ಬೆಂಗಳೂರು: "ರಾಜ್ಯದ ಸಾರಿಗೆ ನಿಗಮಗಳಿಂದ ಪ್ರಯಾಣದರ ಏರಿಕೆ ಬಗ್ಗೆ ಪ್ರಸ್ತಾವ ಬಂದ ನಂತರ ತೀರ್ಮಾನ ಕೈಗೊಳ್ಳಲಾಗುವುದು" ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, "ಬಿಎಂಟಿಸಿ ಬಸ್ ಪ್ರಯಾಣ ದರವನ್ನು 2014ರಲ್ಲಿ ಏರಿಕೆ ಮಾಡಲಾಗಿತ್ತು. ಕೆಎಸ್‌ಆರ್‌ಟಿಸಿ ಸೇರಿದಂತೆ ಉಳಿದ ಮೂರು ನಿಗಮಗಳ ಬಸ್ ಪ್ರಯಾಣ ದರ 2020ರಲ್ಲಿ ಹೆಚ್ಚಿಸಲಾಗಿತ್ತು. ಆ ವರ್ಷಗಳಿಗೆ ಹೋಲಿಸಿದರೆ ಡೀಸೆಲ್ ದರ, ಸಿಬ್ಬಂದಿ ವೇತನ ಸೇರಿದಂತೆ ನಿರ್ವಹಣೆ ವೆಚ್ಚ ಹೆಚ್ಚಾಗಿದೆ. ಬಿಎಂಟಿಸಿ ಸೇರಿ ನಾಲ್ಕೂ ನಿಗಮಗಳು ಈವರೆಗೆ ದರ ಏರಿಕೆ ಬಗ್ಗೆ ಯಾವುದೇ ಪ್ರಸ್ತಾವ ಸಲ್ಲಿಸಿಲ್ಲ. ಅವರು ಮಂಡಳಿ ಸಭೆ ನಡೆಸಿ ಅಲ್ಲಿಂದ ಪ್ರಸ್ತಾವ ಬಂದರೆ, ಅದನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಹೇಳಿದರು.
ವಾಹನಗಳಿಗೆ ಗಡುವು ವಿಸ್ತರಣೆ: "ವಾಹನಗಳಿಹೆ ಎಚ್‌ಎಸ್‌ಆರ್‌ಪಿ ಫಲಕ ಅಳವಡಿಸಿಕೊಳ್ಳುವ ಅವಧಿಯನ್ನು ಸೆಪ್ಟೆಂಬರ್ 15ರವರೆಗೆ ವಿಸ್ತರಿಸಲಾಗಿದೆ. ಅದರ ನಂತರ ವಿಸ್ತರಣೆ ಮಾಡಲಾಗುವುದಿಲ್ಲ" ಎಂದು ಸಚಿವರು ತಿಳಿಸಿದರು.
"ಕೇಂದ್ರ ಸರ್ಕಾರ ಮಾಡಿರುವ ತೀರ್ಮಾನ ಇದಾಗಿದ್ದು, ನಾವು ಅನುಷ್ಠಾನಗೊಳಿಸುತ್ತಿದ್ದೇವೆ. ವಾಣಿಜ್ಯ ವಾಹನಗಳು ಸದೃಢ ಪ್ರಮಾಣಪತ್ರ (ಎಫ್‌ಸಿ) ಪಡೆಯಲು ಪ್ರತಿ ವರ್ಷ ಬರಬೇಕಾಗುತ್ತದೆ. ಆಗ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳದಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ. ಖಾಸಗಿ ಪ್ರಯಾಣಿಕ ವಾಹನಗಳವರೇ ಅಳವಡಿಸಿಕೊಳ್ಳಬೇಕು. ಒಟ್ಟಾರೆ ಶೇ 25ರಷ್ಟು ವಾಹನಗಳ ಮಾಲೀಕರು ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಂಡಿದ್ದಾರೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: 2020ರಿಂದ 2023ರವರೆಗಿನ ನಿವೃತ್ತ, ಮಾಜಿ ಉದ್ಯೋಗಿಗಳಿಗೆ ಕೆಎಸ್‌ಆರ್‌ಟಿಸಿ ಗುಡ್ ನ್ಯೂಸ್!