ಮೈಸೂರು: ಮಾನವ ಹಾಗೂ ಆನೆ ಸಂಘರ್ಷಕ್ಕೆ ಕಾರಣವೇನು? ಆನೆಗಳ ಜೀವನ ಶೈಲಿ ಹೇಗಿರುತ್ತದೆ?. ಭಾರತದಲ್ಲಿ ಆನೆಗಳ ದಾಳಿಗೆ ಒಂದು ವರ್ಷಕ್ಕೆ ಎಷ್ಟು ಜನ ಸಾವನ್ನಪ್ಪುತ್ತಾರೆ ಹಾಗೂ ವಿಶ್ವದಲ್ಲಿ ಅತಿ ಹೆಚ್ಚು ಆನೆಗಳಿರುವ ದೇಶ ಯಾವುದು? ಆ ಮಾನವ ಮತ್ತು ಆನೆ ಸಂರ್ಘಷಕ್ಕೆ ಆನೆ ಕಾರಿಡಾರ್ ಯೋಜನೆಯಿಂದ ಪರಿಹಾರ ಹೇಗಾಗುತ್ತದೆ? ಎಂಬ ಬಗ್ಗೆ 'ಈಟಿವಿ ಭಾರತ್' ಜೊತೆ ಆನೆಗಳ ವಿಚಾರದಲ್ಲಿ ಸಂಶೋಧನೆ ಮಾಡಿರುವ ಡಾ.ಮೆಕಾಲೆ ಕಾರ್ಗೆ ಮಾತನಾಡಿದ್ದಾರೆ.
ಆಗಸ್ಟ್ 12 ವಿಶ್ವ ಆನೆ ದಿನ. 1986ರಲ್ಲಿ ಆನೆಯನ್ನು ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಸೇರಿಸಲಾಯಿತು. 1991-92ರಲ್ಲಿ ಎಲಿಫೆಂಟ್ ಪ್ರಾಜೆಕ್ಟ್ ಕೈಗೊಳ್ಳಲಾಗಿದ್ದು, ಆ ನಂತರ ಪ್ರತೀ ವರ್ಷ ಆಗಸ್ಟ್ 12ರಂದು ವಿಶ್ವ ಆನೆ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಸಮೀಕ್ಷೆಯ ಪ್ರಕಾರ, ರಾಜ್ಯದಲ್ಲಿ ಅಂದಾಜು 6 ಸಾವಿರಕ್ಕೂ ಹೆಚ್ಚು ಆನೆಗಳಿವೆ. ಪ್ರತಿನಿತ್ಯ ಆನೆಗಳು ಕಾಡಿನಲ್ಲಿ 125 ಕಿಲೋ ಮೀಟರ್ ಓಡಾಡಬಲ್ಲವು. ಸಾಮಾನ್ಯವಾಗಿ 50ಕ್ಕೂ ಹೆಚ್ಚು ಹೆಣ್ಣಾನೆಗಳು ಗುಂಪು ಗುಂಪಾಗಿ ವಾಸ ಮಾಡುತ್ತವೆ. ಒಂದು ಆನೆ ಪ್ರತಿನಿತ್ಯ 125 ಲೀಟರ್ ನೀರು ಕುಡಿಯುತ್ತದೆ. 150ಕ್ಕೂ ಹೆಚ್ಚು ಕೆ.ಜಿ ಆಹಾರ ತಿನ್ನುತ್ತದೆ. ಆನೆ ದೊಡ್ಡ ಪ್ರಾಣಿ. ದೊಡ್ಡ ಬ್ರೈನ್. ಆದರೆ ಜೀರ್ಣಶಕ್ತಿ ತುಂಬಾ ಕಡಿಮೆ. ಆದ್ದರಿಂದ ಅದು ಹಾಕುವ ಗೊಬ್ಬರದಲ್ಲಿ ತಾನು ತಿಂದ ಆಹಾರದ ಬೀಜಗಳು ಕಾಡಿನಲ್ಲಿ ಬಿದ್ದು, ಹಲವು ಕಡೆ ಕಾಡಿನ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದು ಮೆಕಾಲೆ ವಿವರಿಸಿದರು.
ಆನೆ ಗುಂಪು ಗುಂಪಾಗಿ ಜೀವಿಸುತ್ತವೆ. ಮುಖ್ಯವಾಗಿ ತಾಯಿ ಆನೆ ಮರಿಯಾನೆಗಳಿಗೆ ಎಲ್ಲಾ ವಿಚಾರಗಳನ್ನು ಕಲಿಸುತ್ತದೆ. ಆನೆಗಳು ಗುಂಪಿನಲ್ಲಿ ವಾಸಿಸುವುದರಿಂದ ಇತ್ತೀಚೆಗೆ ಮಾನವ ಮತ್ತು ಆನೆಗಳ ಸಂಘರ್ಷಗಳು ಏರ್ಪಡುತ್ತಿವೆ. ಮುಖ್ಯವಾಗಿ ನಾಗರೀಕತೆ, ನಗರೀಕರಣ, ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ಭೂಮಿ ಒತ್ತುವರಿ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಕೆಲವು ಜನರು ಅರಣ್ಯ ಭೂಮಿ ಪಕ್ಕದಲ್ಲೇ ಆರ್ಥಿಕ ಬೆಳೆ ಬೆಳೆಯುತ್ತಿದ್ದಾರೆ. ಹೀಗಾಗಿ ಆಹಾರ ಅರಸಿ ಕಾಡಿನಿಂದ ನಾಡಿಗೆ ಆನೆಗಳು ಬಂದಾಗ ಸಂಘರ್ಷಗಳು ನಡೆಯುತ್ತವೆ ಎಂದಿದ್ದಾರೆ.
ಭಾರತದಲ್ಲಿ ಒಂದು ವರ್ಷಕ್ಕೆ 400 ಜನ ಸಾವು: ಒಂದು ವರ್ಷಕ್ಕೆ ಭಾರತದಲ್ಲಿ ಮಾನವ ಮತ್ತು ಆನೆ ಸಂಘರ್ಷದಲ್ಲಿ ನೂರು ಆನೆಗಳು ಸತ್ತರೆ, ಈ ಸಂಘರ್ಷದಲ್ಲಿ ಅಂದಾಜು 400 ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಸುಮಾರು 5 ಲಕ್ಷ ಜನರ ಬೆಳೆಗಳಿಗೆ ಹಾನಿಯಾಗುತ್ತದೆ ಎಂದು ಅವರು ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀನ್ಯಾದಲ್ಲಿ ಅತೀ ಹೆಚ್ಚು ಆನೆಗಳಿವೆ. ಮಾನವ ಮತ್ತು ಆನೆ ಸಂಘರ್ಷ ತಡೆಯಲು ಸುಮಾರು 125 ಆನೆಗಳನ್ನು ಸಾಕುತ್ತಾರೆ. ಆನೆಗಳು ತನಗೆ ಬೇಕಾದ ಆಹಾರ ಮತ್ತು ನೀರನ್ನು ಹುಡುಕುವಾಗ ಮಾನವರೊಂದಿಗೆ ಸಂಘರ್ಷ ನಡೆಯುತ್ತದೆ. ಆನೆಗಳ ಓಡಾಡುವ ಸ್ಥಳವನ್ನು ವಿಶೇಷವಾಗಿ ಹುಲಿ ಕಾರಿಡಾರ್ನಂತೆ ಆನೆ ಕಾರಿಡಾರ್ ಮಾಡಿದ್ದರೆ ಮಾನವ ಮತ್ತು ಆನೆ ಸಂಘರ್ಷ ತಪ್ಪಿಸಬಹುದು ಎಂದು ಸಲಹೆ ನೀಡಿದರು.
ಹೆಣ್ಣು ಆನೆ ಮರಿ ಹಾಕಿದಾಗ 10-12 ವರ್ಷ ಗಂಡು ಮರಿಯನ್ನು ಸಾಕಿ ಗುಂಪಿನಿಂದ ಹೊರಹಾಕುತ್ತದೆ. ಆದರೆ ಹೆಣ್ಣು ಮರಿಗಳನ್ನು ತಮ್ಮ ಜೊತೆಯಲ್ಲಿ ಇಟ್ಟುಕೊಳ್ಳುವ ಸಂಘಜೀವಿ ಆನೆಯಾಗಿದೆ. ಆನೆ ದೊಡ್ಡ ಪ್ರಾಣಿಯಾದರೂ ಬುದ್ದಿವಂತ, ಸೂಕ್ಷ್ಮ ಪ್ರಾಣಿಯಾಗಿದ್ದು, ತನ್ನ ಪಾಡಿಗೆ ಬಿಟ್ಟರೆ ಸಂಘರ್ಷ ತಪ್ಪಿಸಬಹುದು ಎಂದು ಆನೆ ತಜ್ಞೆ ತಿಳಿಸಿದರು.
ಇದನ್ನೂ ಓದಿ: ಮಾನವ-ಆನೆ ಸಂಘರ್ಷ ರಾಜ್ಯವೊಂದರ ಸಮಸ್ಯೆಯಲ್ಲ, ಜಾಗತಿಕ ಸಮಸ್ಯೆ: ಸಚಿವ ಈಶ್ವರ್ ಖಂಡ್ರೆ - Minister Ishwar Khandre