ತುಮಕೂರು: ಇತ್ತೀಚೆಗೆ ಬೋರ್ಡ್ ಮೀಟಿಂಗ್ ಮಾಡಿ, ಬಸ್ ಟಿಕೆಟ್ ದರ ಹೆಚ್ಚಳ ಮಾಡುವ ವಿಚಾರದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ಸಲ್ಲಿಸಲು ನಿರ್ಣಯ ಕೈಗೊಂಡಿದ್ದೇವೆ ಎಂದು ಶಾಸಕ ಮತ್ತು ಕೆಎಸ್ಆರ್‌ಟಿಸಿ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ 2019ರಲ್ಲಿ ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಆಗಿತ್ತು. ಆ ಸಂದರ್ಭದಲ್ಲಿ ಡೀಸೆಲ್ ಬೆಲೆ 60 ರೂ ಇತ್ತು. ಈಗ 93 ರೂ ಆಗಿದೆ. ವಾಹನ ಬಿಡಿ ಭಾಗಗಳ ಬೆಲೆ ಏರಿಕೆಯಾಗಿದೆ. ನೌಕರರಿಗೆ ಸಂಬಳ ಹೆಚ್ಚಳ ಮತ್ತು ಸವಲತ್ತು ಕೊಡುವುದನ್ನ ಮಾಡಬೇಕಾದರೆ ಟಿಕೆಟ್ ದರ ಹೆಚ್ಚಳ ಆಗಲೇಬೇಕು. ಕೆಎಸ್‌ಆರ್‌ಟಿಸಿ ನೌಕರರ ವೇತನ ಪರಿಷ್ಕರಣೆ 2020ರಲ್ಲಿ ಮಾಡಬೇಕಿತ್ತು. ಇಲ್ಲಿ ತನಕ ಮಾಡಿಲ್ಲ. ಈ ಬಾರಿ 2024ರಲ್ಲಿ ವೇತನ ಪರಿಷ್ಕರಣೆ ಮಾಡ್ತೀವಿ. ಹಾಗಾಗಿ ಟಿಕೆಟ್ ದರ ಹೆಚ್ಚಳ ಆಗುತ್ತೆ. ಕಾಲಕಾಲಕ್ಕೆ ಹೆಚ್ಚಳ ಮಾಡಿದ್ರೆ ಹೀಗೆಲ್ಲ ಆಗ್ತಿರಲಿಲ್ಲ. ಕಳೆದ ತ್ರೈ ಮಾಸಿಕದಲ್ಲಿ ಕೆಎಸ್ಆರ್ಟಿಸಿಗೆ 295 ಕೋಟಿ ನಷ್ಟ ಆಗಿದೆ ಎಂದು ಮಾಹಿತಿ ನೀಡಿದರು.
40 ಹೊಸ ವೋಲ್ವೋ ಬಸ್‌ಗಳ ಖರೀದಿಗೆ ಅನುಮೊದನೆ ಕೊಟ್ಟಿದ್ದೇವೆ. ಈಗಾಗಲೇ 600 ಸಾಮಾನ್ಯ ಬಸ್‌ಗಳನ್ನು ಖರೀದಿಸಲಾಗಿದ್ದು, ಇನ್ನಷ್ಟು ಬಸ್‌ಗಳನ್ನು ಖರೀದಿಸಬೇಕಿದೆ. ಹೀಗಾಗಿ ಟಿಕೆಟ್ ದರ ಹೆಚ್ಚಾಳ ಮಾಡಬೇಕಾಗಿದೆ. ಶೇ.15 ರಿಂದ 20 ರಷ್ಟು ದರ ಹೆಚ್ಚಳ ಮಾಡಲು ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲು ನಿರ್ಣಯ ಮಾಡಿದ್ದೇವೆ. ದರ ಹಚ್ಚಳ ಮಾಡಲಿಲ್ಲವೆಂದರೇ ಸಂಸ್ಥೆ ಉಳಿಯುವುದಿಲ್ಲ. ವೆಚ್ಚವನ್ನು ಸರ್ಕಾರ ಭರಿಸಬೇಕಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿಯಿಂದ ಹೊಸ ಫೀಡರ್ ಬಸ್ ಸೇವೆ - BMTC Feeder Bus Service