ರಾಮನಗರ: ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆದರೂ ಈ ಕಾರ್ಯಕ್ರಮದಲ್ಲಿ ಅನಿವಾರ್ಯ ಕಾರಣಗಳಲ್ಲಿ ಅಹವಾಲು ಸಲ್ಲಿಸಲು ಆಗದಿದ್ದರೆ, ಚನ್ನಪಟ್ಟಣ ತಾಲ್ಲೂಕು ಕಚೇರಿಯಲ್ಲಿ ಇದಕ್ಕೆಂದೇ ಕೊಠಡಿಯೊಂದನ್ನು ತೆರೆಯಲಾಗಿದೆ. ಅಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ರಾಜ್ಯದ ಉಪ ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್ ತಿಳಿಸಿದರು.
ಇಂದು ಚನ್ನಪಟ್ಟಣ ತಾಲ್ಲೂಕಿನ ಭೈರಾಪಟ್ಟಣ ಸರ್ಕಾರಿ ಶಾಲಾ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚನ್ನಪಟ್ಟಣ ತಾಲ್ಲೂಕಿನಲ್ಲಿ ಇದೂವರೆಗೆ ಸತತವಾಗಿ ಆರು ಜನಸ್ಪಂದನ ಸಭೆಯನ್ನು ಆಯೋಜಿಸಲಾಗಿದೆ. ಚನ್ನಪಟ್ಟಣ ಟೌನಿನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರ ಬದುಕಿನ ಬದಲಾವಣೆಗೆ ಈ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸುಮಾರು ಆರು ಸಾವಿರಕ್ಕೂ ಹೆಚ್ಚು ಅರ್ಜಿ ಸ್ವೀಕೃತಗೊಂಡಿದೆ. ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಈ ಕಾರ್ಯಕ್ರಮದ ಕುರಿತು ಹಲವಾರು ಟೀಕೆಗಳು ಬಂದಿದ್ದು, ಅವೆಲ್ಲವೂ ಸಾಯುತ್ತವೆ. ಸರ್ಕಾರದ ಅಭಿವೃದ್ಧಿಯ ಕೆಲಸಗಳು ಉಳಿಯುತ್ತವೆ ಎಂದರು.
ಸರ್ಕಾರದಿಂದ ಕೈಗೊಂಡಿರುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಹೇಗೆ ಬಗೆಹರಿಸುತ್ತೇವೆ ಎಂಬುದು ಮುಖ್ಯವಾಗಿದೆ. ಪಿಂಚಣಿ, ಮನೆ, ನಿವೇಶನ, ರಸ್ತೆ, ಚರಂಡಿ ಸೇರಿತೆ ವಿವಿಧ ರೀತಿಯ ಸಮಸ್ಯೆಗಳ ಕುರಿತು ಅರ್ಜಿ ಸ್ವೀಕೃತವಾಗಿದೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ಅವರು ಈ ಭಾಗದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲು ಒಪ್ಪಿಕೊಂಡಿದ್ದಾರೆ. ಯಾವ ಯಾವ ಪಂಚಾಯ್ತಿಗೆ ಅನುದಾನ ಅವಶ್ಯಕವಿದೆ ಎಂಬುದು ನಿರ್ಧರಿಸಲಾಗುವುದು ಎಂದು ಹೇಳಿದರು.
4000 ಜನರು ಮನೆ ಹಾಗೂ ನಿವೇಶನಕ್ಕಾಗಿ ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ನೈಜವಾಗಿ ಯಾರಿಗೆ ವಸತಿ ಹಾಗೂ ನಿವೇಶನ ಇರುವುದಿಲ್ಲ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿ, ಅರ್ಹರಿಗೆ ನಿವೇಶನ ಹಾಗೂ ವಸತಿ ನೀಡಬೇಕು. ಈಗಾಗಲೇ ನಿವೇಶನಕ್ಕಾಗಿ ಜಮೀನು ಇರುವುದನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು. ಪಡಿತರ ಚೀಟಿ ವಿತರಣೆಗಾಗಿ ಸುಮಾರು 450 ಅರ್ಜಿಗಳು ಸ್ವೀಕೃತಗೊಂಡಿದೆ. ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. 5 ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ಅನುಷ್ಠಾನಗೊಳಿಸಲಾಗಿದೆ. ಜಿಲ್ಲೆಗೆ ಈಗಾಗಲೇ ಸುಮಾರು 100 ಹೊಸ ಬಸ್‌ಗಳ ಕಾರ್ಯಾರಂಭಗೊಂಡಿದೆ. ಆನೆ ದಾಳಿ ಸಮಸ್ಯೆಗಳಿಗೆ ಪರಿಹಾರ, ಕಣ್ವ ಬ್ರಿಡ್ಜ್ ಕಂ ಬ್ಯಾರೇಜ್‌ಗೆ ಸುಮಾರು 162 ಕೋಟಿ ರೂ.ಗಳನ್ನು ನೀರಾವರಿ ಇಲಾಖೆಯಿಂದ ಚನ್ನಪಟ್ಟಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಅಹವಾಲು ಸಲ್ಲಿಕೆಯಲ್ಲಿ ಸ್ವೀಕಾರಗೊಂಡ ಅರ್ಜಿ ವಿಲೇವಾರಿಗೆ ಒಂದು ಸಭೆ ಮಾಡಿ ಅವುಗಳನ್ನು ಬಗೆ ಹರಿಸಲಾಗುವುದು. ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾರೇ ಬರಲಿ ಯಾರೇ ಹೋಗಲಿ ನಾನು ನಿಮ್ಮ ಮನೆ ಮಗ, ನಿಮ್ಮ ಸೇವೆಗೆ ಸದಾ ಸಿದ್ದ ಎಂದರು. ವಿಧಾನ ಪರಿಷತ್ ಶಾಸಕರಾದ ಪುಟ್ಟಣ ಅವರು ಮಾತನಾಡಿ, ಈ ಕಾರ್ಯಕ್ರಮದಲ್ಲಿ ಹೆಚ್ಚು ಸಾರ್ವಜನಿಕರು ಭಾಗವಹಿಸುತ್ತಿದ್ದಾರೆ. ಇದರಿಂದಾಗಿ ಸಮಸ್ಯೆಗಳ ಅರಿವಾಗುತ್ತದೆ. ಪಿಂಚಣಿ, ಸಾಲ-ಸೌಲಭ್ಯ ಯೋಜನೆ ಹಾಗೂ ಇತರೆ ಸಮಸ್ಯೆಗಳ ಕುರಿತು ಸ್ವೀಕೃತವಾಗಿರುವ ಅರ್ಜಿಗಳನ್ನು ಉಪಮುಖ್ಯಮಂತ್ರಿಗಳಿಂದ ಬಗೆಹರಿಸಲಾಗುವುದು ಎಂದರು.
ಉಪಮುಖ್ಯಮಂತ್ರಿಗಳ ನಿರ್ದೇಶನದಂತೆ ಅರ್ಜಿ ಪಡೆಯುವುದಷ್ಟೇ ಅಲ್ಲ, ಅದಕ್ಕೆ ಪರಿಹಾರ ನೀಡುವುದು ಹಾಗೂ ಪರಿಹಾರ ಮಾಡುವ ಮೂಲಕ ಅವುಗಳ ವಿಲೇವಾರಿ ಮಾಡಲಾಗುವುದು. ಕಂದಾಯ, ಅರಣ್ಯ, ಕೃಷಿ ಸೇರಿದಂತೆ ಇತರೆ ಇಲಾಖೆಗಳ ಸಚಿವರು ಸಹ ಚನ್ನಪಟ್ಟಣಕ್ಕೆ ಭೇಟಿ ನೀಡಿ ಅಹವಾಲುಗಳನ್ನು ಸ್ವೀಕರಿಸುವಂತೆ ಉಪಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳಿಂದ ವಂಚಿತರಾದ ಅರ್ಹರಿಗೂ ಸೌಲಭ್ಯ ಒದಗಿಸಲಾಗುವುದು. ಇದಕ್ಕೆ ನಿಮ್ಮ ಸಹಕಾರ ಹಾಗೂ ಆಶೀರ್ವಾದ ಇರಬೇಕು ಎಂದು ಹೇಳಿದರು.
ಉಪಮುಖ್ಯಮಂತ್ರಿಗಳಿಗೆ ಚನ್ನಪಟ್ಟಣ ತಾಲ್ಲೂಕಿನ ಮೇಲೆ ಅಪಾರ ಪ್ರೀತಿ ವಿಶ್ವಾಸವಿದೆ. ಜನರ ಅಭಿವೃದ್ಧಿಗಾಗಿ ಹಾಗೂ ಸೌಲಭ್ಯಕ್ಕಾಗಿ ಬೇಕಾದ ಕಾರ್ಯಗಳನ್ನು ಮಾಡಿಸಿಕೊಳ್ಳೋಣ ಎಂದರು. ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ ಅವರು ಮಾತನಾಡಿ, ಇದು ಹೊಸ ಕಾರ್ಯಕ್ರಮವೇನಲ್ಲ. ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕಿನಲ್ಲಿ ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿಗಳು ಜನಸಾಮಾನ್ಯರ ಸಮಸ್ಯೆಗಳನ್ನು ಅವರ ಮನೆಗೆ ತೆರಳಿ ಅದನ್ನು ಬಗೆ ಹರಿಸುವ ಕೆಲಸ ಮಾಡಿದ್ದಾರೆ. ಅಧಿಕಾರ ಜನ ಕೊಟ್ಟ ಆಶೀರ್ವಾದ, ಜನರ ಬದುಕನ್ನು ಹಸನು ಮಾಡುವ ಸಾಮರ್ಥ್ಯ ಸರ್ಕಾರಕ್ಕಿದೆ. ಅಧಿಕಾರ, ದರ್ಪ ಚಲಾಯಿಸಲಿಲ್ಲ, ಜನರ ಸಮಸ್ಯೆಗಳ ನಿವಾರಣೆ ಮಾಡುವ ಕರ್ತವ್ಯ ಏಕೈಕ ಗುರಿಯಾಗಿದೆ ಎಂದರು. ಇಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಬಹಳಷ್ಟಿದೆ. ಜಿಲ್ಲೆಯ ಬೇರೆ ತಾಲ್ಲೂಕಿನಲ್ಲಿ ಇಷ್ಟು ಸಮಸ್ಯೆಗಳು ಇರಲಿಲ್ಲ. ಈ ಭಾಗದ ಜನರ ಸಮಸ್ಯೆಗಳನ್ನು ಉಪಮುಖ್ಯಮಂತ್ರಿಗಳು ಪರಿಹರಿಸುತ್ತಾರೆ ಎಂದು ಹೇಳಿದರು.