ದಾವಣಗೆರೆ : ದಾವಣಗೆರೆ - ತುಮಕೂರು ನೇರ ರೈಲು ಮಾರ್ಗ ಯೋಜನೆ ಮೂರು ಜಿಲ್ಲೆಗಳ ಕನಸಿನ ಯೋಜನೆ ಆಗಿದೆ. ಇದು 2027 ಜನವರಿಗೆ ಲೋಕಾರ್ಪಣೆ ಆಗಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಈಗಾಗಲೇ ಜನತೆಗೆ ಸಿಹಿ ಸುದ್ದಿ ನೀಡಿದ್ದಾರೆ. ಈ ಯೋಜನೆಯ ಕಾಮಗಾರಿ ಪೂರ್ಣಗೊಂಡು ಯೋಜನೆ ಲೋಕಾರ್ಪಣೆ ಆಗ್ಬಿಟ್ರೇ ದಾವಣಗೆರೆ-ತುಮಕೂರು-ಚಿತ್ರದುರ್ಗ ಜಿಲ್ಲೆಯ ಜನರಿಗೆ ಪ್ರತಿಯೊಂದಕ್ಕೂ ಸಹಾಯ ಆಗಲಿದೆ. ದಶಕಗಳಿಂದ ರೈಲು ನೋಡದ ಗ್ರಾಮಗಳಲ್ಲಿ ರೈಲು ಓಡುವ ಸದ್ದು ಕೇಳಿ ಬರಲಿದೆ. ಅಲ್ಲದೆ ಹಲವು ಗ್ರಾಮಗಳಲ್ಲಿ, ತಾಲೂಕುಗಳಲ್ಲಿ ಒಟ್ಟು 16 ಹೊಸ ರೈಲು ನಿಲ್ದಾಣಗಳು ತಲೆ ಎತ್ತಲಿವೆ ಎಂದು ಸಚಿವ ಸೋಮಣ್ಣ ಹೇಳಿದ್ದಾರೆ.
ಬಸ್ ನಿಲ್ಧಾಣಗಳೇ ಇಲ್ಲದ ಗ್ರಾಮಗಳಲ್ಲಿ ರೈಲು ನಿಲ್ದಾಣಗಳು ತಲೆ ಎತ್ತಲಿವೆ. ಗ್ರಾಮೀಣ ಭಾಗದ ಜನರು ಆಯಾ ನಿಲ್ದಾಣಗಳಲ್ಲಿ ರೈಲು ಹತ್ತಿ ಪ್ರಯಾಣ ಬೆಳೆಸುವ ಪ್ರಸಂಗ ಹತ್ತಿರ ಇದೆ. 2140 ಕೋಟಿ ರೂ. ವೆಚ್ಚದಲ್ಲಿ ಈ ನೇರ ರೈಲು ಮಾರ್ಗ ಯೋಜನೆ ಅನುಷ್ಠಾನ ಆಗುತ್ತಿದೆ. ದಾವಣಗೆರೆಯ ಜನ ರೈಲು ಹತ್ತಿ ಕೇವಲ 2 ಗಂಟೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರನ್ನು ತಲುಪಬಹುದಾಗಿದೆ.
ದಾವಣಗೆರೆಯ ಗ್ರಾಮಗಳಿಗೂ ರೈಲು ಸಂಪರ್ಕ, ತಲೆ ಎತ್ತಲಿವೆ ಹೊಸ ನಿಲ್ದಾಣಗಳು : ದಾವಣಗೆರೆಯಿಂದ 15 ಕಿ.ಮೀ ದೂರವಿರುವ ಹೆಬ್ಬಾಳು ಗ್ರಾಮದ ಜನ ರೈಲನ್ನೇ ನೋಡಿಲ್ಲ. ಇದೀಗ ದಾವಣಗೆರೆ-ತುಮಕೂರು ನೇರ ರೈಲು ಮಾರ್ಗ ಯೋಜನೆಯಡಿಯಲ್ಲಿ ಈ ಗ್ರಾಮಕ್ಕೆ ರೈಲು ಬರಲಿದೆ. ಅಲ್ಲದೆ, ಗ್ರಾಮದ ಹೊರವಲಯದಲ್ಲಿ ನಿಲ್ದಾಣ ನಿರ್ಮಿಸಲು ರೈಲ್ವೆ ಇಲಾಖೆ ಯೋಜಿಸಿದೆ.
ಇದಲ್ಲದೆ ಆನಗೋಡು ಗ್ರಾಮಕ್ಕೂ ರೈಲು ಸಂಪರ್ಕ ಸಿಗಲಿದೆ. ಆ ಗ್ರಾಮದ ಜನ ರೈಲು ಹತ್ತುವ ದಿನಗಳು ಸಮೀಸುತ್ತಿವೆ. ಈ ಗ್ರಾಮಕ್ಕೂ ರೈಲ್ವೆ ನಿಲ್ದಾಣ ಸಿಗಲಿದೆ ಎಂದು ಎಂದು ರೈಲ್ವೆ ಇಲಾಖೆ ಗುರುತಿಸಿದೆ. ಇನ್ನು ತೋಳಹುಣಸೆ ಗ್ರಾಮಕ್ಕೆ ಈಗಾಗಲೇ ಹಳೆ ರೈಲು ನಿಲ್ದಾಣ ಇದ್ದು, ರೈಲು ಎಂದಿನಂತೆ ಸಂಚರಿಸಲಿದೆ. ದಾವಣಗೆರೆಯಲ್ಲಿ ಮುಖ್ಯ ನಿಲ್ದಾಣ ಇದೆ. ಇದರ ಮುಖಾಂತರ ಹುಬ್ಬಳ್ಳಿ-ಧಾರವಾಡ- ಬೆಳಗಾವಿಗೆ ರೈಲುಗಳು ಸಂಚರಿಸಲಿವೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಒಂದು ತಾಲೂಕಿನ ಆರು ಗ್ರಾಮಗಳಿಗೆ ಬರಲಿದೆ ಚುಕುಬುಕು: ಚಿತ್ರದುರ್ಗ ಜಿಲ್ಲೆಯ ಕೆಲ ಗ್ರಾಮಗಳು, ತಾಲೂಕುಗಳಿಗೂ ಕೂಡ ರೈಲು ನಿಲ್ದಾಣಗಳಿಗೆ, ರೈಲು ಸಂಪರ್ಕಕ್ಕೆ ರೈಲ್ವೇ ಇಲಾಖೆ ಗುರುತಿಸಿ ಈಗಾಗಲೇ ಮ್ಯಾಪ್ ಒಂದನ್ನು ಸಿದ್ಧಪಡಿಸಿದೆ. ಆ ಮ್ಯಾಪ್ ಮೂಲಕ ನೋಡುವುದಾದರೆ ಹಿರಿಯೂರು ತಾಲೂಕಿಗೆ ರೈಲು ಸಂಪರ್ಕ ಸಿಗಲಿದ್ದು, ಅಲ್ಲಿಯೂ ರೈಲ್ವೆ ನಿಲ್ದಾಣ ತಲೆ ಎತ್ತಲಿದೆ. ಇನ್ನು ಮೇಟಿ ಕುರ್ಕೆ, ಐಮಂಗಲ, ಪಾಲವ್ವನಹಳ್ಳಿ, ದೊಡ್ಡಸಿದ್ಧವನಹಳ್ಳಿಗಳಿಗೂ ರೈಲು ಸಂಚರಿಸಲಿದೆ. ಚಿತ್ರದುರ್ಗ (ಹಳೆ ನಿಲ್ದಾಣ) ಮೂಲಕ ಸಿರಿಗೆರೆ ಕ್ರಾಸ್, ಭರಮಸಾಗರ ಮೂಲಕ ದಾವಣಗೆರೆ ಕಡೆ ರೈಲು ಸಂಚರಿಸಲಿದೆ ಎಂದು ರೈಲ್ವೆ ಸಚಿವ ಸೋಮಣ್ಣ ಮಾಹಿತಿ ನೀಡಿದ್ದಾರೆ.
ತುಮಕೂರು ಜಿಲ್ಲೆಯಲ್ಲೂ ಆರು ಗ್ರಾಮಗಳಿಗೆ, ಒಂದು ತಾಲೂಕಿಗೆ ರೈಲು ಸಂಪರ್ಕ : ಈ ನೇರ ರೈಲು ಮಾರ್ಗದಲ್ಲಿ ರೈಲು ಕಾಣದ ಹಳ್ಳಿಗಳು, ತಾಲೂಕುಗಳು ಸೇರಿವೆ. ತುಮಕೂರು ಜಿಲ್ಲೆಗೆ ಒಟ್ಟು ಆರು ಗ್ರಾಮಗಳು, ಒಂದು ತಾಲೂಕಿಗೆ ರೈಲು ಬರಲಿದೆ. ಅಲ್ಲದೆ ರೈಲು ನಿಲ್ದಾಣಗಳು ತಲೆ ಎತ್ತಲಿವೆ ಎಂದು ಸಚಿವ ಸೋಮಣ್ಣ ಮಾಹಿತಿ ನೀಡಿದ್ದಾರೆ.
ತುಮಕೂರು (ಹಳೆ ನಿಲ್ದಾಣ), ಉರಕೆರೆ, ತಿಮ್ಮರಾಜನಹಳ್ಳಿ, ಜೋಗಿಹಳ್ಳಿ, ಚಿಕ್ಕನಹಳ್ಳಿ, ತಾವರೆಕೆರೆ, ಆನೆಸಿದ್ರಿ ಇಷ್ಟು ಗ್ರಾಮದ ಜನ ರೈಲು ನೋಡಲಿದ್ದಾರೆ. ಇನ್ನು ಶಿರಾ ತಾಲೂಕಿಗೂ ಈ ರೈಲು ಸಂಪರ್ಕ ಸಿಗಲಿದೆ ಎಂದು ರೈಲ್ವೆ ಇಲಾಖೆ ತಯಾರಿಸಿರುವ ಮ್ಯಾಪ್ ಸಾಕ್ಷಿಯಾಗಿದೆ.
ಇದನ್ನೂ ಓದಿ : 2026 ರಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯ ಕಾರಿಡಾರ್ 2, 4 ಪೂರ್ಣ: ಸಚಿವ ಸೋಮಣ್ಣ - Sub Urban Railway Project