ರಾಮನಗರ: ಮೃತಪಟ್ಟಿದ್ದಾನೆಂದು ವೈದ್ಯರಿಂದ ಘೋಷಿಸಲ್ಪಟ್ಟ ವ್ಯಕ್ತಿಗೆ ಜೀವ ಬಂದು ಸ್ವಲ್ಪ ಹೊತ್ತಿನ ಬಳಿಕ ಆತ ಮತ್ತೆ ಮೃತಪಟ್ಟಿರುವ ವಿಚಿತ್ರ ಘಟನೆ ಚನ್ನಪಟ್ಟಣ ತಾಲೂಕಿನ ಹುಚ್ಚಯ್ಯನದೊಡ್ಡಿಯಲ್ಲಿ ನಡೆದಿದೆ. ಕೂಲಿ ಕಾರ್ಮಿಕ ಶಿವರಾಮು (55) ಈ ರೀತಿಯ ಬೆಳವಣಿಗೆಗೆ ಕಾರಣವಾದ ವ್ಯಕ್ತಿ.
ಸೋಮವಾರ ಬೆಳಗ್ಗೆ 6:30ರ ಸುಮಾರಿಗೆ ಶಿವರಾಮು ಕುಸಿದು ಬಿದ್ದಿದ್ದಾರೆ. ಜನರು ವೈದ್ಯರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ವೈದ್ಯರು ತಪಾಸಣೆ ನಡೆಸಿದ್ದಾರೆ. ಈ ವೇಳೆ ಶಿವರಾಮು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಅವರು ದೃಢಪಡಿಸಿದ್ದಾರೆ.
ಶಿವರಾಮು ಮೃತಪಟ್ಟಿರುವ ಬಗ್ಗೆ ಸಂಬಂಧಿಕರಿಗೆ ಮಾಹಿತಿ ಮುಟ್ಟಿಸಿದ ಕುಟುಂಬಸ್ಥರು, ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದರು. ಶವಸಂಸ್ಕಾರಕ್ಕೆ ಮೃತದೇಹವನ್ನು ಕೊಂಡೊಯ್ಯುವಾಗ ಶಿವರಾಮು ದೇಹದಿಂದ ಮತ್ತೆ ಉಸಿರಾಟದ ಸದ್ದು ಕಾಣಿಸಿಕೊಂಡಿದೆ. ಮತ್ತೆ ಜೀವ ಬಂದಿದ್ದರಿಂದ ಕುಟುಂಬಸ್ಥರು ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ವೈದ್ಯರು, ಶಿವರಾಮುನನ್ನು ಪರೀಕ್ಷಿಸಿ ಹಾರ್ಟ್ ಅಟ್ಯಾಕ್ ಆಗುತ್ತಿದೆ, ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಅವರ ಮಾಹಿತಿಯಂತೆ ಕುಟುಂಬಸ್ಥರು ಜಯದೇವ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ, ಮಾರ್ಗಮಧ್ಯೆ ಮತ್ತೆ ಜೀವ ಹೋಗಿದೆ ಎಂದು ಗ್ರಾಮದ ಮಹೇಶ್ ಎಂಬವರು ಘಟನೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.
ಶಿವರಾಮು ಮೃತದೇಹವನ್ನು ಮತ್ತೆ ಹುಚ್ಚಯ್ಯನದೊಡ್ಡಿಗೆ ತಂದ ಸಂಬಂಧಿಕರು, ಮತ್ತೆ ಜೀವ ಬರಬಹುದು ಎಂಬ ಅನುಮಾನದಿಂದ ಮನೆ ಬಳಿ ಕೆಲಹೊತ್ತು ಶವ ಇಟ್ಟಿದ್ದಾರೆ. ಆ ಬಳಿಕ ಶವಸಂಸ್ಕಾರ ಮಾಡಿದ್ದಾರೆ.
ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಕಡಬ: ಎದೆಹಾಲು ಉಣಿಸುವ ವೇಳೆ ಮಗು ಆಕಸ್ಮಿಕ ಸಾವು: ಮಾನಸಿಕವಾಗಿ ನೊಂದ ತಾಯಿ ಆತ್ಮಹತ್ಯೆ - Mother Suicide