ಬೆಂಗಳೂರು: ಕಪ್ಪತ್ತಗುಡ್ಡ ವನ್ಯಜೀವಿಧಾಮದ 10 ಕಿ.ಮೀ ವ್ಯಾಪ್ತಿಯಲ್ಲಿನ ಗಣಿಗಾರಿಕೆ ಅವಕಾಶ ಕೋರಿದ್ದ ಒಟ್ಟು 28 ಪ್ರಸ್ತಾವನೆಗಳನ್ನು ಮುಂದೂಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆ ನಿರ್ಧರಿಸಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ನಡೆದ 16ನೇ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚಿಸಿ, ಕಪ್ಪತ್ತಗುಡ್ಡ ವನ್ಯಜೀವಿಧಾಮದ 1 ಕಿ.ಮೀ ವ್ಯಾಪ್ತಿಯಲ್ಲಿ ಚಾಲನೆಯಲ್ಲಿರುವ ಅನಧಿಕೃತ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ನೋಟಿಸ್ ನೀಡುವಂತೆ ಸೂಚಿಸಲಾಗಿತ್ತು. ಈ ಬಗ್ಗೆ ಪರಿಶೀಲಿಸಿ, ಅನಧಿಕೃತ ಗಣಿಗಾರಿಕೆಗಳ ಕುರಿತು ವಾಸ್ತವಾಂಶದ ವರದಿ ನೀಡುವಂತೆ ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶ ಮತ್ತು ಕಾನೂನಿನ ಅಂಶಗಳನ್ನು ಒಳಗೊಂಡ ವರದಿಯೊಂದಿಗೆ ಮೇಲ್ಕಂಡ ಪ್ರಸ್ತಾವನೆಗಳನ್ನು ಮುಂದಿನ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಮರು ಮಂಡಿಸಲು ಸೂಚಿಸಲಾಗಿತ್ತು. ಅದರಂತೆ ಈ ಪ್ರಸ್ತಾಪ ಮಂಡನೆಯಾಯಿತು. ಆದರೆ, ಈ ಪ್ರಸ್ತಾವನೆ ಮುಂದೂಡಲು ತೀರ್ಮಾನಿಸಲಾಯಿತು ಎಂದು ಸಚಿವ ಅರಣ್ಯ, ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲಿಗೆ ಸಮ್ಮತಿ: ಇನ್ನು ಬೆಂಗಳೂರು ನಗರದ ಹೆಸರುಘಟ್ಟ ಹುಲ್ಲುಗಾವಲಿನ ಪ್ರದೇಶವನ್ನು “ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ” ಎಂದು ಘೋಷಿಸಲು ರಾಜ್ಯ ವನ್ಯಜೀವಿ ಮಂಡಳಿ ಸಭೆ ಅಂಗೀಕಾರ ನೀಡಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
2021ರ ಜನವರಿ 19ರಂದು ನಡೆದಿದ್ದ 15ನೇ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಈ ಪ್ರಸ್ತಾಪ ತಿರಸ್ಕರಿಸಲಾಗಿತ್ತು. ರಾಜ್ಯ ಹೈಕೋರ್ಟ್ ಈ ಕುರಿತು ಪುನರ್ ನಿರ್ಣಯ ಕೈಗೊಳ್ಳುವಂತೆ ಸೂಚಿಸಿತ್ತು. ಬೆಂಗಳೂರು ಕಾಂಕ್ರೀಟ್ ಕಾಡಾಗಿ ಮಾತ್ರ ಬೆಳೆಯದೆ, ಹಚ್ಚ ಹಸುರಿನ ತಾಣವಾಗಿಯೂ ಉಳಿಯಬೇಕು ಎಂಬ ಮಹತ್ವದ ಉದ್ದೇಶದಿಂದ ನಮ್ಮ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದರು.
ಹೆಸರಘಟ್ಟ ಹುಲ್ಲುಗಾವಲಿನ 356 ಎಕರೆ, ಬೈರಾಪುರ ಕೆರೆಯ 383 ಎಕರೆ, ಬೈತಾ ಕೆರೆಯ 165 ಎಕರೆ, ಹೆಸರಘಟ್ಟ ಕೆರೆಯ 1356 ಎಕರೆ ಮತ್ತು ಪಶುಸಂಗೋಪನಾ ಇಲಾಖೆಯವರ ಸ್ವಾಧೀನದಲ್ಲಿರುವ 2750 ಎಕರೆ ಸೇರಿ ಒಟ್ಟು 5010 ಎಕರೆ ಪ್ರದೇಶವನ್ನು ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972 ಸೆಕ್ಷನ್ 36ಎ ಪ್ರಕಾರ “ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ”ವನ್ನಾಗಿ ಘೋಷಿಸಲು ಸಭೆ ಸಮ್ಮತಿಸಿದೆ ಎಂದು ವಿವರಿಸಿದರು.
ಶೆಟ್ಟಿಹಳ್ಳಿ ಗಡಿ ಸಮಸ್ಯೆ ಪರಿಹಾರಕ್ಕೆ ಪುನರ್ ರಚಿತ ಸೂತ್ರ: ಭದ್ರಾವತಿ ವಿಭಾಗದ ಚೋರಡೇನಹಳ್ಳಿ ರಾಜ್ಯ ಅರಣ್ಯ ಮತ್ತು ಕಾಯಿತೊಟ್ಲು ಕಿರು ಅರಣ್ಯ ಪ್ರದೇಶಗಳನ್ನು ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಪ್ರದೇಶಕ್ಕೆ ಸೇರಿಸಲು ವನ್ಯಜೀವಿ ಮಂಡಳಿ ಸಮ್ಮತಿಸಿದೆ.
ಶಿವಮೊಗ್ಗ ನಗರದ ಜನರ ಹಿತ ಕಾಯುವ ನಿಟ್ಟಿನಲ್ಲಿ ಶೆಟ್ಟಿಹಳ್ಳಿ ಅಭಯಾರಣ್ಯದ ಗಡಿಯ ಪರಿಷ್ಕೃತ ಪ್ರಸ್ತಾವನೆ ಪರಿಶೀಲಿಸಿ ಒಟ್ಟು 395.64 ಚದರ್ ಕಿಲೋ ಮೀಟರ್ಗೆ ನಿಗದಿ ಪಡಿಸಲಾಗಿದ್ದು, ಇದಕ್ಕೆ ಮಂಡಳಿ ತನ್ನ ಅಂಗೀಕಾರ ನೀಡಿದ್ದು, ಕೇಂದ್ರೀಯ ವನ್ಯಜೀವಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಸಚಿವರು ತಿಳಿಸಿದ್ದಾರೆ. ಇದರಿಂದ ಶಿವಮೊಗ್ಗ ಜನತೆಗೆ ಎದುರಾಗಿದ್ದ ಅರಣ್ಯ ಗಡಿ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಪಾರಂಪರಿಕ ಕಪ್ಪತಗುಡ್ಡದ ಸುತ್ತಲು 1 ಕಿಮೀ ಗಣಿಗಾರಿಕೆ ನಿಷೇಧಿಸಿದ್ದ ಕ್ರಮ ಎತ್ತಿಹಿಡಿದ ಹೈಕೋರ್ಟ್ - High court upholds ban