ಮಂಡ್ಯ : ಜನರು ನನ್ನ ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಮಾತಾಡುತ್ತಾ ಇದ್ದಾರೆ. ನಾನು ಇನ್ನೂ ಅದರ ಬಗ್ಗೆ ತೀರ್ಮಾನ ಮಾಡಿಲ್ಲ. ರಾಜಕೀಯಕ್ಕೆ ಬರಬೇಕಾ, ಲೋಕಸಭೆಗೆ ನಿಲ್ಲಬೇಕಾ ಎಂದು ನಿರ್ಧಾರ ಮಾಡಿಲ್ಲ. ಸದ್ಯ ಆಲೋಚನೆಯಲ್ಲಿ ಇದ್ದೀನಿ. ಮುಂದೆ ಈ ಬಗ್ಗೆ ಸ್ಪಷ್ಟ ನಿಲುವು ಹೇಳ್ತೀನಿ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ. ಸಿ ಎನ್ ಮಂಜುನಾಥ್ ಅವರು ತಿಳಿಸಿದರು.
ಇಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಹಲವು ಕಡೆ ಜನರು ಒತ್ತಡ ಹಾಕುತ್ತಾ ಇದ್ದಾರೆ. ರಾಜ್ಯ ಮಟ್ಟದಲ್ಲಿ ಹೃದ್ರೋಗ ಚಿಕಿತ್ಸಾ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದೀರ. ಇದೇ ರೀತಿ ರಾಷ್ಟ್ರ ಮಟ್ಟದಲ್ಲೂ ಈ ರೀತಿಯ ಸುಧಾರಣೆ ಏಕೆ ತರಬಾರದು? ಎಂದು ಹೇಳ್ತಾ ಇದ್ದಾರೆ. ಮುಂದೆ ಸ್ಪರ್ಧೆಯ ಬಗ್ಗೆ ತೀರ್ಮಾನ ಮಾಡಿದ್ರೆ ಹೇಳ್ತೀನಿ. ನಾನು ಈಗಲೂ ಆಲೋಚನೆಯಲ್ಲಿಯೇ ಇದ್ದೀನಿ. ಲೋಕಸಭೆ ಪ್ರವೇಶ ಕೇವಲ ರಾಜಕೀಯ ಮೂಲಕವೇ ಅಲ್ಲ.
ನನ್ನ ಅರ್ಥ ಲೋಕಸಭೆನೇ ಬೇರೆ ರಾಜಕೀಯವೇ ಬೇರೆ. ಸದ್ಯ ಆಲೋಚನೆಯಲ್ಲಿ ಇದ್ದೀನಿ. ಮುಂದೆ ಈ ಬಗ್ಗೆ ಸ್ಪಷ್ಟ ನಿಲುವು ಹೇಳ್ತೀನಿ. ಆರೋಗ್ಯ ಕ್ಷೇತ್ರದಲ್ಲಿ ಮಾಡಿರೋದು ಜನ ಸೇವೆ. ರಾಷ್ಟ್ರಮಟ್ಟದಲ್ಲಿ ಜನಸೇವೆಗೆ ಅವಕಾಶವಿದೆ ಹೋಗಿ ಎನ್ನುತ್ತಿದ್ದಾರೆ. ಒಂದು ಜಿಲ್ಲೆಗೆ ಹೋದಾಗ ಆ ಜಿಲ್ಲೆಯವರು ಹೇಳ್ತಾರೆ. ನಾಳೆ ಮೈಸೂರಿಗೆ ಹೋಗ್ತಾ ಇದ್ದೇನೆ. ಹೋದಲ್ಲಿ ಎಲ್ಲಾ ಎಲ್ಲಿ ನಿಲುತ್ತೀರಾ? ಅಂತಾರೆ ಜನರು. ಈ ರಾಜಕೀಯ ಕ್ಷೇತ್ರಕ್ಕೆ ಹೋಗಬೇಕಾ? ಬೇಡ್ವಾ? ಎನ್ನೋ ನಿರ್ಧಾರವೇ ಮಾಡಿಲ್ಲ ಎಂದರು.
ಇನ್ನು ಜಯದೇವ ಸಂಸ್ಥೆ ಮೇಲೆ ಸರ್ಕಾರದಿಂದ ತನಿಖೆಗೆ ಚಿಂತನೆ ವಿಚಾರವಾಗಿ ಮಾತನಾಡಿದ ಅವರು. ಇಡೀ ರಾಷ್ಟ್ರದಲ್ಲಿ ಜಯದೇವ ಸಂಸ್ಥೆ ಮಾದರಿ ಸಂಸ್ಥೆಯಾಗಿ ಅಭಿವೃದ್ಧಿಗೊಳಿಸಿದ್ದೇವೆ. ಈ ಸರ್ಕಾರ ಹಾಗೂ ಹಿಂದಿನ ಸರ್ಕಾರ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯಾವ ಕಾರಣಕ್ಕೆ ತನಿಖೆ ಮಾಡಬೇಕು ಅಂದುಕೊಂಡಿದ್ದಾರೋ ಗೊತ್ತಿಲ್ಲ. ನನಗೆ ಸಂತೋಷ. ಕೇಂದ್ರ ಆರೋಗ್ಯ ಸ್ಥಾಯಿ ಸಮಿತಿ ನಮ್ಮ ಕೆಲಸ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಾರ್ಯವೈಖರಿ, ನಿರ್ವಹಣೆ ನೋಡಿ ಓನರ್ ಯಾರು ಅಂದ್ರು. ಸರ್ಕಾರಕ್ಕೆ ಈ ಸಂಸ್ಥೆ ಶೋಕೇಶ್ ಆಗಿದೆ ಎಂದಿದ್ದರು. ಜಯದೇವ ರೀತಿ ಸರ್ಕಾರಿ ಸಂಸ್ಥೆಗಳನ್ನ ಏಕೆ ಅಭಿವೃದ್ಧಿ ಮಾಡಬಾರದು ಎಂದು ಸರ್ಕಾರವೇ ತಿಳಿಸಿದೆ ಎಂದರು.
ಮಂಜುನಾಥ್ ಜನರ ಸೇವೆ ಮಾಡಿದ್ದಾರೆ: ಇದೇ ವೇಳೆ ಲೋಕಸಭಾ ಚುನಾವಣೆಗೆ ಡಾ. ಮಂಜುನಾಥ್ ಸ್ಪರ್ಧೆ ವಿಚಾರವಾಗಿ ಮಂಡ್ಯದಲ್ಲಿ ಮಂಜುನಾಥ್ ಪತ್ನಿ, ಹೆಚ್‌ಡಿಡಿ ಪುತ್ರಿ ಅನುಸೂಯ ಮಾತನಾಡಿ, ರಾಜಕೀಯದವರ ಮನೆಯಲ್ಲಿ ಹುಟ್ಟಿದ್ದೀನಿ. ನಾನು ಹುಟ್ಟಿದ ಒಂದೇ ವರ್ಷದಲ್ಲಿ ತಂದೆ ದೇವೇಗೌಡ್ರು ಎಂಎಲ್ಎ ಆಗಿದ್ದರು.
ನಾನೂ ರಾಜಕೀಯದಲ್ಲಿನ ಏಳು-ಬೀಳು ನೋಡಿದ್ದೇನೆ. ಮಂಜುನಾಥ್ ಜನರ ಸೇವೆ ಮಾಡಿದ್ದಾರೆ. ನೆಮ್ಮದಿಯಾಗಿ ಆ ಸೇವೆಯನ್ನ ಮಾಡಿದ್ದೇವೆ ಎಂದು ಆಲೋಚಿಸಲು ಸಮಯ ಸಿಗುತ್ತಿಲ್ಲ. ಸಂತೋಷವಾಗಿ ಆ ವಿಚಾರ ಆಸ್ವಾದಿಸಲು ಆಗ್ತಿಲ್ಲ ಎಂದರು. ಮಂಜುನಾಥ್ ಕಾಲದ ಅಭಿವೃದ್ಧಿ ಬಗ್ಗೆ ಸರ್ಕಾರದಿಂದ ತನಿಖೆ ವಿಚಾರವಾಗಿ, ಇನ್ನೂ ಅದರ ಮೆಸೇಜ್ ನಮಗೆ ಬಂದಿಲ್ಲ. ಅದರ ಬಗ್ಗೆ ಮಾತನಾಡಿದ್ರೆ ತಪ್ಪಾಗುತ್ತೆ ಎಂದರು.
ಇದನ್ನೂ ಓದಿ : ಬಾಲ್ಯದಿಂದಲೂ ಬಡವರ ಸೇವೆ ಮಾಡುವ ತವಕವಿತ್ತು : ಡಾ ಮಂಜುನಾಥ್