ಬೆಂಗಳೂರು: ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಗುರುವಾರ ಸಚಿವರ ಡಿನ್ನರ್ ಮೀಟಿಂಗ್ ನಡೆಯಿತು. ಎಲ್ಲಾ ಸಚಿವರನ್ನು ಊಟಕ್ಕೆ ಆಹ್ವಾನಿಸಿದ್ದ ಸಿಎಂ, ನಿಗಮ, ಮಂಡಳಿ ಅಧ್ಯಕ್ಷರ ನೇಮಕಾತಿ ಪಟ್ಟಿ ಬಿಡುಗಡೆಯ ನಂತರ ಎದ್ದಿರುವ ಗೊಂದಲ ಬಗೆಹರಿಸಲು ಮುಂದಾದರು ಎಂದು ಹೇಳಲಾಗಿದೆ. ಕೆಲವು ಸಚಿವರ ಗಮನಕ್ಕೆ ತಾರದೆ ನೇಮಕಾತಿ ಮಾಡಿರುವುದು ಅಸಮಾಧಾನಕ್ಕೆ ಕಾರಣವಾಗಿತ್ತು.
ಇದೇ ವೇಳೆ, ಲೋಕಸಭಾ ಚುನಾವಣೆ ವಿಚಾರದ ಬಗ್ಗೆಯೂ ಅನೌಪಚಾರಿಕವಾಗಿ ಚರ್ಚಿಸಲಾಗಿದೆ. ಮುಂದಿನ ತಂತ್ರಗಾರಿಕೆ, ಕ್ಷೇತ್ರಗಳ ಬಗ್ಗೆ ಚರ್ಚೆಯಾಗಿದೆ. ಡಿನ್ನರ್ ಮೀಟಿಂಗ್ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಭಾಗವಹಿಸಿದ್ದರು. ಚುನಾವಣೆಯಲ್ಲಿ ಬಿಜೆಪಿಯನ್ನು ಕಟ್ಟಿ ಹಾಕುವ ಕುರಿತೂ ಚರ್ಚೆ ನಡೆದಿದೆ. ಸಚಿವರಿಗೆ ಕೆಲವು ಸೂಚನೆಗಳನ್ನು ನೀಡಿದ ಸಿದ್ದರಾಮಯ್ಯ, ಕಾಂಗ್ರೆಸಿನಿಂದ ಆಗುತ್ತಿರುವ ಎಡವಟ್ಟುಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಶಾಸಕರು ಕೊಟ್ಟ ಹೇಳಿಕೆಯನ್ನು ಬಿಜೆಪಿ ದೊಡ್ಡದು ಮಾಡುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಅನಗತ್ಯ ಹೇಳಿಕೆಗಳನ್ನು ನೀಡಬೇಡಿ. ಶಾಸಕಾಂಗ ಸಭೆಯಲ್ಲಿ ಶಾಸಕರಿಗೂ ಹೇಳುತ್ತೇನೆ. ನಮ್ಮ ಮಾತು ಬಿಜೆಪಿಗೆ ಆಹಾರವಾಗಬಾರದು ಎಂದು ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.
ಜೊತೆಗೆ, ಅಂಕಿಅಂಶಗಳ ಸಮೇತ ಬಿಜೆಪಿಗೆ ತಿರುಗೇಟು ನೀಡಬೇಕು. ಕೇಂದ್ರದಿಂದ ಬಾರದ ಅನುದಾನ ಹಾಗೂ ಹಿಂದಿನ ಬಿಜೆಪಿ ಸರ್ಕಾರದ ವೈಫಲ್ಯದ ಬಗ್ಗೆ ಮಾತನಾಡಬೇಕು. ಈ ಮೂಲಕ ಬಾಯಿ ಮುಚ್ಚಿಸಬೇಕು. ಲೋಕಸಭೆಯಲ್ಲಿ ಹೆಚ್ಚು ಕ್ಷೇತ್ರ ಗೆಲ್ಲಲು ಕೆಲಸ ಮಾಡಬೇಕು. ನಮ್ಮ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡಬೇಕು ಎಂದು ಸಚಿವರಿಗೆ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದನ್ನೂ ಓದಿ: ವಿಕಸಿತ ಭಾರತ ಅಲ್ಲ, ವಿನಾಶಕಾರಿ ಭಾರತ ಮಾಡುವ ಬಜೆಟ್ ಇದು: ಸಿಎಂ ಸಿದ್ದರಾಮಯ್ಯ
ನಿಗಮ ಮಂಡಳಿಗಳ ನೇಮಕಾತಿ ಪಟ್ಟಿ ಬಿಡುಗಡೆ: ಕಳೆದ ಮೂರು ನಾಲ್ಕು ತಿಂಗಳಿಂದ ನಿಗಮ ಮಂಡಳಿ ನೇಮಕ ನನೆಗುದಿಗೆ ಬಿದ್ದಿತ್ತು. ಹಲವು ಶಾಸಕರು ಹಾಗೂ ಕಾರ್ಯಕರ್ತರು ನಿಗಮ ಮಂಡಳಿ ಮೇಲೆ ಕಣ್ಣಿಟ್ಟಿದ್ದರು. ಸರ್ಕಾರ ಅಳೆದು ತೂಗಿ ನಿಗಮ ಮಂಡಳಿಗೆ ನೇಮಕಾತಿ ಮಾಡಿ ಸರ್ಕಾರ ಕಳೆದ ವಾರ ಆದೇಶ ಹೊರಡಿಸಿತ್ತು. ಹಾಲಿ 36 ಮಂದಿ ಶಾಸಕರಿಗೆ ವಿವಿಧ ನಿಗಮ ಮಂಡಳಿಗಳಲ್ಲಿ ಅಧ್ಯಕ್ಷರನ್ನಾಗಿ ನೇಮಿಸಿ, ಸಮಾಧಾನ ಪಡಿಸುವ ಪ್ರಯತ್ನ ಮಾಡಲಾಗಿದೆ.
ಎನ್.ಎ.ಹ್ಯಾರೀಸ್, ಬೇಲೂರು ಗೋಪಾಲಕೃಷ್ಣ, ಶಿವಲಿಂಗೇಗೌಡ, ನರೇಂದ್ರಸ್ವಾಮಿ, ಹೆಚ್ ಸಿ ಬಾಲಕೃಷ್ಣ, ವಿನಯ್ ಕುಲಕರ್ಣಿ, ಶ್ರೀನಿವಾಸ್ ಮಾನೆ, ಅನಿಲ್ ಚಿಕ್ಕಮಾದು, ವಿಜಯಾನಂದ ಕಾಶಪ್ಪನವರ್, ರೂಪಕಲಾ, ಜೆ ಟಿ ಪಾಟೀಲ್, ಗುಬ್ಬಿ ಶ್ರೀನಿವಾಸ್, ಅಪ್ಪಾಜಿ ನಾಡಗೌಡ, ಹೆಚ್ ವೈ ಮೇಟಿ, ಪುಟ್ಟರಂಗ ಶೆಟ್ಟಿ, ಮಹಾಂತೇಶ ಕೌಜಲಗಿ, ರಾಜಾ ವೆಂಕಟಪ್ಪ ನಾಯಕ್, ಬಿ.ಕೆ.ಸಂಗಮೇಶ್ವರ್, ಶರತ್ ಬಚ್ಚೇಗೌಡ, ಜೆ.ಎನ್.ಗಣೇಶ್, ಸತೀಶ್ ಸೈಲ್, ಅಬ್ಬಯ್ಯ ಪ್ರಸಾದ್, ಬಿ.ಶಿವಣ್ಣ, ಎ.ಬಿ.ರಮೇಶ್ ಬಂಡಿ ಸಿದ್ದೇಗೌಡ, ಎಸ್.ಎನ್.ನಾರಾಯಣ ಸ್ವಾಮಿ ಅವರು ನಿಗಮ ಮಂಡಳಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.