯುತ್ತಿವೆ ನವಲಗುಂದ- ಬನಸವಾಸಿ ರಾಜ್ಯ ಹೆದ್ದಾರಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ಮುಕ್ಕಲ - ಹರಳಿಹೊಂಡ ನಡುವಿನ ಬೆಡ್ತಿ ಹಳ್ಳ ತುಂಬಿದು ಸಂಪರ್ಕ ಕಡಿತಗೊಂಡಿದೆ. ಮಳೆಯಿಂದ ರೈತಾಪಿ ವರ್ಗಕ್ಕೆ ಸಾಕಷ್ಟು ನಷ್ಟವಾಗಿದ್ದು, ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಬೆಳೆಹಾನಿಯಾದ ಸೂಕ್ತ ಪರಿಹಾರ ನೀಡಬೇಕು ಎಂದು ಗುಡೇನಕಟ್ಟಿ ಗ್ರಾಮದ ರೈತ ಬಸವರಾಜ್ ಯೊಗಪ್ಪನವರ್ ಒತ್ತಾಯಿಸಿದ್ದಾರೆ.

ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತ: ಧಾರವಾಡದ ಭಾವಿಕಟ್ಟಿ ಪ್ಲಾಟ್ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರ ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದ್ದು ನೀರು ಹೊರಹಾಕಲು ಸ್ಥಳೀಯರು ಹರಸಾಹಸ ಪಡುವಂತಾಗಿದೆ. ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದೆ. ಧಾರವಾಡ ತಾಲೂಕಿನ ಮನಸೂರ ಗ್ರಾಮದ ನಾಗಪ್ಪ ನೇಕಾರ ಎಂಬುವರ ಜಮೀನನಲ್ಲಿನ ಭತ್ತದ ಬೆಳೆ ಸಂಪೂರ್ಣ ನೆಲ ಕಚ್ಚಿದೆ. ಅಲ್ಲದೇ ಕವಲಗೇರಿ ಗ್ರಾಮದ ಜಮೀನವೊಂದರಲ್ಲಿ ಶೇಂಗಾ ಬೆಳೆ ಮಳೆ ನೀರಲ್ಲಿ ಹಾನಿಯಾಗಿದೆ.

ಧಾರವಾಡ ಹೊರವಲಯದ ರಸ್ತೆಯ ದೊಡ್ಡ ಹಳ್ಳ ತುಂಬಿ ಹರಿಯುತ್ತಿದ್ದು ಧಾರವಾಡ ಕವಲಗೇರಿ ಗ್ರಾಮದ ಸಂಚಾರ ಬಂದ್ ಆಗುವ ಸಾಧ್ಯತೆ ಕಂಡು ಬಂದಿದೆ. ಹಳ್ಳದ ನೀರು ರಸ್ತೆ ಹರಿಯುತ್ತಿದ್ದರು ಬೈಕ್ ಸವಾರರು ಭಯವಿಲ್ಲದೆ ಸಂಚರಿಸುತ್ತಿದ್ದಾರೆ.

ಮಳೆ ವಿಪತ್ತು ನಿರ್ವಹಣಾ ತಂಡ ಆಗಮನ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮಳೆಯಿಂದ ಹಲವು ಕಡೆ ನೀರು ಮನೆಗಳಿಗೆ ಹಾಗೂ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವತಿಯಿಂದ ನೇಮಿಸಲಾದ ಮಳೆ ವಿಪತ್ತು ನಿರ್ವಹಣಾ ತಂಡವು ಕಾರ್ಯಾಚರಣೆಗಿಳಿದಿದೆ.

ವಲಯ ಸಹಾಯಕ ಆಯುಕ್ತರಾದ ಶಂಕರ ಪಾಟೀಲ್, ಪ್ರಲ್ಲಾದ್ ರೆಡ್ಡಿ, ಅರುಣ್ ಜಮಖಂಡಿ ಇವರ ಮುಂದಾಳತ್ವದಲ್ಲಿ ತಕ್ಷಣ ತೊಂದರೆಗೀಡಾದ ಪ್ರದೇಶಗಳಿಗೆ ತೆರಳಿ ಕಾರ್ಯ ನಿರ್ವಹಿಸಿದೆ. ಈ ತಂಡವು ದೂರು ಬಂದ ಪ್ರದೇಶಗಳಿಗೆ ತಕ್ಷಣ ತೆರಳಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದು ನೀರು ನಾಲಾಗಳಲ್ಲಿ ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಬಹುಮಹಡಿ ಕಟ್ಟಡ ಹಾಗೂ ಮನೆಗಳಿಗೆ ನೀರು ನುಗ್ಗಿದಲ್ಲಿ ನೀರುಗಳನ್ನು ಹೊರಹಾಕಲು 18 ಸಕ್ಕಿಂಗ್ ಮಷೀನ್ಗಳು ಇದ್ದು ಇವುಗಳು24*7 ಕಾರ್ಯನಿರ್ವಹಿಸಲಿವೆ.
ವಾಟ್ಸ್ ಆ್ಯಪ್ ಮೂಲಕ ತಿಳಿಸಿ: ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ನೀರನ್ನು ಹೊರ ತೆಗೆಯಲು ವಲಯವಾರು 3 ಸಮರ್ಸಿಬಲ್ ಪಂಪ್ ಗಳ ವ್ಯವಸ್ಥೆ ಮಾಡಲಾಗಿದೆ. ತೊಂದರೆ ಕಂಡು ಬಂದಲ್ಲಿ ತಕ್ಷಣ 8277803778 ನಂಬರಿಗೆ ವಾಟ್ಸ್ ಆ್ಯಪ್ ಮೂಲಕ ಹಾಗೂ 08362213888, 08362213889 ಹಾಗೂ 08362213869 ನಂಬರಿಗೆ ಸಾರ್ವಜನಿಕರು ಕರೆ ಮಾಡಿ ಅಥವಾ mail ID hdmccontrolroom@gmail.comಗೆ mail ಮಾಡಿ ಮಾಹಿತಿ ನೀಡಬಹುದು. ತಕ್ಷಣ ವಿಪತ್ತು ನಿರ್ವಹಣಾ ತಂಡವು ಸ್ಥಳಕ್ಕೆ ಆಗಮಿಸಿ ಕಾರ್ಯನಿರ್ವಹಿಸಲಿದೆ ಎಂದು ಪಾಲಿಕೆಯ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.
ಭಾರಿ ಮಳೆಯಿಂದ ತೊಂದರೆಗೊಳಗಾದ ಪ್ರದೇಶಗಳಾದ ಗಣೇಶನಗರ, ನೇಕಾರ ನಗರ ಮಾದರ ಓಣಿಗಳಲ್ಲಿ ಮಳೆ ನೀರು ಮನೆ ಹಾಗೂ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿದ ಕಾರಣ ಭೇಟಿ ನೀಡಿದ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಭೇಟಿ ನೀಡಿ ಪರಿಶೀಲಿಸಿದರು. ನಿವಾಸಿಗಳ ಅಹವಾಲನ್ನು ಸ್ವೀಕರಿಸಿ ಸ್ಥಳದಲ್ಲಿ ಹಾಜರಿದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾರ್ವಜನಿಕರ ತೊಂದರೆಗಳಿಗೆ ಸ್ಪಂದಿಸುವಂತೆ ನಿರ್ದೇಶನ ನೀಡಿದರು.
ಮತ್ತೊಂದೆಡೆ ಶಾಸಕ ಮಹೇಶ್ ಟೆಂಗಿನಕಾಯಿ ಜೊತೆ ಕೇಶ್ವಾಪುರದಲ್ಲಿರುವ ಹಬೀಬ್ ಪ್ಲಾಜಾ ಎದರುಗಡೆ ಇರುವ ನಾಲಾಗೆ ಭೇಟಿ ನೀಡಿ ನಿವಾಸಿಗಳ ಅಹವಾಲುಗಳನ್ನು ಸ್ವೀಕರಿಸಿ, ಕೈಕೊಳ್ಳಬೇಕಾದ ಕಾಮಗಾರಿಗಳ ಕುರಿತು ಸ್ಥಳದಲ್ಲಿ ಹಾಜರಿದ್ದ ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಕಲಬುರಗಿ: ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿ - ಮೂವರು ಯುವಕರ ದುರ್ಮರಣ