ದಾವಣಗೆರೆ: ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ಆಟೋದಲ್ಲಿ ಬಿಟ್ಟು ಹೋದ ಪ್ರಯಾಣಿಕರಿಗೆ, ಅದನ್ನು ಸುರಕ್ಷಿತವಾಗಿ ತಲುಪಿಸುವ ಮೂಲಕ ಆಟೋ ಚಾಲಕ ಪ್ರಮಾಣಿಕತೆ ಮೆರೆದಿದ್ದಾರೆ.
ಏನಿದು ಘಟನೆ: ನವೀನ್ ತಾಜ್ ಎಂಬ ಮಹಿಳೆ ಆಗಸ್ಟ್ 10ರಂದು ನಗರದ ಭಾಷಾನಗರ ಆರ್ಚ್ನಿಂದ ಇಸ್ಲಾಂಪೇಟೆಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಸರಿ ಸುಮಾರು 6 ಲಕ್ಷ ಮೌಲ್ಯದ 100 ಗ್ರಾಂ ಚಿನ್ನವನ್ನು ಹೊಂದಿದ್ದ ವ್ಯಾನಿಟಿ ಬ್ಯಾಗ್ ಅನ್ನು ಆಟೋದಲ್ಲಿ ಬಿಟ್ಟು ಇಳಿದಿದ್ದರು.
ಆಟೋ ಇಳಿದ ಬಳಿಕ ವ್ಯಾನಿಟಿ ಬ್ಯಾಗ್ ಮರೆತಿರುವುದು ಅರಿವಿಗೆ ಬಂದಿದೆ. ಈ ವೇಳೆ ತಕ್ಷಣ ತಡಮಾಡದೇ ಬಸವನಗರ ಪೊಲೀಸ್ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬ್ಯಾಂಕ್ನಲ್ಲಿ ಚಿನ್ನದ ಒಂದು ನೆಕ್ಲೆಸ್, ಬಂಗಾರದ ಒಂದು ಲಾಂಗ್ ನೆಕ್ಲೆಸ್, ಒಂದು ಜೊತೆ ಜುಮ್ಕಿ,, 3 ಉಂಗುರಗಳಿದ್ದವು. ಜೊತೆಗೆ 150 ಗ್ರಾಂ ಬೆಳ್ಳಿಯ ಸೊಂಟದ ಚೈನ್ ಕೂಡ ಇತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ದೂರು ದಾಖಲಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಬಸವನಗರ ಠಾಣೆಯ ಸಿಬ್ಬಂದಿ ಆಟೋ ಪತ್ತೆಗೆ ಸಿಬ್ಬಂದಿಯನ್ನು ನೇಮಕ ಮಾಡಿದರು.
ನವೀನತಾಜ್ ರವರು ನೀಡಿದ ಮಾಹಿತಿ ಮೇರೆಗೆ ಆಟೋ ಹತ್ತಿದ ಮತ್ತು ಇಳಿದ ಸ್ಥಳದ ಬಳಿ ಇರುವ ಸಾರ್ವಜನಿಕರ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸಿ ಆಟೋ ಪತ್ತೆ ಮಾಡಲಾಗಿದೆ. KA17AA 5789 ನೋಂದಣಿಯ ಆಟೋ ಚಾಲಕ ದಸ್ತಗಿರಿ ಅಲಿಯಾಸ್ ಸದ್ದಾಂ ಅವರದು ಎಂದು ತಿಳಿದು ಬಂದಿದೆ. ತಕ್ಷಣಕ್ಕೆ ಆಟೋ ಚಾಲಕ ದಸ್ತಗಿರಿ ಅವರು ಠಾಣೆಗೆ ಕರೆಸಿ ಈ ಕುರಿತು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಚಾಲಕ ವ್ಯಾನಿಟಿ ಬ್ಯಾಗ್ ಬಿಟ್ಟು ಹೋದ ಹಿನ್ನಲೆ ಅದನ್ನು ಸುರಕ್ಷಿತವಾಗಿರಿಸಿದ್ದು, ಅದರಲ್ಲಿದ್ದ ಒಡವೆಗಳ ಸಮೇತ ಬ್ಯಾಗ್ ಅನ್ನು ನವೀನ್ ತಾಜ್ ಅವರಿಗೆ ಮರಳಿಸಿ, ಪ್ರಮಾಣಿಕತೆ ಮೆರೆದಿದ್ದಾರೆ.
ಆಟೋ ಚಾಲಕರ ಈ ನಿಷ್ಠೆಗೆ ಪ್ರಯಾಣಿಕ ಮಹಿಳೆ ಮತ್ತು ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಫೋನ್ ಪೇ ಹೆಸರಲ್ಲಿ ನಕಲಿ ಕರೆ: ರಿವ್ಯೂ ನೀಡಲು ಹೋಗಿ ಲಕ್ಷ - ಲಕ್ಷ ಹಣ ಕಳೆದುಕೊಂಡ ಯುವಕ