ಬೆಂಗಳೂರು: ಮಾದಕ ವಸ್ತುಗಳ ಸರಬರಾಜುದಾರರ ವಿರುದ್ಧ ನಿರಂತರ ಸಮರ ಮುಂದುವರೆಸಿರುವ ಸಿಸಿಬಿ ಪೊಲೀಸರು ಕಳೆದೊಂದು ವಾರದ ಅವಧಿಯಲ್ಲಿ ಮೂವರು ವಿದೇಶಿಯರು ಸೇರಿದಂತೆ ಒಟ್ಟು ಎಂಟು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಒಟ್ಟು 2.74 ಕೋಟಿ ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಮೂವರು ಆಫ್ರಿಕನ್ ಪ್ರಜೆಗಳಿಂದ 50 ಲಕ್ಷ ಮೌಲ್ಯದ ಎಂಡಿಎಂಎ ಕ್ರಿಸ್ಟಲ್, ಕೊಕೇನ್ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ನೈಜೀರಿಯಾದ ಅಗಸ್ಟಿನ್ ನೊನ್ಸೊ (39), ಯುಡೆರಿಕೆ ಫಿಡೆಲಿಸ್ (34) ಹಾಗೂ ಎರಿಮ್ಹೆನ್ ಸ್ಮಾರ್ಟ್ (40) ಬಂಧಿತರು.
![CCB police Drugs seized foreigners arrested Bengaluru](https://etvbharatimages.akamaized.net/etvbharat/prod-images/17-05-2024/kn-bng-01-drug-arrest-7211560_17052024130358_1705f_1715931238_458.jpg)
ಬ್ಯುಸಿನೆಸ್ ಹಾಗು ಮೆಡಿಕಲ್ ವೀಸಾ ಪಡೆದು ಭಾರತಕ್ಕೆ ಬಂದಿದ್ದ ಇವರು ಬೆಂಗಳೂರಿನಲ್ಲಿ ವಾಸವಾಗಿದ್ದರು. ಮೋಜಿನ ಜೀವನ ನಡೆಸಲು ಮತ್ತು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಗೋವಾ, ಮುಂಬೈ ಮತ್ತು ದೆಹಲಿಯಲ್ಲಿ ವಾಸವಾಗಿರುವ ಇತರೆ ನೈಜೀರಿಯಾ ಪ್ರಜೆಗಳಿಂದ ಮಾದಕ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಬಂಧಿತರ ಪೈಕಿ ಓರ್ವನ ವಿರುದ್ಧ ಸೈಬರ್ ವಂಚನೆ ಹಾಗು ಐಟಿ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ. ಅಲ್ಲದೇ ವಿವಿ ಪುರಂ, ಕಾಟನ್ ಪೇಟೆ ಹಾಗು ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಿಂದ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಿಂದ ಗಾಂಜಾ, ಎಲ್.ಎಸ್.ಡಿ, ಚರಸ್, ಹ್ಯಾಶಿಶ್ ಆಯಿಲ್ ಸೇರಿದಂತೆ ಒಟ್ಟು 2.74 ಕೋಟಿ ಮೌಲ್ಯದ ಮಾದಕ ವಸ್ತುಗಳು, ಮೊಬೈಲ್ ಫೋನ್‌ಗಳು, ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: 2 ಕೋಟಿ ವಾಹನಗಳ ಪೈಕಿ 37 ಲಕ್ಷ HSRP ಅಳವಡಿಕೆ; ಉಳಿದವರು ಇಷ್ಟು ದಂಡ ಕಟ್ಟಲು ಸಿದ್ಧರಾಗಿ! - HSRP