ಬೆಂಗಳೂರು: ಮಕ್ಕಳು ಸೇವಿಸುವ ಸೆರಲ್ಯಾಕ್ ಪ್ಯಾಕೆಟ್ಗಳಲ್ಲಿ ಡ್ರಗ್ಸ್ ಇಟ್ಟು ಮುಂಬೈನಿಂದ ಬೆಂಗಳೂರಿಗೆ ಸಾಗಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಚುಕುದ್ದೀನ್ ಬಂಧಿತ ಆರೋಪಿ. ಈತನಿಂದ 6 ಕೋಟಿ ರೂ ಮೌಲ್ಯದ 4 ಕೆಜಿ ಮೌಲ್ಯದ ಎಂಡಿಎಂ ಕ್ರಿಸ್ಟೆಲ್ ವಶಪಡಿಸಿಕೊಳ್ಳಲಾಗಿದೆ.
ಈತ ಬಿಸ್ನೆಸ್ ವೀಸಾದಡಿ ಕೆಲ ವರ್ಷಗಳ ಹಿಂದೆ ಭಾರತಕ್ಕೆ ಬಂದು ತಮಿಳಿನಾಡಿನ ಕೊಯಮತ್ತೂರಿನಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ. ವ್ಯಾಪಾರದಲ್ಲಿ ನಷ್ಟವಾಗಿದ್ದರಿಂದ ಬೆಂಗಳೂರಿಗೆ ಬಂದು ತನ್ನ ಸಹಚರರೊಂದಿಗೆ ನೆಲೆಸಿದ್ದ. ಆರ್ಥಿಕ ಸಂಕಷ್ಟದಲ್ಲಿದ್ದ ಆರೋಪಿಯು ಅಕ್ರಮವಾಗಿ ಹಣ ಸಂಪಾದನೆ ಮಾಡಲು ಅಡ್ಡ ದಾರಿ ಹಿಡಿದಿದ್ದ. ಸ್ನೇಹಿತರಿಂದ ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದ. ತದನಂತರ ಮುಂಬೈನಲ್ಲಿರುವ ಸ್ನೇಹಿತರ ಮೂಲಕ ಸೆರಲ್ಯಾಕ್ ಸೇರಿದಂತೆ ವಿವಿಧ ಪ್ಯಾಕೆಟ್ಗಳಲ್ಲಿ ಎಂಡಿಎಂಎ ಇಟ್ಟು ಬೆಂಗಳೂರಿಗೆ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ. ನಂತರ ನಗರದಲ್ಲಿ ಒಂದು ಗ್ರಾಂಗೆ 10 ರಿಂದ 15 ಸಾವಿರದವರೆಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿ ಒಣಗಲು ಹಾಕಿದ್ದ ಡ್ರಗ್ಸ್: ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟದಾಸನಪುರ ಮನೆಯಲ್ಲಿ ಆರೋಪಿಯು ಸುಮಾರು ನಾಲ್ಕು ಕೆಜಿ ಡ್ರಗ್ಸ್ನ ಮನೆಯಲ್ಲಿ ಗೋದಿ ಹಿಟ್ಟು ಒಣಗಿಸುವ ರೀತಿ ಒಣಹಾಕಿದ್ದ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಡ್ರಗ್ ಪೆಡ್ಲರ್ ಅರೆಸ್ಟ್ ಮಾಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.