ಬೆಂಗಳೂರು: ಪೆನ್ಡ್ರೈವ್ನಂತಹ ಚಿಲ್ಲರೆ ಕೆಲಸವನ್ನು ನಾನು ಮಾಡುವುದಿಲ್ಲ. ನಾನೇನಿದ್ದರೂ ಚುನಾವಣೆಯಲ್ಲಿ ಎದುರಿಸುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಸದಾಶಿವನಗರ ನಿವಾಸದಲ್ಲಿ ಇಂದು ಮಾತನಾಡಿದ ಅವರು, ನಾನು ಪೆನ್ಡ್ರೈವ್ ಇದೆ ಎಂದು ಹೆದರಿಸಲ್ಲ. ಅಸೆಂಬ್ಲಿಗೆ ಬನ್ನಿ ಎಂದು ಕರೆದಿದ್ದೇನೆ. ಇದು ಹಳೆ ವಿಡಿಯೋ ಎಂದು ರೇವಣ್ಣ ಹೇಳಿದ್ದಾರೆ. ಆ ಮೂಲಕ ಅವರೇ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಪ್ರಜ್ವಲ್ ಕುಟುಂಬ ಸದಸ್ಯ ಅಲ್ಲ ಅಂತ ಹೇಳಿದ್ರೆ ಹೇಗೆ ಒಪ್ಪಲು ಆಗುತ್ತದೆ?. ಹೆಚ್.ಡಿ.ಎಂದರೆ ಏನು?. ಹೆಚ್.ಡಿ.ರೇವಣ್ಣ ಎಂದರೆ ಹೊಳೆನರಸೀಪುರ ದೇವೇಗೌಡರ ಮಗ ಅಂತ. ಹೆಚ್.ಡಿ.ಕುಮಾರಸ್ವಾಮಿ ಎಂದರೆ ಹೊಳೆನರಸೀಪುರ ದೇವೇಗೌಡರ ಮಗ ಅಂತ ಎಂದು ವ್ಯಂಗ್ಯವಾಡಿದರು.
ಪಕ್ಷದಿಂದ ವಜಾ ಕಣ್ಣೊರೆಸುವ ನಾಟಕ: ಪಕ್ಷದಿಂದ ವಜಾ ಮಾಡಲಿ ಇಲ್ಲವೇ ಒಳಗಿಟ್ಟುಕೊಳ್ಳಲಿ. ಅದೆಲ್ಲಾ ಕಣ್ಣೊರೆಸುವ ನಾಟಕ. ರಾಜಕಾರಣದಲ್ಲಿ ನನಗೂ ಗೊತ್ತಿದೆ ಅಮಾನತು ಏನು ಅನ್ನೋದು ಎಂದರು.
ಅಶೋಕ್ ಬೆನ್ನುಮೂಳೆ ಇಲ್ಲದ ನಾಯಕ: ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವಾಗ ಯಾರು ಜೊತೆಗಿದ್ದರು. ಯಾರು ಯಾರಿಗೆ ಕರೆ ಮಾಡಿದ್ದರು? ಈ ಪ್ರಶ್ನೆಗಳನ್ನು ಅವರಿಗೆ ಕೇಳಿ. ಈ ವಿಚಾರದಲ್ಲಿ ಬಿಜೆಪಿಯವರ ಸ್ಟ್ಯಾಂಡ್ ಹೇಳಬೇಕು. ಪ್ರಹ್ಲಾದ್ ಜೋಶಿ, ಸುನೀಲ್ ಕುಮಾರ್, ಯತ್ನಾಳ್, ಬೊಮ್ಮಾಯಿ, ಶೋಭಕ್ಕ ಯಾಕೆ ಮಾತಾಡುತ್ತಿಲ್ಲ?. ವಿಪಕ್ಷ ನಾಯಕ ಆರ್.ಅಶೋಕ್ ಓರ್ವ ಬೆನ್ನುಮೂಳೆ ಇಲ್ಲದ ನಾಯಕ ಎಂದು ವಾಗ್ದಾಳಿ ನಡೆಸಿದರು.