ರಾಮನಗರ: ಡಾ.ಮಂಜುನಾಥ್ ಸ್ಪರ್ಧೆಯನ್ನು ನಾನು ಸ್ವಾಗತ ಮಾಡುತ್ತೇನೆ. ದೇವೇಗೌಡರ ಕುಟುಂಬದವರು ನನಗೆ, ಶಿವಕುಮಾರ್ಗೆ ಹೊಸದಲ್ಲ. ದೇವೇಗೌಡರು, ಕುಮಾರಸ್ವಾಮಿ ಪಕ್ಷ ಸರಿಯಿಲ್ಲವೆಂದು ಅವರ ಅಳಿಯ ಬೇರೆ ಪಕ್ಷದಿಂದ ಸ್ಪರ್ಧಿಸುವ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಜನತಾದಳ ಕಾರ್ಯಕರ್ತರು ಯೋಚನೆ ಮಾಡಬೇಕಿದೆ ಎಂದು ಸಂಸದ ಡಿ ಕೆ ಸುರೇಶ್ ಹೇಳಿದರು.
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ರಾಜ್ಯದಲ್ಲಿ ದೇವೇಗೌಡರ ಪಕ್ಷ ಹಾಗೂ ಅವರಿಗೆ ಜನಪ್ರಿಯತೆ ಇಲ್ಲವೆಂದು ಅವರ ಅಳಿಯ ಬೇರೆ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದಾರೆ, ಇದನ್ನು ಅವರು ಹೇಳಬೇಕು. ಅವರ ಪಕ್ಷ, ನಾಯಕತ್ವ ಅಸ್ತಿತ್ವದಲ್ಲಿ ಇಲ್ಲ ಎನ್ನುವುದನ್ನು ಅರಿತು ಅಳಿಯ ಈ ನಿರ್ಧಾರ ಮಾಡಿದ್ದಾರೆ ಅನಿಸುತ್ತದೆ ಎಂದರು.
ಜೆಡಿಎಸ್ ಕಾರ್ಯಕರ್ತರಿಗೆ ಡಿ ಕೆ ಸುರೇಶ್ ಆಹ್ವಾನ: ಜೆಡಿಎಸ್ ಕಾರ್ಯಕರ್ತರು ನಮ್ಮೊಂದಿಗೆ ಬನ್ನಿ, ಅವರು ಕುಟುಂಬ ಸದಸ್ಯರು ಆ ಪಕ್ಷ ಸರಿ ಇಲ್ಲ ಎಂದು ಬೇರೆ ಪಕ್ಷದಿಂದ ಚುನಾವಣೆಯಲ್ಲಿ ನಿಲ್ಲುತ್ತಿದ್ದಾರೆ. ನಾನೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಗ, ನನ್ನ ಜೊತೆ ಕೈಜೋಡಿಸಿ, ಜಿಲ್ಲೆ ತಾಲೂಕಿನ ಅಭಿವೃದ್ಧಿಗೆ, ರೈತರ ಅಭಿವೃದ್ಧಿಗೆ ಪಕ್ಷ ಭೇದ ಮರೆತು, ನೀವೆಲ್ಲರೂ ಪಕ್ಷವನ್ನು ಬಿಟ್ಟು ಬರಬೇಕು. ನಿಮ್ಮ ಪರವಾಗಿ ನಾನು ಕೆಲಸ ಮಾಡುತ್ತೇನೆ. ನಿಮ್ಮ ಮನೆ ಮಗನಾಗಿ ಕೆಲಸ ಮಾಡಲು ಸಿದ್ದ ಇದ್ದೇನೆ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಮುಕ್ತ ಆಹ್ವಾನ ಕೊಡ್ತಿದ್ದೇನೆ. ಬನ್ನಿ ಕೆಲಸ ಮಾಡೋಣ ಎಂದು ಡಿ ಕೆ ಸುರೇಶ್ ಕರೆ ನೀಡಿದರು.
ಡಾ.ಮಂಜುನಾಥ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ದೇವೇಗೌಡರ ಅಳಿಯ ಅಂತ ಗೊತ್ತು ಹೊರತು, ಮಂಜುನಾಥ ಗೊತ್ತಿಲ್ಲ. ಈಗ ಬೆಂಗಳೂರು ಗ್ರಾಮಾಂತರಕ್ಕೆ ನಿಂತ್ಕೊಂಡಿದ್ದಾರಲ್ಲ ಮೈತ್ರಿ ಅಭ್ಯರ್ಥಿ ಎನ್ನುವುದು ಈಗ ಗೊತ್ತಾಗಿದೆ ಎಂದರು. ಇನ್ನು ಬಿಜೆಪಿಯಲ್ಲಿ ಪ್ರತಾಪ್ ಸಿಂಹಗೆ ಕೈಕೊಟ್ಟಿದ್ದಾರೆ. ಪಕ್ಷ ಕಟ್ಟಿದ ಕಟೀಲ್ರನ್ನು ಏನು ಮಾಡಿದ್ದಾರೆ ಗೊತ್ತಿಲ್ಲ. ನನಗೆ ಗುಂಡಿಕ್ಕಿ ಕೊಲ್ಲುತ್ತೇನೆ ಅಂದೋರು ಬಂಡಾಯ ಎನ್ನುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡಲು ಹೋದವರ ಕಥೆ ಏನಾಗುತ್ತೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಡಿ ಕೆ ಸುರೇಶ್ ಒಳ್ಳೆಯ ಕೆಲಸಗಾರ ಎಂಬ ಪ್ರತಾಪ್ ಸಿಂಹ ಹೇಳಿಕೆ ಉತ್ತರ ನೀಡಿದ ಅವರು, ಪಕ್ಷ ಬೇರೆ, ರಾಜಕೀಯ ಬೇರೆ, ವಿಶ್ವಾಸವೇ ಬೇರೆ. ಬೆಂಗಳೂರು ಹಾಗೂ ಮೈಸೂರು ಎಕ್ಸ್‌ಪ್ರೆಸ್ ಹೈವೇ ವಿಚಾರವಾಗಿ ನಾನು ಅವರು ಒಟ್ಟಿಗೆ ಕೆಲಸ ಮಾಡಿದ್ದೇವೆ.
ನಾನು ಸಲಹೆ ಕೊಟ್ಟಿದ್ದೇನೆ, ಅವರು ಸಲಹೆ ನೀಡಿದ್ದಾರೆ. ಇಬ್ಬರು ಒಟ್ಟಾಗಿ ಕೆಲಸ ಮಾಡಿದ್ದೇವೆ ಎಂದು ಡಿ.ಕೆ.ಸುರೇಶ್ ತಿಳಿಸಿದರು.
ಇದನ್ನೂ ಓದಿ:ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಿದ್ದಕ್ಕೆ, ರಾಮಲಿಂಗಾರೆಡ್ಡಿ, ಸಂತೋಷ್ ಲಾಡ್ ಲೇವಡಿ