ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಗೆ ಕಳೆದ ನಾಲ್ಕು ವರ್ಷಗಳ ಹಿಂದೆ ರೈಲ್ವೆ ಸಂಪರ್ಕ ಒದಗಿಸಲಾಗಿತ್ತು. ಪ್ರತಿನಿತ್ಯ ಸಂಚರಿಸುತ್ತಿದ್ದ ರೈಲನ್ನು ಕೋವಿಡ್ 19 ಲಾಕ್‌ಡೌನ್ ಸಂದರ್ಭದಲ್ಲಿ ಸ್ಥಗಿತಗೊಳಿಸಲಾಗಿತ್ತು. ಆದರೆ ಕೋವಿಡ್ ಮುಗಿದು ಜನಜೀವನ ಎಂದಿನಂತೆ ಶುರುವಾಗಿದೆ. ಹೀಗಿದ್ದರೂ ರೈಲು ಸೇವೆ ಪುನರಾರಂಭವಾಗದೇ ಜನರು ಪರದಾಡುವಂತಾಗಿದೆ.
ಕಾಳಿ ನದಿ ದಡದಲ್ಲಿರುವ ದಾಂಡೇಲಿಯಲ್ಲಿ ಪ್ರವಾಸೋದ್ಯಮ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಧಾರವಾಡ ಮಾರ್ಗದಿಂದ ದಾಂಡೇಲಿಗೆ ಆಗಮಿಸುವ ಪ್ರವಾಸಿಗರು ಹಾಗೂ ಕೆಲಸದ ನಿಮಿತ್ತ ಬೆಂಗಳೂರು ಸೇರಿದಂತೆ ವಿವಿಧೆಡೆ ತೆರಳುವ ದಾಂಡೇಲಿ ಭಾಗದ ಸಾರ್ವಜನಿಕರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ 2019ರಲ್ಲಿ ದಾಂಡೇಲಿಯ ಅಂಬೇವಾಡಿಯವರೆಗೆ ರೈಲು ಸಂಚಾರ ಪ್ರಾರಂಭಿಸಲಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಸುರೇಶ್ ಅಂಗಡಿ ಧಾರವಾಡದ ಅಳ್ನಾವರದಿಂದ ದಾಂಡೇಲಿಯ ಅಂಬೇವಾಡಿಯವರೆಗಿನ ರೈಲ್ವೆ ಮಾರ್ಗಕ್ಕೆ ಚಾಲನೆ ನೀಡಿದ್ದರು. ಆದರೆ ಕೇವಲ ಎರಡೇ ತಿಂಗಳು ಸಂಚರಿಸಿ ರೈಲು ನಿಂತು ಹೋಗಿದೆ. ಅಲ್ಲಿಂದ ಈವರೆಗೂ ಪ್ರಾರಂಭವಾಗಿಲ್ಲ.
ಸ್ಥಳೀಯರಾದ ಅಕ್ರಮ್ ಖಾನ್ ಮಾತನಾಡಿ, "ಧಾರವಾಡದವರೆಗೆ ರೈಲು ಸೇವೆ ಪುನಃ ಪ್ರಾರಂಭಿಸಬೇಕು. ಬೆಂಗಳೂರು ರೈಲನ್ನು ದಾಂಡೇಲಿವರೆಗೂ ವಿಸ್ತರಿಸಬೇಕು" ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಸ್ವಾತಂತ್ರಪೂರ್ವದಲ್ಲಿಯೇ ದಾಂಡೇಲಿಗೆ ರೈಲ್ವೆ ಸಂಪರ್ಕವಿತ್ತು. ಅದು ನಿಂತುಹೋದ ಬಳಿಕ ಹಲವು ವರ್ಷಗಳ ಹೋರಾಟದ ಫಲವಾಗಿ ದಾಂಡೇಲಿಗೆ ಮತ್ತೆ ರೈಲ್ವೆ ಸಂಪರ್ಕ ಒದಗಿಸಲಾಗಿತ್ತು. ಇದಾದ ನಂತರದಲ್ಲಿ ಕೋವಿಡ್ನಿಂದಾಗಿ ಮತ್ತೆ ನಿಂತು ಹೋಗಿದೆ. ಹಲವು ಬಾರಿ ರೈಲ್ವೆ ವ್ಯವಸ್ಥೆಯನ್ನು ಮತ್ತೆ ಪ್ರಾರಂಭ ಮಾಡುವಂತೆ ಒತ್ತಾಯಿಸಿದರೂ ಯಾರೂ ಸ್ಪಂದಿಸುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರು.
ಇದನ್ನೂ ಓದಿ: ದಕ್ಷಿಣ ಕನ್ನಡ: ಸಾವಿರಕ್ಕೂ ಹೆಚ್ಚು ವಿದೇಶಿ ಹಣ್ಣಿನ ಗಿಡಗಳನ್ನು ಬೆಳೆದ ಪ್ರಗತಿಪರ ಕೃಷಿಕ