ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರವು 18ನೇ ಸಾರ್ವತ್ರಿಕ ಚುನಾವಣೆಗೆ ಸಿದ್ಧವಾಗಿದೆ. ಈ ಬಾರಿ ಕಾಂಗ್ರೆಸ್ನಿಂದ ಕೆ.ರಾಜಶೇಖರ್ ಹಿಟ್ನಾಳ ಮತ್ತು ಬಿಜೆಪಿಯಿಂದ ಡಾ. ಕೆ.ಬಸವರಾಜ ಕ್ಯಾವಟರ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
1952ರಲ್ಲೇ ಕೊಪ್ಪಳ ಲೋಕಭಾಸ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದೆ. ಒಟ್ಟು 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನು ಒಳಗೊಂಡಿದೆ. ಕೊಪ್ಪಳ ಜಿಲ್ಲೆಯ ಕೊಪ್ಪಳ, ಗಂಗಾವತಿ, ಕನಕಗಿರಿ, ಯಲಬುರ್ಗಾ ಹಾಗೂ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಜೊತೆಗೆ ನೆರೆಯ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳನ್ನೂ ಒಳಗೊಂಡಿದೆ.
ಕ್ಷೇತ್ರದ ರಾಜಕೀಯ ಇತಿಹಾಸ: ಕೊಪ್ಪಳ ಲೋಕಸಭಾ ಕ್ಷೇತ್ರ ಅತ್ಯಂತ ವಿಶೇಷವಾದ ಕ್ಷೇತ್ರ. ಸ್ವಾತಂತ್ರ್ಯ ನಂತರದಲ್ಲಿ ನಡೆದ ಚುನಾವಣೆಗಳಲ್ಲಿ ಇದು ಮೇಲ್ನೋಟಕ್ಕೆ ಕಾಂಗ್ರೆಸ್‌ನ ಭದ್ರಕೋಟೆ. ಆದರೂ ಆಗಾಗ್ಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಆಯ್ಕೆಯಾದ ಉದಾಹರಣೆಗಳು ಇವೆ. ಜನತಾ ಪರಿವಾರ, ಪಕ್ಷೇತರ ಅಭ್ಯರ್ಥಿಗಳು ಇಲ್ಲಿ ಗೆಲುವಿನ ಸಿಹಿ ಸವಿಸಿದ್ಧಾರೆ. ಇದುವರೆಗೆ ಅತಿ ಹೆಚ್ಚು ಬಾರಿ ಎಂದರೆ, 10 ಸಲ ಕಾಂಗ್ರೆಸ್ ಗೆಲುವಿನ ದಾಖಲೆ ಹೊಂದಿದೆ. ನಂತರದಲ್ಲಿ ಮೂರು ಬಾರಿ ಬಿಜೆಪಿ, ಜನತಾ ದಳ ಎರಡು ಬಾರಿ ಜಯ ಸಾಧಿಸಿದೆ.
1991ರವರೆಗೆ ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಬಿಂಬಿತವಾಗಿತ್ತು. ಆಗ ಸಿದ್ದರಾಮಯ್ಯ ಕೊಪ್ಪಳ ಲೋಕಸಭೆ ಕ್ಷೇತ್ರಕ್ಕೆ ಬಂದು ಸ್ಪರ್ಧಿಸಿ ಸೋಲನ್ನುಂಡಿದ್ದರು. ಈ ಕ್ಷೇತ್ರದಲ್ಲಿ ಮೇಲ್ವರ್ಗಗಳ ರಾಜಕೀಯ ಪ್ರಾಬಲ್ಯವಿದೆ. ಹೀಗಾಗಿ ಮೇಲ್ವರ್ಗದ ಅಭ್ಯರ್ಥಿಗಳು ಅಥವಾ ಮೇಲ್ವರ್ಗದವರು ಮುನ್ನಡೆಸುವ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಹೆಚ್.ಜಿ.ರಾಮುಲು, ಕೆ.ವಿರುಪಾಕ್ಷಪ್ಪ ಅವರನ್ನು ಹೊರತುಪಡಿಸಿದರೆ, ಉಳಿದಂತೆ ಗೆದ್ದ ಬಹುಪಾಲು ಅಭ್ಯರ್ಥಿಗಳು ಲಿಂಗಾಯತ ಸಮುದಾಯದವರು. 2009ರಿಂದ ಬಿಜೆಪಿ ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿದೆ.
ಕಳೆದ ಮೂರು ಚುನಾವಣೆಗಳ ಹಿನ್ನೋಟ: 2009ರಲ್ಲಿ ಶಿವರಾಮಗೌಡ ಬಿಜೆಪಿಯಿಂದ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಈ ಮೂಲಕ ಕೊಪ್ಪಳ ಜಿಲ್ಲೆಯಲ್ಲಿ ಬಿಜೆಪಿ ಮೊದಲ ಖಾತೆ ತರೆದಿತ್ತು. 2014ರಲ್ಲಿ ಹಾಗೂ 2019ರ ಚುನಾವಣೆಯಲ್ಲಿ ಬಿಜೆಪಿಯಿಂದ ಸತತವಾಗಿ ಸಂಗಣ್ಣ ಕರಡಿ ಜಯ ದಾಖಲಿಸಿದ್ದರು.
2009ರ ಚುನಾವಣೆಯಲ್ಲಿ ಶೇ.55.40ರಷ್ಟು ಮತದಾನವಾಗಿತ್ತು. ಇದರಲ್ಲಿ ಬಿಜೆಪಿಯ ಶಿವರಾಮಗೌಡ ಶೇ.38.65ರಷ್ಟು ಮತ ಪಡೆದರೆ, ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಬಸವರಾಜ ರಾಯರೆಡ್ಡಿ ಶೇ.27.81ರಷ್ಟು ಮತ ಪಡೆದಿದ್ದರು. ಬಿಜೆಪಿ ಅಭ್ಯರ್ಥಿ ಶೇ.10.84ರಷ್ಟು ಮತಗಳ ಭಾರಿ ಅಂತರದಿಂದ ಗೆಲುವು ಕಂಡಿದ್ದರು.
ಆದರೆ, ನಂತರದ ಎರಡು ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಮತ ಪ್ರಮಾಣ ತುಂಬಾ ಕಡಿಮೆಯಾಗಿದೆ. 2014ರ ಚುನಾವಣೆಯಲ್ಲಿಒಟ್ಟು ಶೇ.65.63ರಷ್ಟು ಮತದಾನವಾಗಿತ್ತು. ಆಗ ಬಿಜೆಪಿಯ ಸಂಗಣ್ಣ ಕರಡಿ ಶೇ.48.95ರಷ್ಟು ಮತ ಗಳಿಸಿದ್ದರು. ಕಾಂಗ್ರೆಸ್‌ನ ಬಸವರಾಜ್ ಹಿಟ್ನಾಳ ಶೇ.45.69ರಷ್ಟು ಮತ ಪಡೆದು, ಶೇ.3.26 ಮತಗಳ ಅಂತರದಿಂದ ಸೋತಿದ್ದರು.
2019ರ ಚುನಾವಣೆಯಲ್ಲಿಒಟ್ಟು ಮತದಾನ ಶೇ.68.54ರಷ್ಟಾಗಿತ್ತು. ಬಿಜೆಪಿಯಿಂದ ಮತ್ತೊಮ್ಮೆ ಸ್ಪರ್ಧಿಸಿದ್ದ ಸಂಗಣ್ಣ ಕರಡಿ ಶೇ.49.75ರಷ್ಟು ಮತ ಪಡೆದಿದ್ದರು. ಮತ್ತೊಂದೆಡೆ, ಕಾಂಗ್ರೆಸ್‌ನ ಕೆ.ರಾಜಶೇಖರ್ ಹಿಟ್ನಾಳ್ ಶೇ.46.79 ರಷ್ಟು ಮತ ಗಳಿಸಿ, ಕೇವಲ ಶೇ.2.96ರಷ್ಟು ಮತಗಳಿಂದ ಪರಾಜಯ ಕಂಡಿದ್ದರು.
ಈ ಬಾರಿ ಹ್ಯಾಟ್ರಿಕ್ ಸ್ಪರ್ಧೆಯ ನಿರೀಕ್ಷೆಯಲ್ಲಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಬಿಜೆಪಿ ಟಿಕೆಟ್ ಕೊಟ್ಟಿಲ್ಲ. ಬದಲಿಗೆ ಡಾ. ಕೆ.ಬಸವರಾಜ ಕ್ಯಾವಟರ್ ಅವರಿಗೆ ಮಣೆ ಹಾಕಲಾಗಿದೆ. ಇದರಿಂದ ಬಂಡೆದ್ದು ಸಂಗಣ್ಣ ಕರಡಿ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ಕೊಪ್ಪಳ ಕ್ಷೇತ್ರ ಈ ಬಾರಿ ಕುತೂಹಲ ಕೆರಳಿಸಿದೆ.
ಮಹಿಳಾ ಮತದಾರರೇ ಅಧಿಕ: ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 18,58,112 ಮತದಾರರು ಇದ್ದಾರೆ. ಈ ಪೈಕಿ 9,15,535 ಪುರುಷರು, 9,42,442 ಮಹಿಳೆಯರು, 135 ಇತರೆ ಮತದಾರರು ಇದ್ದಾರೆ. ಒಟ್ಟು ಮತದಾರರ ಪೈಕಿ ಮಹಿಳಾ ಮತದಾರರೇ ಅಧಿಕವಾಗಿದ್ದಾರೆ ಎಂಬುದು ವಿಶೇಷ.
ಲಿಂಗಾಯತ ಮತದಾರರೇ ಪ್ರಧಾನ: ಈ ಕ್ಷೇತ್ರ ವ್ಯಾಪ್ತಿಯಲ್ಲಿ ಲಿಂಗಾಯತರು, ಕುರುಬರು, ವಾಲ್ಮೀಕಿ (ನಾಯಕ) ಹಾಗೂ ಮುಸ್ಲಿಮರು ಅಧಿಕ ಸಂಖ್ಯೆಯ ಮತದಾರರಿದ್ದಾರೆ. ಆದರೆ, ಲಿಂಗಾಯತ ಮತದಾರರೇ ಇಲ್ಲಿ ಪ್ರಧಾನವಾಗಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಆಯ್ಕೆಯಾಗಿರೋದು ಬಹುಪಾಲು ಲಿಂಗಾಯತ ಸಮುದಾಯವರೇ.
ಸದ್ಯ ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಗಂಗಾವತಿ ಹಾಗೂ ಕುಷ್ಟಗಿ ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಗಂಗಾವತಿ ಶಾಸಕರಾದ ಜನಾರ್ದನ ರೆಡ್ಡಿ ಬಿಜೆಪಿಗೆ ಸೇರಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ.
ಇದನ್ನೂ ಓದಿ: ಚಾಮರಾಜನಗರ: ಎರಡನೇ ಸಲ ಗೆಲ್ಲುತ್ತಾ ಬಿಜೆಪಿ, ಮರಳಿ ಅಧಿಕಾರ ಸ್ಥಾಪಿಸುತ್ತಾ ಕಾಂಗ್ರೆಸ್?