ಬೆಳಗಾವಿ : ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ, ರಾಜ್ಯಸಭಾ ಮಾಜಿ ಸದಸ್ಯ ಡಾ. ಪ್ರಭಾಕರ ಕೋರೆ ಅಯೋಧ್ಯೆಯ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಇಂದು ಹುಬ್ಬಳಿಯಿಂದ ವಿಶೇಷ ವಿಮಾನದ ಮೂಲಕ ತೆರಳಿದರು.
ಅಯೋಧ್ಯೆಯ ಶ್ರೀರಾಮ ಮಂದಿರ ಟ್ರಸ್ಟ್ ಡಾ. ಕೋರೆ ಅವರಿಗೆ ಆಹ್ವಾನ ನೀಡಿದ್ದು, ಸಮಾರಂಭದಲ್ಲಿ ಭಾಗಿಯಾಗುತ್ತಿದ್ದಾರೆ. ಹುಬ್ಬಳ್ಳಿಯಿಂದ ವಿಶೇಷ ವಿಮಾನದ ಮೂಲಕ ಕೆಎಲ್ಇ ಸಂಸ್ಥೆಯ ನಿರ್ದೇಶಕರಾದ ಶಂಕರಣ್ಣ ಮುನವಳ್ಳಿ, ಸ್ವರ್ಣ ಗ್ರೂಪ್ನ ಅಧ್ಯಕ್ಷರಾದ ವಿಎಸ್ ವಿ ಪ್ರಸಾದ ಅವರು ಸೇರಿದಂತೆ ಸುಮಾರು 8 ಜನರ ತಂಡವು ಪ್ರಯಾಣ ಬೆಳೆಸಿತು.
ಈ ವೇಳೆ ಮಾತನಾಡಿದ ಡಾ. ಪ್ರಭಾಕರ ಕೋರೆ ಅವರು, ನಾಳೆಯ ದಿನ ಜೀವನದಲ್ಲಿ ಅತ್ಯಂತ ಸುದಿನ. ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ಕಣ್ತುಂಬಿಕೊಳ್ಳುತ್ತಿದ್ದೇವೆ. ಸುಮಾರು ಮೂರು ದಶಕಗಳ ಕಾಲ ಮಂದಿರ ನಿರ್ಮಾಣ ಹಾಗೂ ಶ್ರೀರಾಮನ ದರ್ಶನಕ್ಕಾಗಿ ಜನ ಕಾಯ್ದು ಕುಳಿತಿದ್ದರು. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನ ದರ್ಶನಕ್ಕೆ ಅವಕಾಶ ಮಾಡಿಕೊಟ್ಟು ಕಾಯುವುದರಿಂದ ಮುಕ್ತಿ ನೀಡಿದ್ದಾರೆ ಎಂದರು. ಬೆಳಗಾವಿ ಜಿಲ್ಲೆಯಿಂದ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕಿ ಶಶಿಕಲಾ ಜೊಲ್ಲೆ ಕೂಡ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ.
ರಾಮನನ್ನು ಕಾಣಲು ಅಯೋಧ್ಯೆಗೆ ಹೊರಟ ರಾಮಭಕ್ತರು (ಪ್ರತ್ಯೇಕ ಸುದ್ದಿ) : ವಾಣಿಜ್ಯನಗರಿ ಹುಬ್ಬಳ್ಳಿಗೂ ರಾಮ ಜನ್ಮಭೂಮಿ ಅಯೋಧ್ಯೆಗೂ ಅದೇನೋ ಅವಿನಾಭಾವ ಸಂಬಂಧವಿದೆ. ಇದಕ್ಕೆ ಸಾಕ್ಷಿ ಎಂಬುವಂತೆ ಹಲವಾರು ಕರಸೇವಕರು, ಕಲಾವಿದರು ಹಾಗೂ ಕುಶಲಕರ್ಮಿಗಳು ಸಾಕಷ್ಟು ಸೇವೆಯನ್ನು ಸಲ್ಲಿಸಿದ್ದಾರೆ. ಈ ನಿಟ್ಟಿನಲ್ಲಿ ರಾಮನನ್ನು ಕಾಣಲು ರಾಮಭಕ್ತರು ಹುಬ್ಬಳ್ಳಿಯಿಂದ ವಿಶೇಷ ವಿಮಾನದ ಮೂಲಕ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ.
ಸುಮಾರು ದಶಕಗಳ ಹೋರಾಟದ ಫಲವಾಗಿ ರಾಮಮಂದಿರ ನಿರ್ಮಾಣವಾಗಿದ್ದು, ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಭಾಗವಹಿಸುತ್ತಿರುವುದು ನಮ್ಮ ಸೌಭಾಗ್ಯ ಅಂತಾರೆ ರಾಮಭಕ್ತರು.
ಇನ್ನು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿಯೇ ಹೆಚ್ಚಾಗಿ ತೊಡಗಿಸಿಕೊಳ್ಳುವ ಡಾ. ವಿ. ಎಸ್ ವಿ ಪ್ರಸಾದ ಅವರು ಮೊನ್ನೆಯಷ್ಟೇ ಶಬರಿಗಿರಿವಾಸ ಅಯ್ಯಪ್ಪನ ದರ್ಶನ ಪಡೆದು ಬಂದ ಬೆನ್ನಲ್ಲೇ ಈಗ ಅಯೋಧ್ಯೆಗಿರಿಯ ರಾಮನನ್ನು ಕಾಣಲು ಹೊರಟಿದ್ದಾರೆ. ಹುಬ್ಬಳ್ಳಿಯಿಂದ ಬೆಳಗ್ಗೆ 11ಕ್ಕೆ ಹೊರಡುವ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿದ ರಾಮಭಕ್ತರು ವಿಮಾನ ನಿಲ್ದಾಣದ ಎದುರು ರಾಮನಿಗೆ ಭಕ್ತಿ ಪೂರ್ವಕವಾಗಿ ನಮನ ಸಲ್ಲಿಸಿ, ಪ್ರಯಾಣ ಬೆಳೆಸಿದ್ದಾರೆ. ಕುಟುಂಬಸ್ಥರು ಹಾಗೂ ಸಾರ್ವಜನಿಕರು ಬೀಳ್ಕೊಡುಗೆ ನೀಡುವ ಮೂಲಕ ಪ್ರಯಾಣಕ್ಕೆ ಶುಭ ಹಾರೈಸಿದರು.
''500 ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದ್ದು, ಈಗ ಇಂತಹದೊಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ಸೌಭಾಗ್ಯ'' ಅಂತಾರೇ ಡಾ. ವಿ.ಎಸ್.ವಿ ಪ್ರಸಾದ.
ದೀರ್ಘ ದಂಡ ನಮಸ್ಕಾರದ ಮೂಲಕ ಹರಕೆ ತೀರಿಸಿದ ಭಕ್ತರು: ಅಯೋಧ್ಯೆಯ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಶ್ರೀರಾಮಸೇನಾ ಕಾರ್ಯಕರ್ತರು ವಿಭಿನ್ನವಾಗಿ ಹರಕೆ ತೀರಿಸಿದ್ದಾರೆ.
ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಹರಕೆ ಹೊತ್ತಿದ್ದ ಕಾರ್ಯಕರ್ತರು, ಹುಬ್ಬಳ್ಳಿಯ ದಾಜಿಬಾನ ಪೇಟೆಯ ತುಳಜಭವಾನಿ ದೇವಸ್ಥಾನದಿಂದ ಗವಳಿ ಗಲ್ಲಿಯ ರಾಮಮಂದಿರ ದೇವಸ್ಥಾನದವರೆಗೂ ದೀರ್ಘ ದಂಡ ನಮಸ್ಕಾರ ಹಾಕಿದರು.
ಇನ್ನು ಜೈ ಶ್ರೀರಾಮ್ ಘೋಷಣೆಯೊಂದಿಗೆ ದೀರ್ಘ ದಂಡ ನಮಸ್ಕಾರ ಹಾಕಿದ ಕಾರ್ಯಕರ್ತರು, ರಾಮನ ಹಾಡಿಗೆ ಹೆಜ್ಜೆ ಹಾಕಿದರು. ಅಯೋಧ್ಯೆಯಲ್ಲಿ ದೇವಸ್ಥಾನವಾಗಲಿ ಎಂದು ಹರಕೆ ಹೊತ್ತಿದ್ದೆವು. ಅದರ ಪ್ರಕಾರ ದೀರ್ಘ ದಂಡ ನಮಸ್ಕಾರ ಮಾಡಿ ಹರಕೆ ತೀರಿಸಿದ್ದೇವೆ. ರಾಮನ ಪ್ರತಿಷ್ಠಾಪನೆ ವೇಳೆ ಧಾರವಾಡ ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಿರುವುದಾಗಿ ತಿಳಿಸಿದ್ದಾರೆ.
ಕೇಸರಿಮಯವಾದ ಹುಬ್ಬಳ್ಳಿ : ಶ್ರೀರಾಮಲಲ್ಲನ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸಂಭ್ರಮ ಮನೆ ಮಾಡಿದೆ. ಹೂಬಳ್ಳಿಯಂತಿರುವ ಹುಬ್ಬಳ್ಳಿ ಈಗ ಕೇಸರಿಮಯವಾಗಿದೆ. ಎಲ್ಲೆಡೆ ರಾರಾಜಿಸುತ್ತಿರುವ ಬ್ಯಾನರ್, ಬಂಟಿಂಗ್, ಫ್ಲೆಕ್ಸ್, ಹನುಮ, ರಾಮ ಧ್ವಜಗಳ ಜೊತೆ ರಸ್ತೆಗಳು ಸಂಪೂರ್ಣ ಕೇಸರಿಮಯವಾಗಿವೆ.
ಪ್ರಮುಖ ರಸ್ತೆಗಳು, ಮನೆಗಳು, ಅಂಗಡಿಗಳ ಮೇಲೆ ರಾರಾಜಿಸುತ್ತಿರೋ ಕೇಸರಿ ಧ್ವಜಗಳು ಒಂದಡೆಯಾದರೆ, ಅಲಂಕಾರದಲ್ಲಿ ತೊಡಗಿಕೊಂಡ ಜನ ಮತ್ತೊಂದೆಡೆ. ಹೀಗೆ ಹತ್ತು ಹಲವು ವಿನೂತನ ಪ್ರಯೋಗದ ಮೂಲಕ ಹುಬ್ಬಳ್ಳಿ ಜನರ ಸಂಭ್ರಮ ಮುಗಿಲು ಮುಟ್ಟಿದೆ.
ಇದನ್ನೂ ಓದಿ : ಅಯೋಧ್ಯೆಗೂ ಬಾಗಲಕೋಟೆಗೂ ಇದೆ ನಂಟು: ಸೀತಿಮನಿ ಗ್ರಾಮದಲ್ಲಿದೆ ದೇಶದ ಏಕೈಕ ಸೀತಾಮಾತೆಯ ದೇವಸ್ಥಾನ