ಧಾರವಾಡ:
- ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ - 95,925 ಮತಗಳ ಅಂತರದಿಂದ ಗೆಲುವು
- ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿಗೆ ಸೋಲು
- ಪ್ರಲ್ಹಾದ್ ಜೋಶಿ ಪಡೆದ ಮತಗಳು- 7,05830
- ವಿನೋದ್ ಅಸೂಟಿ ಪಡೆದ ಮತಗಳು- 6,11008
ಬಿಜೆಪಿಯ ಭದ್ರಕೋಟೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕೈ - ಕಮಲ ಪಕ್ಷಗಳ ಮಧ್ಯೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಕಾಂಗ್ರೆಸ್‌ನ ಹೊಸ ಮುಖ ವಿನೋದ್ ಅಸೂಟಿ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಜೋಶಿ ಸತತ ಐದನೇ ಬಾರಿ ಗೆದ್ದು ಬೀಗಿದ್ದಾರೆ.
ವಿಜೇತ ಪ್ರಲ್ಹಾದ್ ಜೋಶಿ ಪ್ರತಿಕ್ರಿಯೆ: ಪ್ರತಿಕ್ರಿಯೆ ನೀಡಿದ ವಿಜೇತ ಪ್ರಲ್ಹಾದ್ ಜೋಶಿ ಅವರು, ''ಮತ ನೀಡಿ ಆಶೀರ್ವಾದ ಮಾಡಿದ ನಮ್ಮ ಕ್ಷೇತ್ರದ ಜನತೆಗೆ ಧನ್ಯವಾದಗಳು. ಜನತಾ ಜನಾರ್ದನ ಆಶಿರ್ವಾದದಿಂದ ಗೆಲುವಾಗಿದೆ. ಮತದಾರ ಪ್ರಭುಗಳಿಗೆ ಈ ಗೆಲುವು ಸಲ್ಲಬೇಕು. ಎಲ್ಲ ಕಾರ್ಯಕರ್ತರು ಮುಖಂಡರು ಸೇರಿ ಸಮರ್ಪಕವಾಗಿ ಕೆಲಸ ಮಾಡಿದ್ದಾರೆ. ಇಲ್ಲಿನ ಪ್ರತಿಸ್ಪರ್ಧಿಗಳು ಅಪಪ್ರಚಾರ ಮಾಡುತ್ತಾ ಬಂದರು. ಸಾಕಷ್ಟು ಹಣ ಹೆಂಡವನ್ನ ಹಂಚಿದ್ದಾರೆ. ಆದ್ರೆ, ಜನರು ನಮ್ಮ ಕೈ ಹಿಡಿದಿದ್ದಾರೆ'' ಎಂದು ಜೋಶಿ ಹೇಳಿದರು.
''ಕರ್ನಾಟಕದ ಜನರು ಈಗಾಗಲೇ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಈಗಾಗಲೇ ದೇಶದಲ್ಲಿ 300 ಗಡಿ ದಾಡುವ ನಿಟ್ಟಿನಲ್ಲಿದ್ದೇವೆ. ಆದ್ರೆ, ನಿರೀಕ್ಷೆ ತಕ್ಕಂತೆ ನಾವು ಅಂದುಕೊಂಡಂತೆ ಸೀಟು ಬಂದಿಲ್ಲ. ವಾಸ್ತವಿಕವಾಗಿ ಏನು ಆಗಿದೆ ಅನ್ಕೋದನ್ನ ನೋಡಬೇಕಾಗಿದೆ'' ಎಂದರು.
ಸದ್ಯದರಲ್ಲಿ ದೆಹಲಿಗೆ ಹೋಗುತ್ತೇನೆ: ''ವರಿಷ್ಠರ ಜೊತೆ ಮಾತನಾಡಿಕೊಂಡು ಮುಂದೆ ತಿಳಿಸುವೆ. ಎನ್ಡಿಎ ಮತ್ತು ಇಂಡಿಯಾ ಮೈತ್ರಿಕೂಟ ನಡುವೆ ಚುನಾವಣಾ ಆಗಿದೆ. ಹೀಗಾಗಿ ಎನ್ಡಿಎ ಜೊತೆ ಇದ್ದವರು ಗಟ್ಟಿಯಾಗಿ ನಿಲ್ಲುತ್ತಾರೆ ಅನ್ನೋ ವಿಶ್ವಾಸವಿದೆ. ನಮ್ಮ ಕ್ಷೇತ್ರದಲ್ಲಿ ಲೀಡ್ ಕಡಿಮೆಯಾಗಿದೆ. ಪರ್ಸೆಂಟೇಜ್ ಓಟ್ಗಳು ಕಡಿಮೆಯಾಗಿರುವ ಕಾರಣ ಲೀಡ್ ಕಡಿಮೆ ಆಗಿದೆ. ಈಗಾಗಲೇ ನಾವು ಕೈಗೊಂಡಿರುವ ಕಾಮಗಾರಿಗಳ ಮುಂದುವರೆಸಿಕೊಂಡು ಹೋಗುತ್ತೇವೆ. ನನ್ನ ಖಾತೆಯನ್ನು ಸರಿಯಾಗಿ ನಿಭಾಯಿಸಿದ್ದೇನೆ. ಐದು ವರ್ಷ ನನಗೆ ಮಂತ್ರಿಯಾಗಲು ಪ್ರಧಾನಿ ಮೋದಿಯವರು ಅವಕಾಶ ಮಾಡಿಕೊಟ್ಟಿದ್ದಾರೆ. ದಿಂಗಾಲೇಶ್ವರ ಶ್ರೀಗಳ ಅವರ ಆಶೀರ್ವಾದದಿಂದ ನಾನು ಗೆದ್ದಿದ್ದೇನೆ'' ಎಂದು ತಿಳಿಸಿದರು.
ಯಾರ ಪರ ಒಲವು ಜಾಸ್ತಿ?: 2019ರ ಲೋಕಸಭಾ ಚುನಾವಣೆಯಲ್ಲಿ ಶೇ. 70.12ರಷ್ಟು ಮತದಾನವಾಗಿತ್ತು. ಆಗ ಬಿಜೆಪಿಯಿಂದ ಪ್ರಲ್ಹಾದ್ ಜೋಶಿ 2.05 ಲಕ್ಷ ಮತಗಳ ಅಂತರದ ಗೆಲುವು ಕಂಡಿದ್ದರು. ಈ ಬಾರಿ ಶೇ.74.37ರಷ್ಟು ಮತದಾನವಾಗಿತ್ತು.
ಎಫೆಕ್ಟ್ ಆಗದ ದಿಂಗಾಲೇಶ್ವರ ಶ್ರೀ ಆಕ್ರೋಶ: ಸಾಂಪ್ರದಾಯಿಕ ಲಿಂಗಾಯತ ಮತಗಳು ಬಿಜೆಪಿಗೆ ದೊಡ್ಡ ಶಕ್ತಿ. ಆದರೆ, ಈ ಬಾರಿ ಶಿರಹಟ್ಟಿ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು ಜೋಶಿ ಅವರ ವಿರುದ್ಧ ನೇರವಾಗಿ ಪ್ರಚಾರಕ್ಕಿಳಿದಿದ್ದರು. ಆದರೆ, ಇದು ಲಿಂಗಾಯತ ಮತದಾರರ ಮೇಲೆ ಪ್ರಭಾವ ಬೀರಲಿಲ್ಲ. ಜೋಶಿ 5ನೇ ಬಾರಿ ವಿಜಯ ಪತಾಕೆ ಹಾರಿಸಿದ್ದಾರೆ. ಜೋಶಿ ಎದುರು ಕುರುಬ ಸಮುದಾಯದ ವಿನೋದ್ ಅಸೂಟಿ ಸೋಲು ಕಂಡಿದ್ದಾರೆ.