ಬೆಂಗಳೂರು: ಕ್ಯಾನ್ಸರ್ನಿಂದ ಬಳಲುತ್ತಿರುವ ಬಾಲಕನ ಪೊಲೀಸ್ ಆಗುವ ಕನಸನ್ನು ಉತ್ತರ ವಿಭಾಗದ ಪೊಲೀಸರು ನನಸು ಮಾಡಿದ್ದಾರೆ. ಬಾಲ್ಯದಿಂದಲೇ ಪೊಲೀಸ್ ಆಗಬೇಕು ಎಂದುಕೊಂಡಿದ್ದ 10 ವರ್ಷದ ಮಲ್ಲಿಕಾರ್ಜುನ್ ಆಸೆಯನ್ನು ಡಿಸಿಪಿ ಸೈದುಲು ಅಡಾವತ್ ಈಡೇರಿಸಿದ್ದಾರೆ.
ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಲ್ಲಿಕಾರ್ಜುನ್, ಪೊಲೀಸ್ ಆಗಬೇಕು ಎಂಬ ಒಲವು ಹೊಂದಿದ್ದರು. ಈ ಬಗ್ಗೆ ಕುಟುಂಬಸ್ಥರಲ್ಲಿ ಹೇಳಿಕೊಂಡಿದ್ದ. ಈತನ ಮನದಾಸೆಯನ್ನ ಆಡಳಿತ ಮಂಡಳಿಗೆ ಕುಟುಂಬಸ್ಥರು ಹೇಳಿಕೊಂಡಿದ್ದರು. ಬೆಂಗಳೂರು ಪರಿಹಾರ ಸಂಸ್ಥೆ ಸಹಯೋಗದೊಂದಿಗೆ ಇಂದು ಒಂದು ದಿನದ ಮಟ್ಟಿಗೆ ಮಲ್ಲಿಕಾರ್ಜುನ್ ಐಪಿಎಸ್ ಅಧಿಕಾರಿಯಾದರು. ಪೊಲೀಸ್ ವೇಷಧಾರಿಯಾಗಿ ಕಚೇರಿಗೆ ಜೀಪ್ನಲ್ಲಿ ಬರುತ್ತಿದ್ದಂತೆ ಡಿಸಿಪಿ ಶೈಲಿಯಲ್ಲಿಯೇ ಅಧಿಕಾರ ಸ್ವೀಕರಿಸಿದರು. ಹೂಗುಚ್ಚ ನೀಡಿ ಬಾಲ ಪೊಲೀಸನನ್ನು ಸ್ವಾಗತ ಮಾಡಲಾಯಿತು. ಪೊಲೀಸ್ ಬ್ಯಾಟನ್ ಮೂಲಕ ಗೌರವ ಸೂಚಿಸಲಾಯಿತು. ಠಾಣೆಯಲ್ಲಿದ್ದ ಎಲ್ಲ ಸಿಬ್ಬಂದಿ ಹಸ್ತಲಾಘವ ಮಾಡಿಕೊಂಡರು. ದೊಡ್ಡವನಾದ ಮೇಲೆ ಡಿಸಿಪಿಯಾಗುವುದಾಗಿ ಮಲ್ಲಿಕಾರ್ಜುನ್ ಇಂಗಿತ ವ್ಯಕ್ತಪಡಿಸಿದರು. ಒಂದು ಭಾವನಾತ್ಮಕ ಕ್ಷಣಕ್ಕೆ ಉತ್ತರ ವಿಭಾಗದ ಡಿಸಿಪಿ ಕಚೇರಿ ಸಾಕ್ಷಿಯಾಗಿತ್ತು.
ಪೊಲೀಸ್ ಇನ್ಸ್ಪೆಕ್ಟರ್ ಆದ 8 ವರ್ಷದ ಬಾಲಕ: ಇತ್ತೀಚೆಗೆ ಶಿವಮೊಗ್ಗ ಕೂಡ ಇಂತಹ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಎಂಟೂವರೆ ವರ್ಷದ ಪುಟ್ಟ ಬಾಲಕನೊಬ್ಬ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿ ಒಂದು ಗಂಟೆ ಕರ್ತವ್ಯ ನಿರ್ವಹಿಸಿ ಗಮನ ಸೆಳೆದಿದ್ದ. ಆಜಾನ್ ಖಾನ್ ಎಂಬ ಬಾಲಕ ಹುಟ್ಟಿನಿಂದಲೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. ತಾನು ಪೊಲೀಸ್ ಆಗಬೇಕು ಎಂಬ ಆಸೆಯನ್ನು ಪೋಷಕರ ಮುಂದೆ ವ್ಯಕ್ತಪಡಿಸಿದ್ದ. ಬಾಲಕ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಪೋಷಕರು ಠಾಣೆಗೆ ತಿಳಿಸಿದ್ದರು. ನಂತರ ಬಾಲಕನ ಆಸೆ ಈಡೇರಿಸಲು ಒಪ್ಪಿಗೆ ಸೂಚಿಸಿತ್ತು. ಆತನ ಆಸೆಯಂತೆ ಪೊಲೀಸ್ ಇನ್ಸ್ಪೆಕ್ಟ್ರ್ ಆಗಿ ಒಂದು ಗಂಟೆ ಕರ್ತವ್ಯ ನಿರ್ವಹಿಸಿದ್ದ.
ಇದನ್ನೂ ಓದಿ: ರಾಜಕೀಯ ಪ್ರವೇಶಕ್ಕೆ ಜಯದೇವ ಆಸ್ಪತ್ರೆ ಮಾಜಿ ನಿರ್ದೇಶಕ ಡಾ. ಮಂಜುನಾಥ್ ಒಪ್ಪಿಗೆ, ನಾಳೆ ಬಿಜೆಪಿ ಸೇರ್ಪಡೆ : ಆರ್ ಅಶೋಕ್