ಬೆಳಗಾವಿ: ಕಿತ್ತೂರು ಉತ್ಸವಕ್ಕೆ 200 ವರ್ಷಗಳ ಸಂಭ್ರಮ. ಇದೇ ಅಕ್ಟೋಬರ್ 23, 24 ಮತ್ತು 25ರಂದು ಮೂರು ದಿನಗಳ ಕಾಲ ಕಿತ್ತೂರು ಉತ್ಸವ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ನಡೆದಿದೆ. ಉತ್ಸವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಬೇಕು. ಬೆಳಗಾವಿ ಜಿಲ್ಲೆಗೆ ಉತ್ಸವ ಸೀಮಿತವಾಗದೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕಾರ್ಯಕ್ರಮ ನಡೆಯಬೇಕು ಎಂಬ ಕೂಗು ಕೇಳಿ ಬಂದಿದೆ.
ಹೌದು, ವಿನಾಕಾರಣ ಕಾಲು ಕೆರೆದು ಯುದ್ಧಕ್ಕೆ ಪಂಥಾಹ್ವಾನ ನೀಡಿದ್ದ ಆಂಗ್ಲರಿಗೆ ಕೆಚ್ಚೆದೆಯ ರಾಣಿ ಚನ್ನಮ್ಮ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟಿದ್ದರು. ಕಲೆಕ್ಟರ್ ಥ್ಯಾಕರೆಯನ್ನು ಹತ್ಯೆ ಮಾಡುವ ಮೂಲಕ ಇಡೀ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಬ್ರಿಟಿಷರು ರಣರಂಗದಲ್ಲಿ ಮಕಾಡೆ ಮಲಗಿದ್ದರು. 1824 ಅಕ್ಟೋಬರ್ 23ರಂದು ಕಿತ್ತೂರು ಕಲಿಗಳು ಗೆಲುವಿನ ಕೇಕೆ ಹಾಕಿದ್ದರು. ಆ ವಿಜಯೋತ್ಸವಕ್ಕೀಗ 200 ವರ್ಷಗಳು ಸಂದಿವೆ. ಆ ಐತಿಹಾಸಿಕ ದಿಗ್ವಿಜಯವನ್ನು ಸ್ಮರಣೀಯವಾಗಿಸುವಂತೆ ರಾಜಗುರುಗಳು ಮತ್ತು ಹೋರಾಟಗಾರರು ಆಗ್ರಹಿಸಿದ್ದಾರೆ.
ದೆಹಲಿಯಲ್ಲೂ ಚನ್ನಮ್ಮನ ವಿಜಯೋತ್ಸವ ಆಚರಿಸಿ: ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಆಗಿರುವ ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಈಟಿವಿ ಭಾರತ ಜೊತೆಗೆ ಮಾತನಾಡಿ, "ಚನ್ನಮ್ಮನ ಉತ್ಸವ ಕೇವಲ ಕಿತ್ತೂರಿಗೆ ಸೀಮಿತ ಆಗಬಾರದು. ದೆಹಲಿಯ ಸಂಸತ್ತು, ಬೆಂಗಳೂರು ವಿಧಾನಸೌಧ, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲೂ ಆಚರಣೆ ಮಾಡಬೇಕು. ಅದೇ ರೀತಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಕಾರ್ಯಕ್ರಮ ಆಯೋಜಿಸಬೇಕು. ಕಿತ್ತೂರು ಚನ್ನಮ್ಮನ ಚಲನಚಿತ್ರ ಪ್ರಸಿದ್ಧಿ ಪಡೆಯಲು ಕಾರಣರಾಗಿದ್ದ ಹಿರಿಯ ನಟಿ ಬಿ. ಸರೋಜಾದೇವಿ ಅವರನ್ನು ಈ ಬಾರಿಯ ಉತ್ಸವಕ್ಕೆ ಕರೆಸಬೇಕು. ಸರೋಜಾದೇವಿ ಅವರಿಂದ ಸಂಭಾಷಣೆ ಹೇಳಿಸುವ ಮೂಲಕ ಚನ್ನಮ್ಮಾಜಿ ಹಳೆ ನೆನಪುಗಳನ್ನು ಜನರಿಗೆ ಕಟ್ಟಿ ಕೊಡಬೇಕು. ಚನ್ನಮ್ಮನ ಘನತೆ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಇತಿಹಾಸಕಾರರು, ಸಾಧಕರನ್ನು ಆಹ್ವಾನಿಸಬೇಕು. ಒಟ್ಟಾರೆ ವಿಶೇಷ ಕಾರ್ಯಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದರು.
ಹಿಂದಿ ಪಠ್ಯದಲ್ಲಿ ಚನ್ನಮ್ಮನ ಪಾಠ ಸೇರಿಸಿ: "ಇನ್ನು ಪಠ್ಯ ಪುಸ್ತಕಗಳಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ಧ ಮೊಟ್ಟ ಮೊದಲು ಕ್ರಾಂತಿ ಮಾಡಿದ್ದು ಎಂದು ನಮೂದಿಸಲಾಗಿದೆ. ಆದರೆ, ಅವರಿಗಿಂತ 33 ವರ್ಷ ಮೊದಲು ಬ್ರಿಟಿಷರ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ್ದು ನಮ್ಮ ಕಿತ್ತೂರು ಚನ್ನಮ್ಮ. ಆದರೆ, ಉತ್ತರಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಕ್ಕ ಪ್ರಚಾರ ನಮ್ಮವರಿಗೆ ಸಿಗದಿರುವುದು ದುರಂತ. ನಾವು ಹೇಗೆ ನಮ್ಮ ಪಠ್ಯದಲ್ಲಿ ಝಾನ್ಸಿ ರಾಣಿ ಬಗ್ಗೆ ಓದುತ್ತೇವೋ, ಅದೇ ರೀತಿ ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ತಂದು ಉತ್ತರಭಾರತದ ಶಾಲಾ ಪಠ್ಯದಲ್ಲಿ ನಮ್ಮ ಕಿತ್ತೂರು ಚನ್ನಮ್ಮನ ಶೌರ್ಯ, ಸಾಹಸ, ಪರಾಕ್ರಮದ ಬಗ್ಗೆ ಅಲ್ಲಿನ ಮಕ್ಕಳು ಓದುವಂತೆ ಮಾಡಬೇಕು" ಎಂಬುದು ಅಶೋಕ ಚಂದರಗಿ ಅವರ ಆಗ್ರಹ.
ರಾಷ್ಟ್ರಪತಿ ಅವರನ್ನು ಆಹ್ವಾನಿಸಿ: ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಮಾತನಾಡಿ, "ಅನೇಕ, ರಾಜ-ಮಹಾರಾಜರು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದಿಂದ ಇಂದು ನಾವು ಸ್ವತಂತ್ರವಾಗಿ ಬದುಕುತ್ತಿದ್ದೇವೆ. ಬ್ರಿಟಿಷರ ವಿರುದ್ಧ ಕಿತ್ತೂರು ಸಂಸ್ಥಾನ ಗೆಲುವು ಸಾಧಿಸಿ 2ನೇ ಶತಮಾನಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ. 200ನೇ ವಿಜಯೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸೋದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ, ಸರ್ಕಾರ ಮತ್ತು ಜಿಲ್ಲಾಡಳಿತ ಉತ್ಸವಕ್ಕೆ ಇನ್ನಿಲ್ಲದ ತಯಾರಿ ನಡೆಸಿದೆ. ಆದರೆ, ಉತ್ಸವ ಜಿಲ್ಲೆಗೆ ಸೀಮಿತವಾಗದೇ ಇಡೀ ರಾಜ್ಯ ಮತ್ತು ರಾಷ್ಟ್ರದಲ್ಲಿ ವಿಜಯೋತ್ಸವದ ಮಹತ್ವ ತಿಳಿಸುವ ಕೆಲಸ ಆಗಬೇಕು. ರಾಷ್ಟ್ರಮಟ್ಟದಲ್ಲಿ ಪ್ರಚಾರ ಸಿಗುವ ನಿಟ್ಟಿನಲ್ಲಿ ರಾಷ್ಟ್ರಪತಿಯವರನ್ನು ಆಹ್ವಾನಿಸಬೇಕು. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಅಮೋಘ ಸಾಧನೆಗೈದವರನ್ನು ಕರೆಸಿ ಉತ್ಸವ ಉದ್ಘಾಟಿಸಿದರೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ಬರುತ್ತದೆ. ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳು ನಡೆಯಬೇಕು. ರಾಜ್ಯ ಮತ್ತು ರಾಷ್ಟ್ರ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು" ಎಂದು ಆಶಿಸಿದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, "200ನೇ ವಿಜಯೋತ್ಸವದಲ್ಲಿ ನಾವು ಇದ್ದೇವೆ ಎನ್ನುವುದೇ ನಮ್ಮ ಸೌಭಾಗ್ಯ. ರಾಷ್ಟ್ರ, ರಾಜ್ಯ ನಾಯಕರನ್ನು ಕಿತ್ತೂರು ಉತ್ಸವಕ್ಕೆ ಆಹ್ವಾನಿಸಲಿದ್ದೇವೆ. ದೇಶದ ಮೂಲೆ ಮೂಲೆಗೂ ಚನ್ನಮ್ಮನ ಸಾಹಸಗಾಥೆ ಪರಿಚಯಿಸುವ ಕೆಲಸ ಮಾಡುತ್ತೇವೆ. ಒಟ್ಟಾರೆ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಹಗಳಿರುಳು ಶ್ರಮಿಸುತ್ತಿದ್ದು, ನಾಡಿನ ಜನತೆ ಕೂಡ ಸಹಕಾರ ನೀಡಬೇಕು." ಎಂದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, "ಈ ಬಾರಿ ಚನ್ನಮ್ಮನ ಕಿತ್ತೂರು ಉತ್ಸವವನ್ನು ವಿಶ್ವಮಟ್ಟದ ಕಾರ್ಯಕ್ರಮವನ್ನಾಗಿ ವಿಜೃಂಭಣೆಯಿಂದ ಆಚರಿಸಲು ಎಲ್ಲ ಸಿದ್ಧತೆ ಕೈಗೊಂಡಿದ್ದೇವೆ. ರಾಣಿ ಚನ್ನಮ್ಮನ ಭಾವಚಿತ್ರವಿರುವ ಅಂಚೆ ಚೀಟಿ ಬಿಡುಗಡೆಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಏರ್ ಶೋ ಆಯೋಜಿಸುತ್ತೇವೆ. ಇಡೀ ವಿಶ್ವ ಕಿತ್ತೂರಿನತ್ತ ತಿರುಗಿ ನೋಡುವಂತೆ ವಿಜಯೋತ್ಸವ ಆಚರಿಸಲಾಗುವುದು" ಎಂದು ತಿಳಿಸಿದರು.
ಇದನ್ನೂ ಓದಿ: ಅಂತಾರಾಷ್ಟ್ರೀಯ ಮಟ್ಟದ ಕಿತ್ತೂರು ಉತ್ಸವ ಆಚರಿಸಲು ಸಕಲ ಸಿದ್ಧತೆ: ಡಿಸಿ ಮೊಹಮ್ಮದ್ ರೋಷನ್ - KITTURU UTSAVA