ಶಿವಮೊಗ್ಗ: ದೇಸಿ ಬಿತ್ತನೆ ಬೀಜಗಳ ಮಹತ್ವ ಸಾರಲು ಹಾಗೂ ದೇಸಿ ಆಹಾರ ಪದ್ಧತಿ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನಗರದಲ್ಲಿ ಎರಡು ದಿನ ದೇಸಿ ಬೀಜೋತ್ಸವ ಆಯೋಜಿಸಲಾಗಿತ್ತು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶಿವಮೊಗ್ಗ ಜಿಲ್ಲೆಯ ಸಾವಯವ ಕೃಷಿಕರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ಮಹಾ ವಿಶ್ವವಿದ್ಯಾನಿಲಯ ಹಾಗೂ ಸಹಜ ಸಮೃದ್ಧ ಸಂಸ್ಥೆ ಮೈಸೂರು, ಉಳಿವು ಫೌಂಡೇಶನ್ ಸಹಯೋಗದೊಂದಿಗೆ ದೇಸಿ ಬೀಜೋತ್ಸವ ಕಾರ್ಯಕ್ರಮ ಜರುಗಿತು. ಬೀಜೋತ್ಸವಕ್ಕೆ ಶಿರಸಿ, ಧಾರವಾಡ ಸೇರಿದಂತೆ ರಾಜ್ಯದ ಅನೇಕ ಭಾಗಗಳಿಂದ ದೇಸಿ ಬೀಜ ಉತ್ಪಾದಕರು ಆಗಮಿಸಿದ್ದರು.
ದೇಸಿ ಬೀಜ ಹಾಗೂ ಆಹಾರ ಧಾನ್ಯವನ್ನು ಮಾರಾಟ ಮಾಡುವವರಿಗೆ ಮಳಿಗೆಗಳನ್ನು ಒದಗಿಸಲಾಗಿತ್ತು. ಇದಲ್ಲದೇ, ನಾವು ಸೇವಿಸುತ್ತಿರುವ ಆಹಾರ ಹೇಗೆ ವಿಷಮಯವಾಗಿದೆ ಮತ್ತು ಪ್ರಸ್ತುತ ದೇಸಿ ಬೀಜಗಳ ಮಹತ್ವ ಎಷ್ಟಿದೆ ಎಂಬುದರ ಬಗ್ಗೆ ತಜ್ಞರು ಉಪನ್ಯಾಸ ನೀಡಿದರು. ಇಲ್ಲಿ ಭತ್ತ, ತರಕಾರಿ, ಸಿರಿಧಾನ್ಯ ಸೇರಿದಂತೆ ಅನೇಕ ಬೆಳೆಯ ದೇಸಿ ಬೀಜಗಳ ಪ್ರದರ್ಶನ ಮಾಡಲಾಯಿತು.
ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ: ದೇಸಿ ಬೀಜೋತ್ಸವನ್ನು ಎರಡು ದಿನ ನಡೆಸಲಾಯಿತು. ಇದಕ್ಕೆ ಸಾರ್ವಜನಿಕರಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿಗೆ ಬಂದವರು ದೇಸಿ ಬೀಜವನ್ನು ಹೇಗೆ ತಯಾರಿಸಬೇಕು, ಬಳಕೆ ಹಾಗೂ ಮಹತ್ವದ ಬಗ್ಗೆ ತಿಳಿದುಕೊಂಡರು. ಅಲ್ಲದೇ ಕೆಲವರು ದೇಸಿ ಬೀಜಗಳನ್ನು ಖರೀದಿಸಿದರು.
ದೇಸಿ ಬೀಜೋತ್ಸವ ಆಯೋಜಕರಲ್ಲಿ ಒಬ್ಬರಾದ ಸಂತೋಷ್ ನಾಯ್ಕ್ ಮಾತನಾಡಿ, ದೇಸಿ ಬೀಜೋತ್ಸವ ಎಂಬ ಹೆಸರಿನಲ್ಲಿ ಶಿವಮೊಗ್ಗ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಿವಮೊಗ್ಗ ಜಿಲ್ಲೆಯ ಸಾವಯವ ಕೃಷಿಕರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ಮಹಾ ವಿಶ್ವವಿದ್ಯಾನಿಲಯ ಹಾಗೂ ಸಹಜ ಸಮೃದ್ಧ ಸಂಸ್ಥೆ ಮೈಸೂರು, ಉಳಿವು ಫೌಂಡೇಶನ್ ಸಹಯೋಗದೊಂದಿಗೆ ದೇಸಿ ಬೀಜೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದರು.
ಪ್ರಸ್ತುತ ನಾವು ತಿನ್ನುತ್ತಿರುವ ಆಹಾರ ಸಂಪೂರ್ಣ ಹೈಬ್ರಿಡ್ ಬೀಜಗಳದ್ದು, ಹೈಬ್ರಿಡ್ ಸೀಡ್ಸ್ ಎಂದ ಮೇಲೆ ಅನಿವಾರ್ಯವಾಗಿ ಕೆಮಿಕಲ್ ಕೃಷಿ ಮಾಡಲೇಬೇಕು. ದೇಸಿ ಬೀಜಗಳಲ್ಲಿ ಕೆಮಿಕಲ್ ಇಲ್ಲದೆಯೇ ಬೆಳೆಯುವ ಸಾಮರ್ಥ್ಯ ಇರುತ್ತದೆ ಹಾಗೂ ಈ ಬೀಜಗಳಿಂದ ನಮ್ಮ ದೇಹಕ್ಕೆ ಬೇಕಾಗುವ ಸತ್ವಗಳು ಮತ್ತು ಪೋಷಕಾಂಶಗಳು ಸಿಗುತ್ತವೆ. ಆದ್ದರಿಂದ ರೈತರು ಕೃಷಿಯಲ್ಲಿ ದೇಸಿ ಬೀಜಗಳನ್ನು ಬಳಸಬೇಕು ಮತ್ತು ಶಿವಮೊಗ್ಗ ನಗರದ ಜನತೆ ದೇಸಿ ಆಹಾರ ಪದಾರ್ಥಗಳನ್ನು ಉಪಯೋಗಿಸುವುದರ ಮೂಲಕ ಸಾವಯವ ಕೃಷಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಬೀಜೋತ್ಸವದಲ್ಲಿ ಭಾಗವಹಿಸಿದ್ದ ದೇಸಿ ಬೀಜ ಮಾರಾಟಗಾರರಾದ ಶಿರಸಿಯ ವನಸ್ತ್ರೀ ಸಂಸ್ಥೆಯ ಸಂತೋಷ್ ನಾಯಕ್ ಮಾತನಾಡಿ, ಕಳೆದ 23 ವರ್ಷಗಳಿಂದ ನಮ್ಮ ಸಂಸ್ಥೆ ನಾಟಿ ತರಕಾರಿ ಬೀಜಗಳನ್ನು ಸಂರಕ್ಷಣೆ ಮಾಡುತ್ತಿದೆ. ನಾಟಿ ಸಾಂಪ್ರದಾಯಿಕ ತಳಿಗಳನ್ನು ಉಳಿಸಬೇಕು ಎಂಬ ಉದ್ದೇಶದಿಂದ ನಾವು ಈ ಬೀಜಗಳನ್ನು ಸಂರಕ್ಷಣೆ ಮಾಡುತ್ತಿದ್ದೇವೆ. ಶಿರಸಿಯ ಸುತ್ತಮುತ್ತಲ 35 ಹಳ್ಳಿಗಳಲ್ಲಿ 35 ಮಂದಿ ಬೀಜ ಸಂಗ್ರಹಕರನ್ನು ಗುರುತಿಸಿದ್ದೇವೆ. ಅವರು ತಮ್ಮ ಕೈತೋಟದಲ್ಲಿ ಬೆಳೆದ ತರಕಾರಿ ಬೀಜಗಳನ್ನು ಸಂಗ್ರಹಿಸಿ ನಮ್ಮ ಬೀಜ ಭಂಡಾರಕ್ಕೆ ನೀಡುತ್ತಾರೆ. ನಾವು ಬೀಜಗಳನ್ನು ಸಂಸ್ಕರಣೆ ಮತ್ತು ವಿಂಗಡಣೆ ಮಾಡಿ ಬೇರೆ ಕಡೆಗೆ ಹಂಚುತ್ತೇವೆ ಎಂದು ತಿಳಿಸಿದರು.
ದೇಸಿ ಬೀಜೋತ್ಸವದಲ್ಲಿ ಸಾಕಷ್ಟು ರೈತರನ್ನು ಭೇಟಿಯಾಗಲು ಸಹಾಯವಾಗಿದೆ. ಜೊತೆಗೆ ಈ ಬೀಜಗಳನ್ನು ಹೆಚ್ಚು ಜನರಿಗೆ ತಲುಪಿಸಲು ಅನುಕೂಲವಾಗಿದೆ. ನಾಟಿ ತಳಿಗಳ ಮಹತ್ವವನ್ನು ತಿಳಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಮುಂಗಾರು ಪ್ರಾರಂಭವಾಗಿರುವುದರಿಂದ ಬೀಜಗಳನ್ನು ಹೆಚ್ಚು ಖರೀದಿಸುತ್ತಿದ್ದಾರೆ ಎಂದು ಹೇಳಿದರು.
ದೇಸಿ ಬೀಜೋತ್ಸವ ವೀಕ್ಷಣೆಗೆ ಆಗಮಿಸಿದ್ದ ಕೃಷಿಕ ರೋಡಿಗ್ರೇಸ್ ವಿನ್ಸೆಂಟ್ ಮಾತನಾಡಿ, ದೇಸಿ ಬೀಜೋತ್ಸವ ಹಾಗೂ ದೇಸಿ ಆಹಾರ ಮೇಳವನ್ನು ಮುಂಗಾರು ಮಳೆ ಪ್ರಾರಂಭವಾಗುವ ಸಮಯದಲ್ಲಿ ನಡೆಸಿದ್ದಕ್ಕೆ ಸಂತೋಷವಾಗಿದೆ. ಇಲ್ಲಿ ಸುಮಾರು 250ಕ್ಕೂ ಹೆಚ್ಚು ದೇಸಿ ಭತ್ತದ ತಳಿಗಳನ್ನು ನೋಡಿ ಸಂತಸವಾಯಿತು. ವೈವಿಧ್ಯಮಯವಾದ ಬೀಜಗಳು ಇಲ್ಲಿ ಇದ್ದವು. ಇಲ್ಲಿ ವಿಷಮುಕ್ತ ಆಹಾರದ ಮಹತ್ವವನ್ನು ತಿಳಿದುಕೊಂಡೆ, ವಿಷಮುಕ್ತ ಆಹಾರ ತಿಂದು ನಮ್ಮ ಹಿರಿಯರು ನೂರಾರು ವರ್ಷ ಬದುಕಿದ್ದರು. ಈಗ ವಿಷಯುಕ್ತ ಆಹಾರ ಸೇವಿಸಿ 20 ವರ್ಷಕ್ಕೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಅಲ್ಲದೇ ಕ್ಯಾನ್ಸರ್ಗೆ ತುತ್ತಾಗುತ್ತಿದ್ದಾರೆ ಎಂದು ವೈದ್ಯ ಲೋಕಕ್ಕೆ ಇನ್ನೂ ಗೂತ್ತಾಗುತ್ತಿಲ್ಲ. ನಾವು ಪ್ರತಿದಿನ ತಿನ್ನುತ್ತಿರುವುದು ವಿಷ. ನಾವು ಹೆಚ್ಚು ಆಹಾರ ಬೇಕು ಎಂದು ಭೂಮಿಗೆ ವಿಷ ಹಾಕುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪ್ರವಾಸಿಗರಿಗೆ ಖುಷಿ ಸುದ್ದಿ: ಬನ್ನೇರುಘಟ್ಟದಲ್ಲಿ ಮಾಸಾಂತ್ಯಕ್ಕೆ ಚಿರತೆ ಸಫಾರಿ ಆರಂಭ - Leopard Safari