ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕೆ ಜಾರಿಗೆ ತಂದ ತ್ವರಿತ ಬಸ್ ಸೇವೆ (BRTS) ಮಹತ್ವಾಕಾಂಕ್ಷಿ ಯೋಜನೆ ಆರಂಭದಿಂದ ಇಲ್ಲಿಯವರೆಗೂ ಟೀಕೆಗಳನ್ನು ಎದುರಿಸುತ್ತಲೇ ಸಾಗುತ್ತಿದೆ. ಅದರ ಜೊತೆಗೆ ಬಿಆರ್ಟಿಎಸ್ ಯೋಜನೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಬಿಳಿ ಆನೆಯಂತಾಗಿದೆ. ಎಷ್ಟೇ ಪ್ರಯತ್ನಪಟ್ಟರೂ ಲಾಭದ ಹಳಿಗೆ ಬರದೇ ಯೋಜನೆ ನಷ್ಟದಲ್ಲಿಯೇ ಪಯಣ ಮುಂದುವರೆಸಿದ್ದು, ಸಂಸ್ಥೆಗೆ ನುಂಗಲಾರದ ತುತ್ತಾಗಿದೆ.
ರಾಜ್ಯದ ಏಕೈಕ ತ್ವರಿತ ಬಸ್ ಸಾರಿಗೆ ಸೇವೆ ಆರಂಭದಲ್ಲಿ ಮಹಾನಗರದ ಜನತೆಯಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿತ್ತು. ಆದರೆ ಯೋಜನೆಯಲ್ಲಿನ ಅನಗತ್ಯ ಮಾರ್ಪಾಡು ಅನುಷ್ಠಾನದಲ್ಲಾದ ವಿಳಂಬದಿಂದ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಯೋಜನೆಗೆ ಶಾಪ ಹಾಕದವರೇ ಕಡಿಮೆ. ಒಂದಿಷ್ಟು ಕಾಮಗಾರಿಗಳು ಬಾಕಿಯಿದ್ದರೂ 2018 ಅಕ್ಟೋಬರ್ ತಿಂಗಳಲ್ಲಿ ಕಾರ್ಯಾಚರಣೆ ಶುರು ಮಾಡಲಾಗಿತ್ತು. ಮೂಲ ಯೋಜನೆ ಪ್ರಕಾರ, ಬಿಆರ್ಟಿಎಸ್ ಸೇವೆಯಿಂದ ಉಂಟಾಗುವ ನಷ್ಟವನ್ನು ನಗರಾಭಿವೃದ್ಧಿ ಇಲಾಖೆ ಭರಿಸುವುದಾಗಿತ್ತು. ಆದರೆ ಕಾರ್ಯಾಚರಣೆ ಕುರಿತು ಅಂದು ಲಿಖಿತ ಒಪ್ಪಂದ ಮಾಡಿಕೊಳ್ಳದಿರುವುದು ನಷ್ಟಕ್ಕೆ ಪ್ರಮುಖ ಕಾರಣವಾಗಿದೆ.
159 ಕೋಟಿ ರೂ. ಬಾಕಿ: ಸಾಮಾನ್ಯವಾಗಿ ನಗರ ಸಾರಿಗೆಯಲ್ಲಿ ಶೇ.10ರಷ್ಟ ಸಾಮಾನ್ಯ. ಆದರೆ ಬಿಆರ್‌ಟಿಎಸ್‌ಗೆ ಪ್ರತೀ ಕಿ.ಮೀ.ಗೆ 30 ರೂ. ನಷ್ಟವಾಗುತ್ತಿದೆ. ಚಿಗರಿಯ 95-100 ಬಸ್‌ಗಳು ನಿತ್ಯ ಸರಾಸರಿ 30,000 ಕಿ.ಮೀ. ಸಂಚರಿಸುತ್ತಿವೆ. ಹೀಗಾಗಿ ತಿಂಗಳಿಗೆ 3 ಕೋಟಿ ರೂಪಾಯಿಯಷ್ಟು ನಷ್ಟ ಅನುಭವಿಸುತ್ತಿದೆ. 2018ರಿಂದ ಇಲ್ಲಿಯವರೆಗೆ 159.72 ಕೋಟಿ ರೂ. ನಷ್ಟ ಉಂಟಾಗಿದೆ. 2018ರಿಂದ ಈ ನಷ್ಟ ಭರಿಸುವಂತೆ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲಾಗುತ್ತಿದ್ದರೂ ಪ್ರಯೋಜನವಾಗಿಲ್ಲ. ದಿನದಿಂದ ದಿನಕ್ಕೆ ನಷ್ಟದ ಪ್ರಮಾಣ ಹೆಚ್ಚಾಗುತ್ತಿದೆ.
ಈ ಕುರಿತಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ ಎಂ. ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, "ಸಾಮಾನ್ಯವಾಗಿ ನಗರ ಸಾರಿಗೆಯಲ್ಲಿ ಸ್ವಲ್ಪ ನಷ್ಟ ಇರುತ್ತದೆ. ಖರ್ಚು ವೆಚ್ಚದಲ್ಲಿ 10 ರೂಪಾಯಿಯಷ್ಟು ವ್ಯತ್ಯಾಸವಿರುತ್ತದೆ. ಆದರೆ ಬಿಆರ್ಟಿಎಸ್ ಸಾರಿಗೆ ಸೇವೆಯಲ್ಲಿ ನಷ್ಟ ಹೆಚ್ಚಿದೆ. ಒಂದು ಕಿ.ಮೀ.ಗೆ 80 ರೂಪಾಯಿ ಖರ್ಚಾಗುತ್ತಿದೆ. ಆದರೆ ಆದಾಯ ಬರುವುದು 50 ರೂಪಾಯಿ. ಪ್ರತೀ ಕಿ.ಮೀ 30 ರೂಪಾಯಿ ಹೆಚ್ಚುವರಿ ಖರ್ಚು ಬರುತ್ತಿದೆ. ಎಲ್ಲ ಎಸಿ ಬಸ್ಗಳಾಗಿರುವುದರಿಂದ ಖರ್ಚು ಹೆಚ್ಚಾಗುತ್ತಿದೆ. ಹೀಗಾಗಿ ಸಾಕಷ್ಟು ನಷ್ಟ ಉಂಟಾಗುತ್ತಿದೆ. ಈ ನಷ್ಟ ಭರಿಸುವಂತೆ ಆರಂಭದಿಂದಲೂ ಸಂಬಂಧಿಸಿದ ಇಲಾಖೆಗೆ ಪತ್ರ ಬರೆಯಲಾಗುತ್ತಿದೆ. ಸಾಮಾನ್ಯ ನಗರ ಸಾರಿಗೆ ಸೇವೆಯ ನಷ್ಟಕ್ಕಿಂತ ಇದರ ನಷ್ಟದ ಪ್ರಮಾಣ ದೊಡ್ಡಮಟ್ಟದಲ್ಲಿದೆ. ಪ್ರತೀ ತಿಂಗಳು 3 ಕೋಟಿಯಷ್ಟು ನಷ್ಟವಾಗುತ್ತಿದೆ. ಸರ್ಕಾರ ಅಥವಾ ಡಲ್ಟ್ ಇದನ್ನು ಪಾವತಿಸಿದರೆ ಸಂಸ್ಥೆಗೆ ಸಾಕಷ್ಟು ಅನುಕೂಲವಾಗಲಿದೆ. ಈಗಾಗಲೇ ಬೇರೆ ಬೇರೆ ನಗರ ಸಾರಿಗೆ ಹಾಗೂ ಬಿಎಂಟಿಸಿಗಳಿಗೆ ಕೊಡುತ್ತಿದೆ. ಅದೇ ರೀತಿ ನಮಗೂ ಕೊಡಬೇಕು" ಎಂದು ತಿಳಿಸಿದ್ದಾರೆ.
ವರ್ಷವಾರು ಆದಾಯ, ವೆಚ್ಚ, ನಷ್ಟದ ಮಾಹಿತಿ:
ವರ್ಷ | ಆದಾಯ (ಕೋಟಿ ರೂ.ಗಳಲ್ಲಿ) | ವೆಚ್ಚ (ಕೋಟಿ ರೂ.ಗಳಲ್ಲಿ) | ನಷ್ಟ (ಕೋಟಿ ರೂ.ಗಳಲ್ಲಿ) |
2018-19 | 13.02 | 27.27 | 14.24 |
2019-20 | 32.75 | 55.13 | 22.38 |
2020-21 | 15.89 | 31.95 | 16.06 |
2021-22 | 25.12 | 51.36 | 26.23 |
2022-23 | 41.69 | 72.76 | 31.07 |
2023-24 | 46.01 | 76.55 | 30.54 |
2024-25 | 28.78 | 48.50 | 19.72 |
ಇದನ್ನೂ ಓದಿ: ಅದಾನಿ ಸಮೂಹ ಷೇರುಗಳು ಭಾರೀ ಕುಸಿತ: ₹2.45 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳ ನಷ್ಟ