ಬೆಂಗಳೂರು: ಧಾರವಾಡ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶಿರಹಟ್ಟಿ ಭಾವೈಕ್ಯತಾ ಮಹಾ ಸಂಸ್ಥಾನ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿಗೆ ಬೆಂಬಲ ನೀಡುವ ಬಗ್ಗೆ ಸ್ಥಳೀಯ ನಾಯಕರ ಜತೆ ಚರ್ಚೆ ನಡೆಸುತ್ತೇನೆ. ನಾನು ಏಕಾಂಗಿಯಾಗಿ ಈ ಬಗ್ಗೆ ತೀರ್ಮಾನ ಮಾಡಲು ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು. ಈ ವೇಳೆ ದಿಂಗಾಲೇಶ್ವರ ಸ್ವಾಮಿಜಿಗಳನ್ನು ನೀವು ಸಂಪರ್ಕ ಮಾಡಿದ್ದೀರಾ ಎಂದು ಪ್ರಶ್ನೆಗೆ, ಅವರು ಈಗ ಚುನಾವಣೆ ಸ್ಪರ್ಧಿಸುವ ತೀರ್ಮಾನ ಮಾಡಿದ್ದು, ಈ ಬಗ್ಗೆ ಅನೇಕರು ನನಗೆ ಸಲಹೆ ನೀಡಿದ್ದಾರೆ. ಕೇಂದ್ರ ಚುನಾವಣಾ ಸಮಿತಿ ನಿರ್ಧಾರದಂತೆ ನಾವು ಈಗಾಗಲೇ ಆನಂದ್ ಅಸೂಟಿ ಅವರಿಗೆ ಬಿ ಫಾರಂ ನೀಡಿದ್ದೇವೆ. ನಮ್ಮ ಅಭ್ಯರ್ಥಿ ಯುವಕರಾಗಿದ್ದಾರೆ. ಈ ಕುರಿತ ಪ್ರಸ್ತಾವನೆ ಇದೆ. ಈ ಬಗ್ಗೆ ಸದ್ಯದಲ್ಲೇ ಸ್ಥಳೀಯ ನಾಯಕರ ಜತೆ ಚರ್ಚೆ ಮಾಡುತ್ತಿದ್ದೇನೆ. ನಮ್ಮ ಎಐಸಿಸಿ ಅಧ್ಯಕ್ಷರು, ಚುನಾವಣಾ ಸಮಿತಿ, ಮುಖ್ಯಮಂತ್ರಿಗಳು, ರಾಜ್ಯ ಉಸ್ತುವಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರನ್ನು ವಿಶ್ವಾಸಕ್ಕೆ ಪಡೆಯಬೇಕು. ಸ್ವಾಮೀಜಿಗಳು ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬಂದವರು. ಮೊದಲೇ ಈ ವಿಚಾರ ನಮಗೆ ಗೊತ್ತಿದ್ದರೆ ಸುಲಭವಾಗುತ್ತಿತ್ತು ಎಂದು ತಿಳಿಸಿದರು.
ಬರ ಪರಿಹಾರ ಬಗ್ಗೆ ಚುನಾವಣಾ ಆಯೋಗಕ್ಕೆ ಮನವಿ: ಇದೇ ಬರ ಪರಿಹಾರ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಚುನಾವಣಾ ಆಯೋಗದಿಂದ ಕರ್ನಾಟಕಕ್ಕೆ ಬರ ಪರಿಹಾರ ವಿಳಂಬವಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಪ್ಪಿಕೊಂಡಿದ್ದಾರೆ. ಆದರೆ ನಮ್ಮ ರಾಜ್ಯ ಸರ್ಕಾರ ನಾಲ್ಕೈದು ತಿಂಗಳ ಹಿಂದೆಯೇ ಬರ ಪರಿಹಾರ ನೀಡುವಂತೆ ಮನವಿ ಮಾಡಿತ್ತು. ಪ್ರಧಾನಮಂತ್ರಿ, ಗೃಹ ಸಚಿವರನ್ನು ಮುಖ್ಯಮಂತ್ರಿಗಳು ಭೇಟಿ ಮಾಡಿ ಮನವಿ ಮಾಡಿದ್ದರು. ಕೇಂದ್ರದಿಂದ ಬರ ಅಧ್ಯಯನ ತಂಡ ಕೂಡ ಬಂದಿತ್ತು. ಅದನ್ನು ಅವರು ಮರೆತಿದ್ದಾರೆ ಎಂದು ಡಿಕೆಶಿ ಆರೋಪಿಸಿದರು.
ಬರ ಪರಿಹಾರ ವಿಚಾರವಾಗಿ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ. ಬರ ಪರಿಹಾರ ವಿತರಣೆ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದು ನಮ್ಮ ಪಕ್ಷದ ವತಿಯಿಂದ ಕೂಡ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದು, ನಮ್ಮ ರಾಜ್ಯಕ್ಕೆ ಬರಬೇಕಾದ ಅನುದಾನ, ಪರಿಹಾರ ಬಾಕಿಯಿದೆ ಎಂದು ತಿಳಿಸಿದ್ದೇವೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ರಾಜ್ಯದ ಎಲ್ಲಾ ಹಳ್ಳಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ಸಮರ್ಪಕವಾಗಿ ನೀರಿನ ಸಮಸ್ಯೆ ನಿಭಾಯಿಸಲಾಗುತ್ತಿದೆ ಎಂದರು.
ಉತ್ತರ ಪ್ರದೇಶಕ್ಕೆ ಪ್ರಚಾರಕ್ಕಾಗಿ ಹೋಗುತ್ತೇವೆ: ನಾನು ಎರಡು ದಿನ ಕೇರಳ ಪ್ರವಾಸ ಮಾಡಿ ಬಂದಿದ್ದು, ಇದೇ ಏ.16 ರಂದು ಮತ್ತೆ ಕೇರಳ ಪ್ರವಾಸ ಮಾಡಲಿದ್ದೇನೆ. ನಂತರ ನಮ್ಮ ರಾಜ್ಯದ ಚುನಾವಣೆ ಮುಗಿದ ನಂತರ ತೆಲಂಗಾಣ ಮತ್ತು ಆಂಧ್ರ ಪ್ರದೇಶಕ್ಕೆ ತೆರಳುತ್ತಿದ್ದೇನೆ. ಮುಖ್ಯಮಂತ್ರಿಗಳ ಜತೆಯಲ್ಲಿ ಉತ್ತರ ಪ್ರದೇಶಕ್ಕೆ ತೆರಳಬೇಕು ಎಂದು ಪಕ್ಷ ತೀರ್ಮಾನಿಸಿದೆ ಎಂದರು.
ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ರಾಜ್ಯದಲ್ಲಿ ಪ್ರಚಾರ ಮಾಡುತ್ತಾರಾ ಎಂಬ ಪ್ರಶ್ನೆಗೆ, ಅವರು ಒಂದೆರಡು ದಿನಾಂಕಗಳನ್ನು ನೀಡಿದ್ದು, ಮಲ್ಲಿಕಾರ್ಜುನ ಖರ್ಗೆ ಅವರಿಗೂ ಒಂದೆರಡು ದಿನ ರಾಜ್ಯದಲ್ಲಿ ಪ್ರಚಾರ ಮಾಡುವಂತೆ ಮನವಿ ಮಾಡಿದ್ದೇವೆ. ಉತ್ತರ ಭಾರತದಲ್ಲಿ ಖರ್ಗೆ ಅವರಿಗೆ ಬಹಳ ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ನಾವು ಇವರ ಪ್ರವಾಸದ ಕುರಿತ ದಿನಾಂಕ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.
ಗ್ಯಾರಂಟಿ ನೋಡಿ ಮತ ಹಾಕಿದರೆ ಕುಕ್ಕರ್ ಬ್ಲಾಸ್ಟ್ ಸಂಭವಿಸಲಿದೆ ಎಂಬ ಸಿ.ಟಿ ರವಿ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಗ್ಯಾರಂಟಿ ಬಗ್ಗೆ ಮಾತನಾಡಿ ಅವರೂ ಬ್ಲಾಸ್ಟ್ ಆಗಿದ್ದಾರೆ. ಅವರು ಶೋಭಕ್ಕಂಗೆ ಗೋ ಬ್ಯಾಕ್ ಎಂದು ನಮ್ಮ ಸದಾನಂದ ಗೌಡರನ್ನು ಬ್ಲಾಸ್ಟ್ ಮಾಡಿದ್ದಾರೆ. ಸಿ.ಟಿ ರವಿಯನ್ನು ನಮ್ಮ ತಮ್ಮಣ್ಣ ಬ್ಲಾಸ್ಟ್ ಮಾಡಿದರು ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ವಕ್ತಾರರಾಗಿ ತೇಜಸ್ವಿನಿ ಗೌಡ : ವಿಧಾನ ಪರಿಷತ್ ಮಾಜಿ ಸದಸ್ಯೆ ತೇಜಸ್ವಿನಿ ಗೌಡ ಅವರು ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಅವರು ಕಾಂಗ್ರೆಸ್ ಮೂಲದವರು. ಕಾಂಗ್ರೆಸ್ ಪಕ್ಷದಿಂದ ಮಾತ್ರ ಈ ದೇಶಕ್ಕೆ ಒಳ್ಳೆಯದಾಗಲಿದೆ ಎಂದು ಪಕ್ಷಕ್ಕೆ ಬಂದಿದ್ದಾರೆ. ತೇಜಸ್ವಿನಿ ಗೌಡ ಅವರು ನಮ್ಮ ಸಂಸದರಾಗಿದ್ದರು. ಪಕ್ಷದ ಅಧ್ಯಕ್ಷನಾಗಿ ನಾನು ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ. ಇಂದಿನಿಂದ ತೇಜಸ್ವಿನಿ ಗೌಡ ಅವರನ್ನು ಪಕ್ಷದ ಅಧಿಕೃತ ವಕ್ತಾರರಾಗಿದ್ದಾರೆ ಎಂದರು.
ಇದನ್ನೂ ಓದಿ : ಕೆ.ಶಿವರಾಂ ಪತ್ನಿ ಸೇರಿ ಹಲವರು ಕಾಂಗ್ರೆಸ್ ಸೇರ್ಪಡೆ; ಡಿಕೆಶಿ ಭೇಟಿಯಾದ ಸಿ.ಪಿ.ಯೋಗೇಶ್ವರ್ ಪುತ್ರಿ - Congress