ಬೆಂಗಳೂರು: ಮುಡಾ ಪ್ರಕರಣ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶೋಕಾಸ್ ನೋಟಿಸ್ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ರಾಜ್ಯಪಾಲರು ಸಿಎಂಗೆ ಕಳುಹಿಸಿದ ಶೋಕಾಸ್ ನೋಟಿಸ್ನಲ್ಲಿ ಏನಿದೆ ಎಂಬ ವರದಿ ಇಲ್ಲಿದೆ.
ರಾಜ್ಯಪಾಲರು ಜುಲೈ 26ಕ್ಕೆ ಮುಖ್ಯಮಂತ್ರಿಗೆ ಮುಡಾ ಸಂಬಂಧ ಶೋಕಾಸ್ ನೋಟಿಸ್ ಕಳುಹಿಸಿದ್ದಾರೆ. ಈ ನೋಟಿಸ್ನಲ್ಲಿ, 'ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆ 1988ರ ಸೆಕ್ಷನ್ 7, 9, 11, 12, ಮತ್ತು 15ರಲ್ಲಿ ಹಾಗೂ ಭಾರತೀಯ ನ್ಯಾಯ ಸಂಹಿತ 2023ರಡಿ ಸೆಕ್ಷನ್ 59, 61, 62, 201, 227, 228, 229, 239, 314, 316(5), 318(1)(2)(3), 319, 322, 324 (1)(2)(3), 335, 336, 338 ಮತ್ತು 340ರಲ್ಲಿ ನಿಮ್ಮ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡುವಂತೆ ಕೋರಿ ಟಿ.ಜೆ.ಅಬ್ರಾಹಂ ಮನವಿ ಸಲ್ಲಿಸಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆ ಹಾಗೂ ಬಿಎನ್ಎಸ್ ಕಾಯ್ದೆಯ ವಿವಿಧ ಸೆಕ್ಷನ್ಗಳನ್ನು ಉಲ್ಲಂಘಿಸಿ ಮುಡಾದಲ್ಲಿ ನೀವು ಮತ್ತು ಕುಟುಂಬ ಸದಸ್ಯರು ಬದಲಿ ಪರಿಹಾರ ನಿವೇಶನಗಳನ್ನು ಪಡೆದಿರುವುದಾಗಿ ಟಿ.ಜೆ.ಅಬ್ರಾಹಂ ಆರೋಪಿಸಿದ್ದಾರೆ' ಎಂದು ಉಲ್ಲೇಖಿಸಿದ್ದಾರೆ.
'ನಿಮ್ಮ ಮೇಲಿನ ಆರೋಪಗಳು ಗಂಭೀರ ಸ್ವರೂಪದ್ದಾಗಿದೆ. ಮೇಲ್ನೋಟಕ್ಕೆ ಗೋಚರವಾಗುತ್ತಿದೆ. ಜುಲೈ 18ರಂದು ನಿಮ್ಮ ವಿರುದ್ಧ ಮೈಸೂರಿನ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಅರ್ಜಿದಾರ ದೂರು ದಾಖಲಿಸಿದ್ದಾರೆ. ಹೀಗಾಗಿ, ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಯ ಸೆಕ್ಷನ್ 17A ಮತ್ತು 19 ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತ ಕಾಯ್ದೆಯ ಸೆಕ್ಷನ್ 218ರಡಿಯ ನಿಯಮದಂತೆ ಅರ್ಜಿದಾರನ ಮನವಿಯ ಮೇಲೆ ಕ್ರಮ ಕೈಗೊಳ್ಳುವ ಅಗತ್ಯ ಇದೆ' ಎಂದು ಶೋಕಾಸ್ ನೋಟಿಸ್ನಲ್ಲಿ ರಾಜ್ಯಪಾಲರು ತಿಳಿಸಿದ್ದಾರೆ.
'ಸುಪ್ರೀಂ ಕೋರ್ಟ್ ಮತ್ತು ಕರ್ನಾಟಕ ಹೈಕೋರ್ಟ್ನ ವಿವಿಧ ತೀರ್ಪುಗಳ ಆಧಾರದಲ್ಲಿ 23.09.2023ಕ್ಕೆ ಹೊರಡಿಸಲಾದ ಸುತ್ತೋಲೆಯಲ್ಲಿನ ಮಾರ್ಗಸೂಚಿಯನ್ನು ಗಮನದಲ್ಲಿಟ್ಟುಕೊಂಡು, ಆ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯ ಇದೆ' ಎಂದು ನೋಟಿಸ್ನಲ್ಲಿ ಉಲ್ಲೇಖಿಸಿದ್ದಾರೆ.
ಶೋಕಾಸ್ ನೋಟಿಸ್ನಲ್ಲಿ ಹಲವು ಪ್ರಕರಣಗಳ ಕೋರ್ಟ್ ತೀರ್ಪುಗಳನ್ನೂ ಉಲ್ಲೇಖಿಸಲಾಗಿದೆ. ಕ್ರಿಮಿನಲ್ ಪಿಟಿಷನ್ ನಂ.531/2022 (ಡಾ.ಅಶೋಕ್ ವಿ Vs ಲೋಕಾಯುಕ್ತ ಕರ್ನಾಟಕ), ಪ್ರಿಯಾಂಕ ಶ್ರೀವಾಸ್ತವ Vs ಉತ್ತರ ಪ್ರದೇಶ ರಾಜ್ಯ, 2022ರಲ್ಲಿನ ಬಾಬು ವೆಂಕಟೇಶ Vs ಕರ್ನಾಟಕ ರಾಜ್ಯ, 2020ರಲ್ಲಿನ ಯಶವಂತ ಸಿನ್ಹ Vs ಸಿಬಿಐ ತೀರ್ಪುಗಳನ್ನು ಉಲ್ಲೇಖಿಸಲಾಗಿದೆ. ಅದರಂತೆ ರಾಜ್ಯ ಎಲ್ಲಾ ಸೆಷನ್ ಕೋರ್ಟ್ ಹಾಗೂ ವಿಶೇಷ ಕೋರ್ಟ್ಗಳಿಗೆ ಕರ್ನಾಟಕ ಹೈಕೋರ್ಟ್ ಮಾರ್ಗಸೂಚಿ ಹೊರಡಿಸಿ ಜನಪ್ರತಿನಿಧಿಗಳ ವಿರುದ್ಧ ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಯಡಿ ಆರೋಪಿಸಿ ಖಾಸಗಿ ವ್ಯಕ್ತಿ ದೂರು ಸಲ್ಲಿಸಿದರೆ, ಅವುಗಳ ಮೇಲೆ ಕ್ರಮ ವಹಿಸುವಂತೆ ನಿರ್ದೇಶನ ನೀಡಿರುವ ಬಗ್ಗೆ ವಿವರಿಸಿದ್ದಾರೆ.
ಹೀಗಾಗಿ, ಅಭಿಯೋಜನೆಗೆ ಏಕೆ ಅನುಮತಿ ನೀಡಬಾರದು ಎಂದು ಸಕಾರಣದೊಂದಿಗೆ ಸೂಕ್ತ ದಾಖಲೆಗಳ ಸಮೇತ ನಿಮ್ಮ ವಿರುದ್ಧದ ಆರೋಪಗಳ ಬಗ್ಗೆ ಏಳು ದಿನಗಳೊಳಗಾಗಿ ಸ್ಪಷ್ಟನೆ ಸಲ್ಲಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ.
ಇದನ್ನೂ ಓದಿ: ಸಿಎಂಗೆ ರಾಜ್ಯಪಾಲರು ನೀಡಿರುವ ನೋಟಿಸ್ ಹಿಂಪಡೆಯುವಂತೆ ಒತ್ತಾಯಿಸಲು ಸಂಪುಟ ಸಭೆ ನಿರ್ಣಯ - Karnataka Cabinet Meeting