ಧಾರವಾಡ: ಜಿಲ್ಲೆಯಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರು ಮುಂಗಾರು ಬೆಳೆಗಳ ಬಿತ್ತನೆಯಲ್ಲಿ ತೊಡಗಿದ್ದಾರೆ. ಕಳೆದ ವರ್ಷ ಬರಗಾಲ ಅನುಭವಿಸಿದ ಅನ್ನದಾತ ಈ ವರ್ಷ ಉತ್ತಮ ಬೆಳೆ ತೆಗೆಯುವ ನಿರೀಕ್ಷೆಯಲ್ಲಿದ್ದಾನೆ.
ಬಿತ್ತನೆ ಬೀಜ ಹಾಗು ಮಳೆಯ ಕುರಿತು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಭಾನುವಾರ ಮಾಹಿತಿ ನೀಡಿದರು.
ಕಳೆದ ವಾರದಿಂದ ಜಿಲ್ಲೆಯಲ್ಲಿ ಮಳೆ ಹೆಚ್ಚಾಗುತ್ತಿದೆ. ಮೇ 16ರಿಂದ 22ರವೆರೆಗೆ ವಾಡಿಕೆಯ 16 ಮಿಮೀ ಮಳೆ ಆಗಬೇಕಿತ್ತು. ಆದರೆ 47.3 ಮಿಮೀ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಜಿಲ್ಲೆಯಲ್ಲಿ 8 ತಾಲೂಕುಗಳಲ್ಲಿ 4 ತಾಲೂಕಿಗೆ ಜಿಲ್ಲಾಡಳಿತದಿಂದ ನೀರು ಪೂರೈಸಲಾಗುತ್ತಿದೆ. 52 ಗ್ರಾಮಗಳಲ್ಲಿ 81 ಬೋರ್‌ವೆಲ್ ಹಾಗು ಒಂದು ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದರು.
ಕೃಷಿ ಹಾಗು ತೋಟಗಾರಿಕೆ ಇಲಾಖೆಗಳು ಬೀಜ ಹಾಗು ಗೊಬ್ಬರ ವಿತರಿಸಲು ಸಕಲ ರೀತಿಯಲ್ಲೂ ಸಿದ್ಧವಾಗಿವೆ. ಜಿಲ್ಲೆಯಲ್ಲಿ ಈ ಬಾರಿ 2,70,840 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಗುರಿ ಹೊಂದಲಾಗಿದೆ. 20,681 ಕ್ವಿಂಟಲ್ ಬೀಜ ಸದ್ಯ ಸಂಗ್ರಹವಿದೆ. ಬೇಡಿಕೆಗಿಂತ ಹೆಚ್ಚೇ ಬೀಜಗಳಿವೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ವಿತರಣೆಗೆ ಜಿಲ್ಲಾಡಳಿತ ಸಜ್ಜಾಗಿದ್ದು, ರೈತರು ಸದುಪಯೋಗಪಡಿಸಿಕೊಳ್ಳಬೇಕು. ಎಲ್ಲಿಯವರೆಗೆ ರೈತರಿಗೆ ಬಿತ್ತನೆ ಬೀಜ ಅವಶ್ಯಕತೆ ಇದೆಯೇ ಅಲ್ಲಿಯವರೆಗೂ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಗೆ 56,843 ಮೆಟ್ರಿಕ್ ಟನ್ಗಳಷ್ಟು ರಸಗೊಬ್ಬರದ ಅವಶ್ಯಕತೆ ಇದೆ. ಸದ್ಯ 33,240 ಮೆಟ್ರಿಕ್ ಟನ್ ಗೊಬ್ಬರ ಸ್ಟಾಕ್ ಇದೆ. ಡಿಎಪಿ, ಯೂರಿಯಾ, ಗೊಬ್ಬರಗಳಿವೆ. ಎಲ್ಲ ರೈತರು ಮುಂಗಾರು ಹಂಗಾಮಿಗೆ ಇದನ್ನು ಉಪಯೋಗ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಇದನ್ನೂ ಓದಿ: ರಾಯಚೂರಲ್ಲಿ ಅಬ್ಬರದ ಮಳೆಗೆ ಧರೆಗುರುಳಿದ ಬೃಹತ್ ಬೇವಿನ ಮರ - Raichur Rain