ಬೆಂಗಳೂರು: "ಚನ್ನಪಟ್ಟಣ ಕ್ಷೇತ್ರದಿಂದ ಡಿ.ಕೆ. ಶಿವಕುಮಾರ್ ಸ್ಪರ್ಧೆ ಮಾಡಿದರೆ ರಾಜಕೀಯ ಅಂತ್ಯ" ಎನ್ನುವ ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ "ನನ್ನ ರಾಜಕೀಯ ಅಂತ್ಯ ತೀರ್ಮಾನ ಮಾಡುವುದು ಜನರು. ಅವರು ನೋಡಿಕೊಳ್ಳುತ್ತಾರೆ" ಎಂದು ತಿರುಗೇಟು ನೀಡಿದ್ದಾರೆ.
10ನೇ ಅಂತಾರಾಷ್ಟ್ರೀಯ ಯೋಗದಿನಾಚರಣೆ ನಿಮಿತ್ತ ಇಂದು ವಿಧಾನಸೌಧದ ಮುಂಭಾಗದಲ್ಲಿ ನಡೆದ ಯೋಗೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ದೊಡ್ಡವರಿಗೆಲ್ಲ ನಾನು ಮಾತನಾಡಲು ಹೋಗಲ್ಲ, ನನಗೆ ಸಮಯವಿಲ್ಲ. ನನಗೆ ಶಕ್ತಿ ಕೊಡಿ ಅಂತ ನಾನು ಮತದಾರರಿಗೆ ಕೇಳಿಕೊಂಡಿದ್ದೇನೆ. ನನ್ನ ಹಿಂದೆ ಒಂದು ಶಕ್ತಿ ಇದೆ. ಜನ ಇದ್ದಾರೆ. ಅವರು ನೋಡಿಕೊಳ್ಳುತ್ತಾರೆ. ನನ್ನ ಅಂತ್ಯ ಬರೆಯುವವರು ಜನರು. ವಿಶ್ವಾಸ ಇದ್ದರೆ ಮತ ಹಾಕುತ್ತಾರೆ" ಎಂದು ಹೇಳಿದರು.
ಮುಂದುವರೆದು, ಕನಕಪುರದಲ್ಲಿ ಉಪ ಚುನಾವಣೆ ಬಂದರೆ ದೇಶದ ಸಂಪತ್ತು ಹಾಳಾಗುತ್ತದೆ ಎನ್ನುವ ಶಾಸಕ ಸುರೇಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ "ನಾನು ಕನಕಪುರದ ಎಂಎಲ್ಎ, ಪಕ್ಷದ ಅಧ್ಯಕ್ಷ ಸಹ 'ನನಗೂ ಜವಾಬ್ದಾರಿ ಇದೆ'. ಎಲ್ಲಾ ನನ್ನದೇ ಕ್ಷೇತ್ರ, ನನ್ನದೇ ನಾಯಕತ್ವ. ನಾನು, ಸಿಎಂ ಸಿದ್ದರಾಮಯ್ಯ ಜೊತೆಗೂಡಿ ಎಲೆಕ್ಷನ್ ಮಾಡುತ್ತೇವೆ" ಎಂದರು.
'ಯೋಗೋತ್ಸವ': 10ನೇ ಅಂತಾರಾಷ್ಟ್ರೀಯ ಯೋಗದಿನಾಚರಣೆ ನಿಮಿತ್ತ ಇಂದು ವಿಧಾನಸೌಧದ ಮುಂಭಾಗದಲ್ಲಿ ಆಯುಷ್ ಇಲಾಖೆ ವತಿಯಿಂದ ಆಯೋಜಿಸಿದ್ದ 'ಯೋಗೋತ್ಸವ' ವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಉದ್ಘಾಟಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಶಾಸಕ ಶರವಣ, ಕ್ರೀಡಾಪಟುಗಳಾದ ಅಶ್ವಿನಿ ನಾಚಪ್ಪ, ಕ್ರಿಕೆಟಿಗ ಮನೀಶ್ ಪಾಂಡೆ, ಚಿತ್ರನಟರಾದ ಶರಣ್, ಅನು ಪ್ರಭಾಕರ್ ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಯೋಗ ಕುರಿತು ಡಿ.ಕೆ. ಶಿವಕುಮಾರ್ ಮಾತನಾಡಿ, "ಯೋಗಕ್ಕೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ಯೋಗವು ಯಾವುದೇ ಜಾತಿ, ಧರ್ಮ, ಮತ ಪಂಥಕ್ಕೆ ಸೀಮಿತವಾಗದೇ ಎಲ್ಲವನ್ನೂ ಎಲ್ಲರನ್ನೂ ಮೀರಿಸುವ ವಿಶ್ವಕುಟುಂಬಿಯಾಗಿ ಹಾಗೂ ವಿಶ್ವ ಆರೋಗ್ಯಕ್ಕಾಗಿ ಎನ್ನುವ ನಿಟ್ಟಿನಲ್ಲಿ ಸಾಕಾರಗೊಂಡಿದೆ. ನನಗೆ ಯೋಗ ಮಾಡುವ ಅಭ್ಯಾಸ ಇಲ್ಲ, ನಾನು ಶಾಲಾ ದಿನಗಳಲ್ಲಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ ಅಷ್ಟೆ. ನಮ್ಮ ಮನೆಯಲ್ಲಿ ಮಾಡುತ್ತಾರೆ. ಯೋಗ ನಮ್ಮ ದೇಶದ ಆಸ್ತಿ. ಇದನ್ನು ಪ್ರಪಂಚಕ್ಕೆ ಪಸರಿಸಬೇಕು ಎಂದು ತಿಳಿಸಿದರು.
ಇದಕ್ಕೂ ಮುನ್ನ ಗಣ್ಯರು ಹಾಗೂ ವಿವಿಧ ಶಾಲಾ ಕಾಲೇಜು ಮಕ್ಕಳು ಯೋಗ ಪ್ರದರ್ಶಿಸಿ ಆರೋಗ್ಯ ಸುರಕ್ಷತೆಗಳ ಬಗ್ಗೆ ಜಾಗೃತಿ ಮೂಡಿಸಿದರು.