ತುಮಕೂರು: ತಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿಯ ಎನ್. ಪುರ ಗ್ರಾಮದಲ್ಲಿ ಸಂಪೂರ್ಣವಾಗಿ ಸುಟ್ಟು ಹೋಗಿದ್ದ ರಥಕ್ಕೆ ಭಕ್ತರು ಧಾರ್ಮಿಕ ಸಂಸ್ಕಾರ ನೆರವೇರಿಸಿದರು.
ನಿಟ್ಟೂರು ಹೋಬಳಿಯ ಎನ್. ಪುರ ಗ್ರಾಮದ ಕಲ್ಲೇಶ್ವರ ಸ್ವಾಮಿ ದೇಗುಲದ ರಥಕ್ಕೆ ಆರೋಪಿಯೊಬ್ಬರ ಬೆಂಕಿ ಹಚ್ಚಿ ಸಂಪೂರ್ಣವಾಗಿ ಸುಟ್ಟು ಹಾಕಿದ್ದನು. ಸುಟ್ಟು ಹೋಗಿದ್ದ ರಥವನ್ನು ಹೆಚ್ಚು ದಿನ ನಿಲ್ಲಿಸಬಾರದು ಎಂಬ ಕಾರಣದಿಂದ ಮಂಗಳವಾರ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಸೇರಿಕೊಂಡು ಸುಟ್ಟಿರುವ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಹೋಮ ಹವನಗಳನ್ನು ನೆರವೇರಿಸಿದರು.
ತೇವಡಿಹಳ್ಳಿ ಮಠದ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೆಟ್ಟದಹಳ್ಳಿ ಚಂದ್ರಶೇಖರ ಸ್ವಾಮೀಜಿ ದಿವ್ಯ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಣ್ಣಿನಲ್ಲಿ ಮುಚ್ಚಿ ಸಂಸ್ಕಾರ ಮಾಡಲಾಯಿತು. ರಥ ಕಲ್ಲೇಶ್ವರ ಸ್ವಾಮಿ ಜಾತ್ರೆಯನ್ನು ನಿಲ್ಲಿಸಲು ತೀರ್ಮಾನಿಸಿದ್ದ ಗ್ರಾಮಸ್ಥರು, ಧಾರ್ಮಿಕ ಗುರುಗಳ ಹಾಗೂ ಸ್ವಾಮೀಜಿಗಳ ಸಲಹೆಯಂತೆ ಜಾತ್ರೆಯನ್ನು ಧಾರ್ಮಿಕವಾಗಿ ನೆರವೇರಿಸಲು ಮುಂದಾಗಿದ್ದಾರೆ.
ಕಲ್ಲೇಶ್ವರ ಸ್ವಾಮಿ ರಥ ಇಲ್ಲದೇ ಇರುವುದರಿಂದ ಗ್ರಾಮದಲ್ಲಿರುವ ಸಿದ್ಧಲಿಂಗೇಶ್ವರ ಸ್ವಾಮಿ ದೇವಾಲಯದ ರಥವನ್ನೇ ಬಳಸಿಕೊಂಡು ಈ ಬಾರಿ ಸಂಪ್ರದಾಯ ಬದ್ಧವಾಗಿ ಜಾತ್ರೆಯನ್ನು ನಡೆಸಲಾಗುತ್ತಿದೆ. ಮುಂದಿನ ವರ್ಷದೊಳಗೆ ಅಗತ್ಯವಿರುವ ಕ್ರಮ ಕೈಗೊಂಡು ನೂತನ ರಥೋತ್ಸವವನ್ನು ಮಾಡಿಸಲೇಬೇಕಿದೆ ಎಂದು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಈಗಾಗಲೇ ರಥವನ್ನು ಸುಟ್ಟ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ನಿಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಮನೆ ಮೇಲೆ ವಿದ್ಯುತ್ ತಂತಿ ಬಿದ್ದು ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ