ಬೆಂಗಳೂರು: ರಾತ್ರಿ ವೇಳೆ ಮಲಗಿದ್ದ ವ್ಯಕ್ತಿಯನ್ನು ಗಮನಿಸದೆ, ಆತನ ಮೇಲೆ ಬಸ್ ಹತ್ತಿಸಿ ಸಾವಿಗೆ ಕಾರಣನಾಗಿದ್ದ ಚಾಲಕನನ್ನು ನಗರದ ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿವೇಕ್ ಬಂಧಿತ ಚಾಲಕ. ಶ್ರೀನಿವಾಸಯ್ಯ ಮೃತ ವ್ಯಕ್ತಿ. ಮಳವಳ್ಳಿ ಮೂಲದ ವಿವೇಕ್ ದೊಡ್ಡಬಳ್ಳಾಪುರದಲ್ಲಿರುವ ಶ್ರೀ ಟ್ರಾವೆಲ್ಸ್ ಕಂಪನಿಯ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಂಪನಿ ಉದ್ಯೋಗಿಗಳನ್ನು ಡ್ರಾಪ್ ಅಂಡ್ ಪಿಕಪ್ ಮಾಡುತ್ತಿದ್ದ. ಇದೇ ತಿಂಗಳು 5ರ ರಾತ್ರಿ ಕಾಮಾಕ್ಷಿಪಾಳ್ಯ ಬಸ್ ನಿಲ್ದಾಣ ಬಳಿ ಬಸ್ ನಿಲ್ಲಿಸಿದ್ದ. ಅದೇ ಬಸ್ನಲ್ಲಿ ರಾತ್ರಿ ಮಲಗಿದ್ದ.
ಮಾರನೇ ದಿನ ಮುಂಜಾನೆ 6 ಗಂಟೆ ಸುಮಾರಿಗೆ ಎದ್ದು, ನೇರವಾಗಿ ಬಸ್ ಚಾಲನೆ ಮಾಡಿದ್ದ. ನಿಲ್ಲಿಸಿದ್ದ ಬಸ್ ಪಕ್ಕದಲ್ಲಿ ಮಲಗಿದ್ದ ಶ್ರೀನಿವಾಸಯ್ಯ ನಿದ್ರೆ ಮಂಪರಿನಲ್ಲಿ ಚಕ್ರದ ಕೆಳಗೆ ಹೊರಳಡಿದ್ದನ್ನು ಗಮನಿಸದೆ, ವಿವೇಕ್ ಬಸ್ ಚಲಾಯಿಸಿದ ಪರಿಣಾಮ ತಲೆ ಮೇಲೆ ಚಕ್ರ ಹರಿದು ಶ್ರೀನಿವಾಸಯ್ಯ ಸಾವನ್ನಪ್ಪಿದ್ದರು. ಅಪಘಾತವೆಸಗಿರುವ ಬಗ್ಗೆ ಚಾಲಕನ ಗಮನಕ್ಕೆ ಬಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಳಿಕ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಸುತ್ತಮುತ್ತಲಿನ 25ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ವಿವೇಕ್ ಬಸ್ ಚಾಲನೆ ಮಾಡಿರುವುದು ಕಂಡುಬಂದಿತ್ತು. ಬಸ್ ನೋಂದಣಿ ಸಂಖ್ಯೆ ಆಧರಿಸಿ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪ್ಲೈಓವರ್ ಕಾಮಗಾರಿ ವೇಳೆ ತಲೆಗೆ ಕಬ್ಬಿಣದ ರಾಡ್ ಬಿದ್ದು ASIಗೆ ಗಂಭೀರ ಗಾಯ