ಬೆಂಗಳೂರು: ''ಸ್ಕೈ ಡೆಕ್ ಪಿಪಿಪಿ ಮಾದರಿ ಬದಲಾಗಿ ಸರ್ಕಾರದ ವತಿಯಿಂದಲೇ ಮಾಡಲು ತೀರ್ಮಾನಿಸಲಾಗಿದೆ'' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಬೆಂಗಳೂರು ಶಾಸಕರ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ''ಸರ್ವ ಪಕ್ಷ ಶಾಸಕರು ಬೆಂಗಳೂರಿನ ಕಸ, ಟ್ರಾಫಿಕ್ ಸಮಸ್ಯೆ, ಕುಡಿಯುವ ನೀರು, ಕಾನೂನುಬಾಹಿರ ಕಟ್ಟಡ ನಿರ್ಮಾಣ, ಮೆಟ್ರೋ, ಟನೆಲ್ ರಸ್ತೆ ಬಗ್ಗೆ ಸಲಹೆ, ಅಭಿಪ್ರಾಯ ನೀಡಿದ್ದಾರೆ. ಎಲ್ಲಾ ಶಾಸಕರ ಮೇಲೆ ಬೆಂಗಳೂರು ಜವಾಬ್ದಾರಿ ಇದೆ. ಪಕ್ಷಭೇದ ಮರೆತು ಉತ್ತಮ ಸಲಹೆ ನೀಡಿದ್ದಾರೆ'' ಎಂದು ತಿಳಿಸಿದರು.
ಸರ್ಕಾರದಿಂದಲೇ ಸ್ಕೈ ಡೆಕ್ ನಿರ್ಮಾಣ: ''ನೈಸ್ ರಸ್ತೆಯ ಹೆಮ್ಮಿಗೆಪುರ ಬಳಿ ಸ್ಕೈ ಡೆಕ್ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು. ಇದಕ್ಕಾಗಿ 10 ಜಾಗಗಳನ್ನು ಗುರುತು ಮಾಡಿದ್ದೆವು. 20 ಕಿ.ಮೀ ವ್ಯಾಪ್ತಿಯಲ್ಲಿ ಮಾಡದಂತೆ ಏರ್ ಫೋರ್ಸ್, ಹೆಚ್ಎಎಲ್, ಏರ್ ಪೋರ್ಟ್ ನವರು ಹೇಳಿದ್ದಾರೆ. 350 ಮೀಟರ್ ಎತ್ತರದ ವೀಕ್ಷಣಾ ಗೋಪುರ ಇದಾಗಿರಲಿದೆ. ಹೀಗಾಗಿ ಈಗ ಅಂತಿಮವಾಗಿ ನೈಸ್ ರಸ್ತೆಯಲ್ಲಿ ಜಾಗ ನೋಡಿದ್ದೇವೆ. ಅದಕ್ಕೆ ಎಲ್ಲರೂ ಒಪ್ಪಿಕೊಂಡಿದ್ದಾರೆ. ನೈಸ್ ಸಂಸ್ಥೆಗೆ ಸೇರಿದ ಜಾಗ ಇದೆ. ನೈಸ್ ಸಂಸ್ಥೆ ಬಳಿ ಸಮಾಲೋಚಿಸಿ ಜಾಗ ಪಡೆದು ನಿರ್ಮಾಣ ಮಾಡಲು ತೀರ್ಮಾನ ಮಾಡಲಾಗಿದೆ'' ಎಂದು ತಿಳಿಸಿದರು.
''ಈ ಮೊದಲು ಪಿಪಿಪಿಯಡಿ ವೀಕ್ಷಣಾ ಗೋಪುರ ನಿರ್ಮಿಸಲು ಚಿಂತನೆ ಇತ್ತು. ಈಗ ಸರ್ಕಾರನೇ ಸ್ಕೈ ಡೆಕ್ ಮಾಡಲು ಯೋಜಿಸಲಾಗಿದೆ. ಮುಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗುವುದು. ಈ ಮುಂಚೆ ಕಂಠೀರವ ಸ್ಟೇಡಿಯಂ ಬಳಿ ಮಾಡಲು ಪ್ರಸ್ತಾಪ ಇತ್ತು. ಅಲ್ಲಿ ಕಾರ್ಯಸಾಧ್ಯವಿಲ್ಲ ಎಂದಾಯಿತು. ಈಗ ಅದನ್ನು ಬೇರೆಡೆ ಮಾಡಲು ತೀರ್ಮಾನಿಸಿದ್ದೇವೆ. ಅಂದಾಜು 400 - 500 ಕೋಟಿ ರೂ. ವೆಚ್ಚ ಆಗುತ್ತೆ. ಇದಕ್ಕಾಗಿ ಪಾರ್ಕಿಂಗ್ ವ್ಯವಸ್ಥೆ ಸೇರಿ ಒಟ್ಟು 25 ಎಕರೆ ಜಮೀನು ಬೇಕಾಗುತ್ತದೆ'' ಎಂದು ತಿಳಿಸಿದರು.
ಬೆಂಗಳೂರಾದ್ಯಂತ ಡಬಲ್ ಡೆಕ್ಕರ್ ರಸ್ತೆಗೆ ತೀರ್ಮಾನ: ರಾಗಿಗುಡ್ಡದ ಮಾದರಿ ಬೆಂಗಳೂರಿನಾದ್ಯಂತ ಮುಂದೆ ಡಬಲ್ ಡೆಕ್ಕರ್ ರಸ್ತೆ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು. ಈ ಬಗ್ಗೆ ಪ್ರತಿಪಕ್ಷ ನಾಯಕರು ಸಲಹೆ ನೀಡಿದ್ದಾರೆ. ಬೆಂಗಳೂರಲ್ಲಿ ಸದ್ಯ ಭೂ ಸ್ವಾಧೀನ ಮಾಡಲು ಆಗುವುದಿಲ್ಲ. ಹಾಗಾಗಿ ಎಲ್ಲಾ ಕಡೆ ಡಬಲ್ ಡೆಕ್ಕರ್ ಮಾಡಲು ತೀರ್ಮಾನ ಮಾಡಿದ್ದೇವೆ. ಬೆಂಗಳೂರಿನ ಎಲ್ಲ ಕಡೆ ಆ ರೀತಿ ಮಾಡಲು ತೀರ್ಮಾನ ಮಾಡಿದ್ದೇವೆ. ಇದರ ವೆಚ್ಚವನ್ನು ಬಿಬಿಎಂಪಿ ಮತ್ತು ಬಿಎಂಆರ್ಸಿಎಲ್ ಪಾಲುದಾರಿಕೆಯೊಂದಿಗೆ ಜಂಟಿಯಾಗಿ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಟೋಯಿಂಗ್ ಮಾಡಲು ಸೂಚನೆ: ''ರಸ್ತೆಗಳಲ್ಲಿ ಹಲವು ತಿಂಗಳಿಂದ ಪಾರ್ಕಿಂಗ್ ಮಾಡಿರುವ ವಾಹನಗಳನ್ನು ಟೋಯಿಂಗ್ ಮಾಡಲು ಸಂಚಾರ ಪೊಲೀಸರಿಗೆ ಅನುಮತಿ ನೀಡಲಾಗಿದೆ. ರಸ್ತೆ ಪಕ್ಕ ವಾಹನ ನಿಲ್ಲಿಸಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು, ಅಂಥ ವಾಹನಗಳನ್ನು ಟೋಯಿಂಗ್ ಮಾಡಿ, ಅದನ್ನು ನಿಯಮ ಪ್ರಕಾರ ಹರಾಜು ಹಾಕಲು ಸಂಚಾರ ಪೋಲಿಸರಿಗೆ ಸೂಚನೆ ನೀಡಲಾಗಿದೆ'' ಎಂದು ಇದೇ ವೇಳೆ ತಿಳಿಸಿದರು.
''ಟನೆಲ್ ರಸ್ತೆ ಪ್ರಸ್ತಾಪ ಬಗ್ಗೆ ಸರ್ವ ಪಕ್ಷದ ಶಾಸಕರಿಗೆ ಮನದಟ್ಟು ಮಾಡಿದ್ದೇನೆ. ಮೊದಲ ಹಂತವಾಗಿ 18.50 ಕಿ.ಮೀ. ಎಸ್ಟೀಮ್ ಮಾಲ್ ಟು ಸಿಲ್ಕ್ ಬೋರ್ಡ್ ವರೆಗಿನ ಟನೆಲ್ ರಸ್ತೆ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ಪೂರ್ವ - ಪಶ್ಚಿಮ ಸಂಪರ್ಕಿಸುವ ಟನೆಲ್ ರಸ್ತೆಗೂ ವರದಿ ರೆಡಿ ಮಾಡಿದ್ದೇವೆ'' ಎಂದು ತಿಳಿಸಿದರು.
''ನೈಸ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿಯವರೆಗೆ ಮೆಟ್ರೋ ಕಾರಿಡಾರ್ ಮಾಡುವ ಬಗ್ಗೆ ಚಿಂತನೆ ಇದೆ. ''ಕೆಂಗೇರಿಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕಿಸುವ ಮೆಟ್ರೋ ಕಾರಿಡಾರ್ ಮಾಡಲು ಮುಂದಾಗಿದ್ದೇವೆ'' ಎಂದು ತಿಳಿಸಿದರು.
4 ಕಡೆ ಕಸ ವಿಲೇವಾರಿಗೆ ಸ್ಥಳ ಗುರುತಿಸಲು ತೀರ್ಮಾನ: ''ಕಸ ವಿಲೇವಾರಿಗ ಬೆಂಗಳೂರಿನ ಹೊರ ವಲಯದ 4 ಕಡೆ ಜಾಗ ನೋಡಲು ತೀರ್ಮಾನಿಸಲಾಗಿದೆ. ಹೊರವಲಯದಲ್ಲಿ ಸರ್ಕಾರಿ ಜಮೀನು ಗುರುತಿಸಿ ಕಸ ವಿಲೇವಾರಿ ಮಾಡಬೇಕು. ಇಲ್ಲವಾದರೆ ಖಾಸಗಿಯವರಿಂದ ಜಾಗ ಖರೀದಿ ಮಾಡಿ ಕಸ ವಿಲೇವಾರಿ ಘಟಕವನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಕಸ ವಿಲೇವಾರಿ ಮಾಡುವ ಸ್ಥಳದ ಸುತ್ತ ಗೋಡೆಗಳನ್ನು ನಿರ್ಮಿಸಿ, ಸ್ಥಳೀಯರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ'' ಎಂದರು.
ಸಿಎಂ ಜೊತೆ ಚರ್ಚಿಸಿ ವಿಶೇಷ ಅನುದಾನ: ''ಸಭೆಯಲ್ಲಿ ಬೆಂಗಳೂರು ಶಾಸಕರು ಕ್ಷೇತ್ರಗಳಿಗೆ ವಿಶೇಷ ಅನುದಾನ ಕೇಳಿದ್ದಾರೆ. ಈ ಮುಂಚೆ ವಿಶೇಷ ಅನುದಾನ ಕೊಡಲಾಗುತ್ತಿತ್ತು ಎಂದು ಮನವಿ ಮಾಡಿದ್ದರು. ಸಿಎಂ ಹಾಗೂ ಸಚಿವರ ಜೊತೆ ಮಾತನಾಡಿ ಎಲ್ಲೆಲ್ಲಿ ಸಾಧ್ಯವೋ ಅವರಿಗೆ ವಿಶೇಷ ಅನುದಾನ ಕೊಡುವ ಭರವಸೆ ನೀಡಿದ್ದೇನೆ'' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.