ಉಡುಪಿ: ಅನಿವಾಸಿ ಭಾರತೀಯ, ತಾಲೂಕಿನ ವಕ್ವಾಡಿ ಮೂಲದ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ಮಾಲೀಕತ್ವದ ದುಬೈನ ಹೋಟೆಲೊಂದಕ್ಕೆ ಅಕೌಂಟೆಂಟ್ ಆಗಿ ಸೇರಿ 2.5 ಕೋಟಿಗೂ ಅಧಿಕ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಉಡುಪಿ ಸೆನ್ ಠಾಣೆ ಪೊಲೀಸರು ಮೈಸೂರು ಜಿಲ್ಲೆಯ ನಂಜನಗೂಡು ಬಳಿ ಬಂಧಿಸಿದ್ದಾರೆ.
ಬಾರ್ಕೂರು ಮೂಲದ ನಾಗೇಶ್ ಪೂಜಾರಿ (31) ಬಂಧಿತ ಆರೋಪಿ. ಈತನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆ ಹಿನ್ನೆಲೆ ಮೂರು ದಿನಗಳ ಕಾಲ (ಅ.16ರ ವರೆಗೆ) ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಆರೋಪಿ ಪಡೆದಿದ್ದ ಜಾಮೀನನ್ನು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಹಾಗೂ ರಾಜ್ಯ ಉಚ್ಚ ನ್ಯಾಯಾಲಯ ರದ್ದುಪಡಿಸಿದ್ದವು. ಈ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿದ್ದ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ: ದುಬೈನ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ಸಂಬಂಧಿತ ಹೋಟೆಲೊಂದರಲ್ಲಿ ಉದ್ಯೋಗಕ್ಕೆ ಸೇರಿದ್ದ ನಾಗೇಶ್ 2.5 ಕೋಟಿಗೂ ಅಧಿಕ ಹಣ ವಂಚಿಸಿದ ಆರೋಪಕ್ಕೆ ಗುರಿಯಾಗಿದ್ದ. ಹೋಟೆಲ್ ಮ್ಯಾನೇಜರ್ ಸುನೀಲ್ ಕುಮಾರ್ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 25 ಲಕ್ಷಕ್ಕೂ ಹೆಚ್ಚಿನ ಹಣ ಅವ್ಯವಹಾರದ ಬಗ್ಗೆ ತನಿಖೆಯಾದ್ದರಿಂದ ಉಡುಪಿ ಸೆನ್ ಠಾಣೆಗೆ ಪ್ರಕರಣ ವರ್ಗಾವಣೆಗೊಂಡಿತ್ತು.
ಆರೋಪಿ ನಾಗೇಶ್ ಹೈಕೋರ್ಟ್ನಲ್ಲಿ ಎಫ್ಐಆರ್ ಮೇಲಿನ ತನಿಖೆ ಸ್ಥಗಿತಗೊಳಿಸಲು ವಕೀಲರ ಮೂಲಕ ಅರ್ಜಿ ದಾಖಲಿಸಿದ್ದು, 2023ರ ಜುಲೈನಲ್ಲಿ ಆ ಅರ್ಜಿ ವಜಾಗೊಂಡಿತ್ತು. ಬಳಿಕ ಕುಂದಾಪುರದಲ್ಲಿರುವ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಅದನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಹೈಕೋರ್ಟ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶಗಳನ್ನು ಮರೆಮಾಚಿ ಬ್ರಹ್ಮಾವರದ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಶರಣಾಗಿ 2023ರ ಆಗಸ್ಟ್ ತಿಂಗಳಿನಲ್ಲಿ ಆರೋಪಿ ಜಾಮೀನು ಪಡೆದುಕೊಂಡಿದ್ದ. ಸರ್ಕಾರ ಈ ಜಾಮೀನು ಪ್ರಶ್ನಿಸಿ ಪರಿಷ್ಕೃತ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆಯನ್ನು ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಕೈಗೊಂಡಿದ್ದು, ಅಲ್ಲಿಯೂ ಜೆಎಂಎಫ್ಸಿ ನ್ಯಾಯಾಲಯ ನೀಡಿದ ಜಾಮೀನು ರದ್ದುಗೊಳಿಸಿ ಆದೇಶ ನೀಡಲಾಗಿತ್ತು. ಈ ತೀರ್ಪಿನ ಬಳಿಕ ಆರೋಪಿ ತನ್ನ ಪರ ವಕೀಲರ ಮೂಲಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಇದರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶರಾದ ನಾಗಪ್ರಸನ್ನ ಅವರು ಜೆಎಂಎಫ್ಸಿ ನ್ಯಾಯಾಲಯ ನೀಡಿದ ಜಾಮೀನು ರದ್ದುಗೊಳಿಸಿದ್ದರು. ಫಾರ್ಚೂನ್ ಗ್ರೂಫ್ ಪರ ಹೈಕೋರ್ಟ್ ನ್ಯಾಯವಾದಿ ಪ್ರಸನ್ನ ಶೆಟ್ಟಿ ಕೆರೆಬೆಟ್ಟು ವಾದಿಸಿದ್ದರು.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ? ಕಳೆದ ಏಳೆಂಟು ವರ್ಷಗಳ ಹಿಂದೆ ಫಾರ್ಚ್ಯೂನ್ ಗ್ರೂಪ್ ಆಫ್ ಹೋಟೆಲ್ಸ್ ದುಬೈ ಮತ್ತು ಭಾರತದ ಆಡಳಿತ ನಿರ್ದೇಶಕ ವಿ. ಪ್ರವೀಣ್ ಕುಮಾರ್ ಶೆಟ್ಟಿ ಅವರು ನಡೆಸಿದ ಸಂದರ್ಶನದಲ್ಲಿ ಅಲ್ಲಿನ ಹೋಟೆಲ್ಗೆ ಅಕೌಂಟೆಂಟ್ ಆಗಿ ನಾಗೇಶ್ ಸೇರಿದ್ದ. 2022 ಮುಖ್ಯ ಅಕೌಂಟೆಂಟ್ ಆಗಿ ಬಡ್ತಿಯಾಗಿದ್ದ. 2023ರಲ್ಲಿ ತನ್ನ ಮದುವೆಯ ಹಿನ್ನೆಲೆ ದುಬೈನಿಂದ ಊರಿಗೆ 3 ತಿಂಗಳ ರಜೆಗೆ ಬಂದಿದ್ದ. ಪಡೆದ ರಜೆ ಮುಗಿಯುವ ಹೊತ್ತಿಗೆ ಇನ್ನೂ 15 ದಿನಗಳ ಹೆಚ್ಚುವರಿ ರಜೆ ಕೋರಿದ್ದ. ಆದರೆ, ದುಬೈನಲ್ಲಿ ಕೆಲಸದ ಒತ್ತಡ ಹೆಚ್ಚಿದ್ದರಿಂದ ರಜೆ ನಿರಾಕರಿಸಲಾಗಿತ್ತು. ನಂತರ ಆರೋಪಿ ಇಮೇಲ್ ಮುಖಾಂತರ ತನ್ನ ರಾಜೀನಾಮೆ ಪತ್ರವನ್ನು ಹೆಚ್ಆರ್ಗೆ ಕಳುಹಿಸಿದ್ದ.
ದಿಢೀರ್ ರಾಜೀನಾಮೆ, ಅಸಹಜ ವರ್ತನೆಯಿಂದ ಅನುಮಾನಗೊಂಡು ಆತ ಕೆಲಸ ಮಾಡಿಕೊಂಡಿದ್ದ ಹೋಟೆಲ್‌ನ ಲೆಕ್ಕ ಪುಸ್ತಕಗಳನ್ನು ಹಾಗೂ ಕೆಲವು ನಗದು ವಹಿವಾಟುಗಳನ್ನು ಬ್ಯಾಂಕ್ ಸ್ಟೇಟ್ಮೆಂಟ್ ಜೊತೆ ಪರಿಶೀಲಿಸಿದಾಗ ಅಲ್ಲಿ ಆದಾಯದ ಹೊರತಾಗಿಯೂ ದೊಡ್ಡ ಪ್ರಮಾಣದ ನಗದು ಕಾಣೆಯಾಗಿದ್ದು ತಿಳಿದುಬಂದಿತ್ತು. ಹೋಟೆಲ್‌ನ ಆದಾಯದಲ್ಲಿ ಬಂದ ನಗದನ್ನು ಹೋಟೆಲ್‌ನ ಬ್ಯಾಂಕ್ ಖಾತೆಗೆ ಜಮೆ ಮಾಡದೆ ಭಾರತದ ತನ್ನ ವೈಯುಕ್ತಿಕ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಲ್ಲದೆ ಮ್ಯಾನೇಜ್ಮೆಂಟ್ ನಿಯಮಿತ ಹಸ್ತಕ್ಷೇಪವನ್ನು ತಪ್ಪಿಸಲು ನಗದು ವಹಿವಾಟುಗಳಿಗೆ ನಕಲಿ ಜನರಲ್ ನಮೂದುಗಳನ್ನು ಸೃಷ್ಟಿಸಿದ್ದು ಖಾತ್ರಿಯಾಗಿತ್ತು. ಅಲ್ಲದೇ ಹಂತಹಂತವಾಗಿ ಆರೋಪಿ ಭಾರತದ ರೂಪಾಯಿಗಳಲ್ಲಿ 2 ಕೋಟಿ 55 ಲಕ್ಷದ 63 ಸಾವಿರ ಹಣ ವಂಚಿಸಿದ್ದು ಬೆಳಕಿಗೆ ಬಂದಿತ್ತು. ಕೋಟ್ಯಂತರ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಎರಡು ಬಾರಿ ಜಾಮೀನು ರದ್ದುಗೊಂಡಾಗಲೂ ಪೊಲೀಸರಿಗೆ ಸಿಗದೆ ಆರೋಪಿ ತಲೆಮರೆಸಿಕೊಂಡಿದ್ದ.
ವಿಶೇಷ ಸರ್ಕಾರಿ ಅಭಿಯೋಜಕರ ನೇಮಕ: ನ್ಯಾಯಾಲಯದಲ್ಲಿ ಪ್ರಕರಣ ನಡೆಸಲು ವಿಶೇಷ ಸರ್ಕಾರಿ ಅಭಿಯೋಜಕರಾಗಿ ಮಂಗಳೂರು ವಲಯದ ಕಾನೂನು ಅಧಿಕಾರಿ (ಹಿರಿಯ) ಶಿವಪ್ರಸಾದ್ ಆಳ್ವ ಅವರನ್ನು ನೇಮಿಸಿ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿತ್ತು.
ಇದನ್ನೂ ಓದಿ: ಚೀಟಿ ವ್ಯವಹಾರದಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ ; ದಂಪತಿ ಸೇರಿ ಮೂವರ ಬಂಧನ - Fraud case