ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ವಿವಾದಿತ ಅಧ್ಯಾಯವನ್ನು ಪಠ್ಯದಿಂದ ವಾಪಸ್ ಪಡೆದುಕೊಂಡಿದೆ. ಬೆಳಗು-1 ಕೃತಿಯಲ್ಲಿ "ರಾಷ್ಟ್ರೀಯತೆ ಆಚರಣೆಯ ಸುತ್ತ" ಅಧ್ಯಾಯ ಬಹಳ ವಿವಾದ ಸೃಷ್ಟಿ ಮಾಡಿತ್ತು.
ಈ ಅಧ್ಯಾಯದಲ್ಲಿ ಇದು ರಾಷ್ಟ್ರ ವಿರೋಧಿ ಚಿಂತನೆಗಳುಳ್ಳ ಬರಹಗಳಿದೆ ಎಂದು ಆರೋಪಿಸಿ ವಕೀಲ ಅರುಣ್ ಜೋಶಿ ಧ್ವನಿ ಎತ್ತಿದ್ದರು. ಶುಕ್ರವಾರ ಕವಿವಿ ಆವರಣದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಹಾಗೂ ಬಿಜೆಪಿ ಪಕ್ಷದ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಪ್ರತಿಭಟನಾಕಾರರು ಪಠ್ಯವನ್ನು ವಾಪಸ್ ಪಡೆಯುವಂತೆ ಆಕ್ರೋಶ ವ್ಯಕ್ತಪಡಿಸಿ, ಒತ್ತಾಯಿಸಿದ್ದರು. ಹೀಗಾಗಿ, ವಿವಾದಿತ ಅಧ್ಯಾಯವನ್ನು ತಜ್ಞರ ಸಮಿತಿ ವರದಿ ಆಧರಿಸಿ ವಾಪಸ್ ಪಡೆದುಕೊಂಡಿದೆ.
ಪ್ರತಿಭಟನೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕವಿವಿ ಕುಲಸಚಿವ ಎ. ಚನ್ನಪ್ಪ, "ನಿನ್ನೆ ಮೊನ್ನೆಯ ಬೆಳವಣಿಗೆಗಳನ್ನು ಗಮನಿಸಲಾಗಿದೆ. ಪಠ್ಯದ ಬಗ್ಗೆ ಆಕ್ಷೇಪಣೆಗಳು ಬಂದಿದ್ದವು. ಈ ಎಲ್ಲ ವರದಿಗಳನ್ನು ಸರ್ಕಾರಕ್ಕೂ ಸಲ್ಲಿಸಿದ್ದೇವೆ. ತಜ್ಞರ ಸಮಿತಿ ರಚನೆ ಮಾಡಿದ್ದೆವು, ತಜ್ಞರ ಸಮಿತಿ ವರದಿ ಕೊಟ್ಟಿದೆ. ಆ ವರದಿಯನ್ನೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದ್ದೇವೆ. ಆ ವರದಿಯನ್ನು ಇವತ್ತೇ ಅಕಾಡೆಮಿಕ್ ಮತ್ತು ಸಿಂಡಿಕೇಟ್ನಲ್ಲಿ ಇಡುತ್ತೇವೆ. ಈಗಾಗಲೇ ಅಧ್ಯಾಯ ಕೈ ಬಿಟ್ಟಿದ್ದೇವೆ" ಎಂದು ಹೇಳಿದರು.
ಕುಲಪತಿ ಜಯಶ್ರೀ ಮಾತನಾಡಿ, "ತಜ್ಞರ ಸಮಿತಿ ರಚನೆ ಮಾಡಿದ್ದೆವು. ಆ ಸಮಿತಿ ನೀಡಿದ ವರದಿಯಂತೆ ಪಠ್ಯವನ್ನು ಕೈಬಿಟ್ಟಿದ್ದೇವೆ. ನಿಗದಿಯಾಗಿದ್ದ ಪರೀಕ್ಷೆಯನ್ನು ನಾವು ಮುಂದೂಡಿದ್ದೇವೆ. ಪ್ರಶ್ನೆ ಪತ್ರಿಕೆ ವಿಚಾರ ತುಂಬಾ ಗೌಪ್ಯವಾದದ್ದು. ಅದನ್ನು ತೆರೆಯುವ ಹಕ್ಕು ಸ್ವತಃ ನನಗೂ ಇಲ್ಲ. ಪ್ರಶ್ನೆ ಪತ್ರಿಕೆ ಬಗ್ಗೆ ಮಾತನಾಡಲು ಸಿಂಡಿಕೇಟ್ ಹಾಗೂ ಸಿಬ್ಬಂದಿವರ್ಗದ ಸಭೆ ಇದೆ. ಅಲ್ಲಿ ಚರ್ಚೆ ಮಾಡುತ್ತೇವೆ. ವಿಶ್ವವಿದ್ಯಾಲಯದ ನಿಯಮಗಳ ಅನುಸಾರ ನಾವು ಸೂಕ್ತ ಕ್ರಮವನ್ನು ಕೈಗೊಳ್ಳುತ್ತೇವೆ" ಎಂದು ತಿಳಿಸಿದರು.
ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, "ಬೇಗೂರು ಅವರು ಬರೆದ ಪಠ್ಯದಲ್ಲಿ ಸೋನಿಯಾ ಗಾಂಧಿ ಯಾಕೆ ದೇಶದ ಪ್ರಧಾನಿ ಆಗಿಲ್ಲ. ಸೋನಿಯಾಗಾಂಧಿ ದೇಶದ ಪ್ರಧಾನಿಯಾಗಬೇಕಿತ್ತು ಎಂಬ ರೀತಿಯಲ್ಲಿ ಬರೆದಿದ್ದಾರೆ. ಸಂವಿಧಾನ ವಿರೋಧಿ ಆಶಯಗಳನ್ನು ಲೇಖನದಲ್ಲಿ ಬರೆದಿದ್ದಾರೆ. ಧರ್ಮದ ಆಧಾರದಲ್ಲಿ ನಮ್ಮ ದೇಶ ವಿಭಜನೆ ಆಗಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಅದನ್ನೂ ಕೂಡ ಈ ಲೇಖನದಲ್ಲಿ ಪ್ರಶ್ನೆ ಮಾಡಲಾಗಿದೆ. ಹಾಗಾಗಿ ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಅರುಣ್ ಜೋಶಿ ಅವರು ಪ್ರಶ್ನಿಸಿ, ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದರು. ಅದನ್ನು ಬೆಂಬಲಿಸಿ ಎಬಿವಿಪಿ ಹಾಗೂ ಭಾರತೀಯ ಜನತಾ ಪಕ್ಷದಿಂದ ಪ್ರತಿಭಟನೆ ನಡೆಸಲಾಗಿತ್ತು. ಇದರಿಂದ ಎಚ್ಚೆತ್ತ ವಿವಿಯ ಕುಲಪತಿ ಹಾಗೂ ಕುಲಸಚಿವರು ಆ ಪಠ್ಯವನ್ನು ಕೈಬಿಡುತ್ತೇವೆ. ಹಾಗೂ ಪರೀಕ್ಷೆಯಲ್ಲಿ ಆ ಪಠ್ಯದಿಂದ ಪ್ರಶ್ನೆಯನ್ನು ಬಳಸಿಕೊಳ್ಳುವುದಿಲ್ಲ ಎನ್ನುವ ಭರವಸೆಯನ್ನು ಕೊಟ್ಟಿದ್ದಾರೆ. ಇದಷ್ಟೇ ಸಾಕಾಗುವುದಿಲ್ಲ. ಈ ರೀತಿ ಬೇಜವಾಬ್ದಾರಿ ಕೇಲಸ ಆಗದಂತೆ ಜನರಿಗೆ ಒಂದು ಸಂದೇಶ ನೀಡಲು ಈ ಲೇಖನವನ್ನು ಬರೆದವರ ಮೇಲೆ ದೇಶವಿರೋಧಿ ಪ್ರಕರಣವನ್ನು ದಾಖಲಿಸಬೇಕು. ಈ ಲೇಖನ ಪಠ್ಯಪುಸ್ತಕದಲ್ಲಿ ಬರಲು ಕಾರಣೀಭೂತರಾದವರನ್ನು ಅಮಾನತುಗೊಳಿಸಬೇಕು." ಎಂದು ಆಗ್ರಹಿಸಿದರು.
ಇದನ್ನೂ ಓದಿ: ಧಾರವಾಡ ಕವಿವಿ ಪಠ್ಯ ವಿವಾದ; ತಜ್ಞರ ಸಮಿತಿ ರಚನೆ