ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ದ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ. 2011ರ ಮುಡಾ ಸೈಟ್ ಹಂಚಿಕೆಯನ್ನೂ ಸಿಬಿಐಗೆ ಕೊಡಿ ಅಂತ ಕೇಳುವ ತಾಕತ್ತು ಇದೆಯಾ ಎಂದು ಪ್ರಶ್ನಿಸಿದ್ದಾರೆ.
ವಿಧಾನಸೌಧ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರಿಗೆ ಧನ್ಯವಾದಗಳು. ಕಳೆದ ಕೆಲವು ದಿನಗಳಿಂದ ನಮ್ಮ ಸಿದ್ದರಾಮಯ್ಯ ಬಗ್ಗೆ ಮುಡಾ ಹಗರಣದ ಬಗ್ಗೆ ಮಾತನಾಡುತ್ತಿದ್ದಾರೆ. ಈಗಾಗಲೇ ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿದೆ. ಕುಮಾರಸ್ವಾಮಿ ಅವರೇ ಬಿಜೆಪಿ ಜೊತೆ ಮೈತ್ರಿಯಾಗಿದ್ದೀರಾ. ಯಡಿಯೂರಪ್ಪ ಅವರು 2011ರ ಮಾರ್ಚ್ 17ರಂದು ವಿಧಾನಪರಿಷತ್ನಲ್ಲಿ ಭಾಷಣದ ವೇಳೆ ದೇವೇಗೌಡ ಕುಟುಂಬದ ವಿರುದ್ಧ ಮಾತನಾಡಿದ್ದರು.
ಮುಡಾ ವಿಚಾರದಲ್ಲಿ ಬಿಎಸ್ವೈ ನಿಮ್ಮ ವಿರುದ್ಧ ಮಾತನಾಡಿದ್ದಾರೆ. ಇದೇ ವಿಚಾರಕ್ಕೆ ಬಿಜೆಪಿ ಜೊತೆ ಸೇರಿ ಪ್ರತಿಭಟನೆ ಮಾಡುತ್ತಿರುವುದು ನನಗೆ ಅರ್ಥವಾಗಿಲ್ಲ ಎಂದರು. ಸಿಎಂ ಸಿದ್ದರಾಮಯ್ಯ ಅಹಿಂದ ಸಮುದಾಯದ ಅತಿದೊಡ್ಡ ನಾಯಕ. ಅದನ್ನು ನೀವು ಸಹಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಪ್ರಧಾನಿಮಂತ್ರಿ ಮುಖ್ಯಮಂತ್ರಿಯಾಗೋದು ಗ್ರೇಟ್ ಅಲ್ಲ ಕುಮಾರಸ್ವಾಮಿ ಅವರೇ.. ಆದರೆ, ಕನಕಪುರದ ಒಬ್ಬ ರೈತನ ರೈತನ ಮಗ ರಾಜ್ಯಕ್ಕೆ ಉಪಮುಖ್ಯಮಂತ್ರಿಯಾಗುವುದು ಅಷ್ಟು ಸುಲಭದ ಕೆಲಸ ಅಲ್ಲ. ನೀವು ಬಸ್ನಲ್ಲಿ ಎಂಎಲ್ಎಗಳನ್ನ ಕರೆದುಕೊಂಡು ಹೋಗಿ ರಾತ್ರೋರಾತ್ರಿ ಪದವಿ ತೆಗೆದುಕೊಂಡಷ್ಟು ಸುಲಭವಲ್ಲ ಎಂದರು.
ಇಂದು ಅಹಿಂದ ನಾಯಕನನ್ನು ಸಹಿಸ್ತಿಲ್ಲ. ನಿಮ್ಮ ಸಮುದಾಯದ ವ್ಯಕ್ತಿ ರಾಜ್ಯಕ್ಕೆ ಡಿಸಿಎಂ ಆಗಿದ್ದಾರೆ. ಖುಷಿ ಪಡಬೇಕು ಅಲ್ವಾ ನೀವು. ಅದನ್ನ ಸಹಿಸುತ್ತಿಲ್ಲ. ಬೇರೆ ಸಮುದಾಯ ಬೆಳೆಯೋದು ನಿಮಗೆ ಇಷ್ಟ ಇಲ್ಲ. ಮತ್ತೆ ಇನ್ನೂ ಯಾರನ್ನು ಬೆಳೆಸಬೇಕೆಂದು ಅಂದಿಕೊಂಡಿದ್ದೀರಾ ಎಂದು ಕುಮಾರಸ್ವಾಮಿ ಅವರನ್ನ ಪ್ರಶ್ನಿಸಿದರು. ಮುಡಾ ಹಗರಣದ ಬಗ್ಗೆ ತಾವು ಏನು ಪ್ರಸ್ತಾಪ ಮಾಡ್ತಾ ಇದ್ದೀರಾ.. ದಯವಿಟ್ಟು ಇದರ ಬಗ್ಗೆ ಸಿಬಿಐ ಕೊಡಿ ಅನ್ನುವ ತಾಕತ್ತು ಕುಮಾರಸ್ವಾಮಿಗೆ ಇದೆಯಾ ಎಂದು ಪ್ರಶ್ನಿಸಿದರು.
ಓದಿ: ವಾಲ್ಮೀಕಿ ನಿಗಮದ ಹಗರಣ: ವಿಧಾನಸೌಧಕ್ಕೆ ಬಿಜೆಪಿ ನಾಯಕರ ಪಾದಯಾತ್ರೆ - BJP Leaders Protest