ಬೆಂಗಳೂರು: ಲೋಕದ ಡೊಂಕ ನೀವೇಕೆ ತಿದ್ದುವಿರಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಶ್ವಗುರು ಬಸವಣ್ಣನವರ ವಚನದ ಮೂಲಕ ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ವಿಧಾನಸೌಧ ಮುಂಭಾಗದ ಬಸವಣ್ಣನ ಪ್ರತಿಮೆಗೆ ಇಂದು ಪುಷ್ಪನಮನ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪ್ರಕರಣವನ್ನು CBIಗೆ ವಹಿಸುವಂತೆ ಕುಮಾರಸ್ವಾಮಿ ಅವರ ರಾಜ್ಯಪಾಲರ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಲೋಕದ ಡೊಂಕ ನೀವೇಕೆ ತಿದ್ದುವಿರಿ. ಮೊದಲು ನಿಮ್ಮ ಮನೆ ರಿಪೇರಿ ಮಾಡ್ಕೋಳಿ ಎಂದು ಬಸವಣ್ಣ ಹೇಳಿದ್ದಾರೆ. ಉಳಿದದ್ದು ಆಮೇಲೆ ಮಾತನಾಡೋಣ ಎಂದು ಹೇಳುವ ಮೂಲಕ ಟಾಂಗ್ ನೀಡಿದರು.
ಬಸವ ಜಯಂತಿ ಆಚರಣೆ ರಾಜ್ಯದ ಕೆಲಸ. ಬಸವಣ್ಣನವರು ಹೇಳಿರುವ ಮಾತೇನು? ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲಸಂಗಮದೇವ ಅಂತ ಹೇಳಿದ್ದಾರೆ. ಹಾಗಾಗಿ ನಾವು ಲೋಕದ ಡೊಂಕು ತಿದ್ದುವ ಸಾಹಸಕ್ಕಿಳಿಯದೆ ನಮ್ಮ ನಮ್ಮ ಮನೆಗಳನ್ನು ನೇರಗೊಳಿಸಿಕೊಳ್ಳೋಣ ಎನ್ನುವ ಮೂಲಕ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.
ಬಸವಣ್ಣ ಪ್ರತಿಮೆಗೆ ಗೌರವ ನಮನ: ಇದಕ್ಕೂ ಮುನ್ನ ಬಸವ ಜಯಂತಿ ಪ್ರಯುಕ್ತ ವಿಧಾನಸೌಧ ಮುಂಭಾಗದ ಬಸವಣ್ಣ ಪ್ರತಿಮೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ವಿಧಾನ ಪರಿಷತ್ ಸ್ಪೀಕರ್ ಬಸವರಾಜ ಹೊರಟ್ಟಿ, ಸಚಿವ ಈಶ್ವರ್ ಖಂಡ್ರೆ, ಶಾಸಕ ವಿನಯ್ ಕುಲಕರ್ಣಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಉಪಸ್ಥಿತರಿದ್ದರು.
ಇದೇ ವೇಳೆ ಮಾತನಾಡಿದ ಡಿಸಿಎಂ ಡಿಕೆಶಿ, ನಾಡಿನ ಜನತೆಗೆ ಬಸವ ಜಯಂತಿಯ ಶುಭಾಶಯಗಳು. ನಾಡು ನಡೆಯುತ್ತಿರೋದೇ ಬಸವ ತತ್ವದ ಮೇಲೆ. ಮೊದಲ ಸಂಸತ್ತನ್ನು ಜಾರಿಗೆ ತಂದವರು ಬಸವಣ್ಣನವರು. ಪ್ರತಿಯೊಂದು ಕಾರ್ಯಕ್ರಮವೂ ಸರ್ವರಿಗೂ ಸಮ ಬಾಳು, ಸಮ ಪಾಲು ಎಂಬ ತತ್ವದಲ್ಲಿ ಸರ್ಕಾರ ನಡೆಯುತ್ತಿದೆ. ಅಕ್ಷರ ದಾಸೋಹ, ಅನ್ನ ದಾಸೋಹದಂತಹ ನ್ಯಾಯಬದ್ಧ ಕಾರ್ಯಕ್ರಮಗಳು ಸರ್ಕಾರದಲ್ಲಿ ನಡೆಯುತ್ತಿವೆ. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೋ ಇಡುವಂತೆ ಆದೇಶ ಮಾಡಿದ್ದೂ ಕಾಂಗ್ರೆಸ್ ಸರ್ಕಾರ. ಬಸವಣ್ಣನವರನ್ನ ಸಾಂಸ್ಕೃತಿಕ ನಾಯಕ ಎಂದೂ ಘೋಷಣೆ ಮಾಡಿದ್ದೇವೆ ಎಂದರು.
ಇದನ್ನೂ ಓದಿ: ಸಿ.ಎಂ.ಇಬ್ರಾಹಿಂ ಉಚ್ಚಾಟನೆ: ದೇವೇಗೌಡ, ಕುಮಾರಸ್ವಾಮಿಗೆ ಹೈಕೋರ್ಟ್ ನೋಟಿಸ್ - CM Ibrahim Expel case