ಕಾರವಾರ: ಉತ್ತರ ಕನ್ನಡದಲ್ಲಿ ಮುಂಗಾರು ಅಬ್ಬರದ ಬೆನ್ನಲ್ಲೇ ಡೆಂಗ್ಯೂ ಕಾಟ ಕೂಡ ಜೋರಾಗಿದೆ. ಪ್ರತೀ ಮಳೆಗಾಲದ ವೇಳೆ ಹೆಚ್ಚಾಗಿ ಕಂಡು ಬರುವ ಈ ರೋಗ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳ ಪೈಕಿ ಪ್ರಸಕ್ತ ಸಾಲಿನಲ್ಲಿಯೇ ಅತ್ಯಂತ ವೇಗವಾಗಿ ಉಲ್ಬಣಗೊಳ್ಳುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಹೌದು, ಜಿಲ್ಲೆಯಲ್ಲಿ ಈಗಾಗಲೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ ನೂರು ತಲುಪಿದ್ದು, ಆತಂಕದ ವಾತಾವರಣ ನಿರ್ಮಾಣಗೊಂಡಿದೆ. ಜನವರಿಯಿಂದ ಜೂನ್ವರೆಗೆ 1,164 ಶಂಕಿತ ಪ್ರಕರಣಗಳು ಕಂಡು ಬಂದಿದೆ. ಈ ಪೈಕಿ 996 ಜನರ ರಕ್ತದ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿದ್ದು, 100 ಮಂದಿಯಲ್ಲಿ ಸೋಂಕು ಇರುವುದು ಧೃಡಪಟ್ಟಿದೆ. ಮಾತ್ರವಲ್ಲದೇ ಕಳೆದ ಐದು ವರ್ಷಗಳಲ್ಲಿ ಈ ವರ್ಷವೇ ಅತ್ಯಂತ ವೇಗವಾಗಿ ರೋಗ ಉಲ್ಬಣಗೊಳ್ಳುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಅಂಕೋಲಾ ಹಾಗೂ ಹೊನ್ನಾವರದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಳೆಗಾಲ ಪೂರ್ವದಲ್ಲಿ ಶೇಖರಣೆಗೊಂಡ ನೀರಿನಲ್ಲಿ ಉತ್ಪತ್ತಿಯಾದ ಸೊಳ್ಳೆಗಳಿಂದಾಗಿ ಈ ರಿತಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿರುವ ಸಾಧ್ಯತೆ ಇದೆ. ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆ ನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ಇಂತಹ ಲಕ್ಷಣ ಕಂಡು ಬಂದರೆ ಕೂಡಲೇ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಸೊಳ್ಳೆಗಳ ನಿಯಂತ್ರಣವೊಂದೇ ಡೆಂಗ್ಯೂ ರೋಗದ ಹತೋಟಿಗಿರುವ ಪ್ರಮುಖ ಮಾರ್ಗ. ಇದು ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ. ಜನರು ಜಾಗೃತರಾಗಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಮಳೆಗಾಲ ಆರಂಭವಾಗಿರುವ ಕಾರಣ ಎಲ್ಲೆಡೆ ನೀರು ನಿಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ. ಇದರಿಂದಲೇ ರೋಗಗಳು ಹರಡುವುದರಿಂದ, ನೀರು ಖಾಲಿ ಮಾಡಲು ಸಾಧ್ಯವಿಲ್ಲದ ತೊಟ್ಟಿ ಮುಂತಾದುವುಗಳನ್ನು ಸರಿಯಾದ ಮುಚ್ಚಳದಿಂದ ಮುಚ್ಚಿ ಜಾಗ್ರತೆ ವಹಿಸಬೇಕು.
ಎಲ್ಲ ನೀರಿನ ತೊಟ್ಟಿ, ಡ್ರಮ್, ಬ್ಯಾರೆಲ್, ಏರ್‌ಕೂಲರ್ ಇತ್ಯಾದಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ಮತ್ತೆ ಭರ್ತಿ ಮಾಡಿಕೊಳ್ಳಬೇಕು. ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಟೈಯರ್, ಎಳ ನೀರಿನ ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ಮಳೆನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು.
ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕಗಳನ್ನು ಹಾಗೂ ಸೊಳ್ಳೆ ಪರದೆಗಳನ್ನು ಬಳಸಿ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳದಂತೆ ಎಚ್ಚರಿಕೆ ವಹಿಸುವ ಮೂಲಕ ಡೆಂಗ್ಯೂ ನಿಯಂತ್ರಣ ಮಾಡಬಹುದು. ಇದಲ್ಲದೇ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಚಂರಡಿಯಲ್ಲಿ ಹೂಳೆತ್ತದ ಕಾರಣ ಕೊಳಚೆ ನೀರು ಸಂಗ್ರಹವಾಗಿ ಸೊಳ್ಳೆಗಳ ಉತ್ಪತ್ತಿಯಾಗುತ್ತಿದೆ. ಇದೆಲ್ಲವೂ ರೋಗ ಹರಡಲು ಕಾರಣವಾಗಿದ್ದು, ರೋಗದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ರೋಗ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.