ಚಿತ್ರದುರ್ಗ: ಚಿತ್ರದುರ್ಗದಲ್ಲಿ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಲೋಕಸಭಾ ಬಿಜೆಪಿ ಟಿಕೆಟ್ ಆಕಾಂಕ್ಷಿ, ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಪುತ್ರ ರಘುಚಂದನ್ ಬೆಂಬಲಿಗರು ಇಂದು ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು.
ನಗರದ ಬಿಜೆಪಿ ಕಚೇರಿಯವರೆಗೂ ಮೆರವಣಿಗೆ ನಡೆಸಿದ ಅಭಿಮಾನಿಗಳು, ದಾರಿ ಉದ್ದಕ್ಕೂ, ಗೋ ಬ್ಯಾಕ್ ನಾರಾಯಣಸ್ವಾಮಿ, ಗೋವಿಂದ ಕಾರಜೋಳ, ಸ್ಥಳೀಯರಿಗೆ ಟಿಕೆಟ್ ನೀಡಿ, ನಮಗೆ ಸ್ಥಳೀಯರು ಬೇಕು ಹೊರಗಿನವರು ಬೇಡ, ಸಂಸದರು ನಮ್ಮ ಕಷ್ಟ ಕೇಳಬೇಕು, ಅವರು ಕಷ್ಟವನ್ನು ನಾವು ಕೇಳುವುದಲ್ಲ ಎಂಬ ಘೋಷಣೆಗಳನ್ನು ಕೂಗಲಾಯಿತು.
ಕಳೆದ ಎಲ್ಲ ಚುನಾವಣೆಗಳಲ್ಲಿ ಬೇರೆ ಜಿಲ್ಲೆಗಳಿಂದ ಬಂದ ಅಭ್ಯರ್ಥಿಗಳನ್ನು ನಮ್ಮ ಮನೆಯ ಮಕ್ಕಳಂತೆ ಹೋರಾಟ ಮಾಡಿ ಗೆಲ್ಲಿಸಿದ್ದೇವೆ, ಅವರಿಂದ ನಮ್ಮ ಜಿಲ್ಲೆಗೆ ಯಾವುದೇ ಕೊಡುಗೆಯೂ ಇಲ್ಲ, ನಮ್ಮ ಕಾರ್ಯಕರ್ತರಿಗೂ ಬೆಲೆಯೂ ಇಲ್ಲದಂತಾಗಿದೆ, ಗೆಲ್ಲುವವರೆಗೂ ಅಷ್ಟೇ ನಮ್ಮನ್ನು ಬಳಸಿಕೊಳ್ಳುತ್ತಾರೆ, ನಂತರ ಜಿಲ್ಲೆಯನ್ನು, ಜನರನ್ನು ಕಡೆಗಣಿಸುತ್ತಾರೆ, ಈ ಹಿನ್ನೆಲೆ ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವ ಹಾಗೂ ಕಾರ್ಯಕರ್ತರ ಬಗ್ಗೆ ಕಾಳಜಿ ಹೊಂದಿರುವ ಸ್ವಾಭಿಮಾನದ ಅಭ್ಯರ್ಥಿಯಾದ ರಘುಚಂದನ್ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಕಿಟಕಿ ಗಾಜು ಪುಡಿ ಪುಡಿ: ರಘುಚಂದನ್ ಅವರಿಗೆ ಬಿಜೆಪಿ ಪಕ್ಷದ ಟಿಕೆಟ್ ನೀಡುವಂತೆ ಆಗ್ರಹಿ ನಡೆಸುತ್ತಿರುವ ಪ್ರತಿಭಟನೆಯ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಬಿಜೆಪಿ ಪಕ್ಷದ ಕಚೇರಿಯ ಕಿಟಕಿ ಗಾಜು ಒಡೆದಿದ್ದಾರೆ. ಇದರಿಂದ ಕಿಟಕಿಯ ಗಾಜು ಪುಡಿ ಪುಡಿಯಾಗಿದೆ. ಬಿಜೆಪಿ ಪಕ್ಷದ ಕಚೇರಿಗೆ ನುಗ್ಗಲು ಯತ್ನಿಸಿದ ಅಭಿಮಾನಿಗಳನ್ನು ಪೊಲೀಸರು ತಡೆಯುವ ಮುಂದಾಗುವ ಅನಾಹುತವನ್ನು ನಿಯಂತ್ರಿಸಿದ್ದಾರೆ.
ಇದನ್ನೂ ಓದಿ: ಜೆಡಿಎಸ್ ಸೀಟು ಹಂಚಿಕೆ ಚರ್ಚೆಗೆ ತೆರೆ: ಮೂರು ಕ್ಷೇತ್ರಗಳನ್ನು ಬಿಟ್ಟುಕೊಟ್ಟ ಬಿಜೆಪಿ - Lok Sabha Election