ಬೆಂಗಳೂರು: ಚನ್ನಪಟ್ಟಣದಲ್ಲಿ ಯಾವ ಕಾರ್ಯಕರ್ತರಿಗೂ ಅಸಮಾಧಾನವೂ ಇಲ್ಲ. ಡಿ.ಕೆ.ಸುರೇಶ್ ನಿಲ್ಲಬೇಕು ಎಂಬ ಕೆಲವರ ಅಭಿಪ್ರಾಯ ಇತ್ತು. ಈಗ ಪಕ್ಷ ತೀರ್ಮಾನ ಮಾಡಿದೆ. ಎಲ್ಲರೂ ನಮ್ಮ ಪಕ್ಷದ ಅಭ್ಯರ್ಥಿ ಕೆಲಸ ಮಾಡ್ತಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಚನ್ನಪಟ್ಟಣ ಕಾರ್ಯಾಕರ್ತರ ಅಸಮಾಧಾನ ವಿಚಾರವಾಗಿ ಸದಾಶಿವನಗರ ನಿವಾಸದ ಬಳಿ ಅವರು ಮಾತನಾಡಿದರು. ಎರಡು ಕ್ಷೇತ್ರಗಳ ಟಿಕೆಟ್ ಘೋಷಣೆಯಾಗಿದೆ. ಶಿಗ್ಗಾಂವಿಯಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ ಅನ್ನೋದೇನಿಲ್ಲ. ಇವತ್ತು ಎಲ್ಲರೂ ಅಭಿಪ್ರಾಯ ಕೊಡ್ತಾರೆ. ಮಧ್ಯಾಹ್ನದೊಳಗೆ ಟಿಕೆಟ್ ಘೋಷಣೆಯಾಗುತ್ತೆ ಎಂದರು.
ಟಿಕೆಟ್ ಆಕಾಂಕ್ಷಿ ಖಾದ್ರಿ ಡಿಕೆಶಿ ಭೇಟಿ: ಶಿಗ್ಗಾಂವಿ ಟಿಕೆಟ್ ಆಕಾಂಕ್ಷಿ ಅಜ್ಜಂಪಿರ್ ಖಾದ್ರಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಟಿಕೆಟ್ ನೀಡುವಂತೆ ಮನವಿ ಮಾಡಿದರು. ಬಳಿಕ ಮಾತನಾಡಿದ ಅವರು, ನಾಳೆ ನಾಮಪತ್ರ ಸಲ್ಲಿಸಲು ಕೊನೆಯ ದಿನ ಇದೆ. ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಆಗಿದ್ದೇನೆ. ಸಿಎಂ ಅವರನ್ನೂ ಭೇಟಿ ಆಗುತ್ತೇನೆ. ನಾನು ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಸಾಮಾಜಿಕ ನ್ಯಾಯ, ಪೈಪೋಟಿ ಹೆಚ್ಚಾಗಿದೆ. ಕ್ಷೇತ್ರ ಗೆಲ್ಲಲೇಬೇಕು ಅನ್ನುವುದಿದೆ. ಹೀಗಾಗಿ ತಡವಾಗಿದೆ. ಎಲ್ಲರೂ ಟಿಕೆಟ್ ಕೇಳ್ತಾರೆ. ಪಕ್ಷದ ವರಿಷ್ಠರು, ತೀರ್ಮಾನ ಮಾಡ್ತಾರೆ. ಮತದಾರರು ಅಭ್ಯರ್ಥಿಗೆ ಮತ ಹಾಕುತ್ತಾರೆ. ಅದನ್ನು ವರಿಷ್ಠರು ಗಮನಿಸುತ್ತಾರೆ. ಕ್ಷೇತ್ರದ ಜನರಿಗೆ ನನ್ನ ಮೇಲೆ ಸಿಂಪತಿ ಇದೆ ಎಂದು ತಿಳಿಸಿದರು.
ಹೊರಗಿನವರು ಕ್ಷೇತ್ರಕ್ಕೆ ಬೇಡ ಅನ್ನುವ ಮಾತಿದೆ. ಎಲ್ಲರೂ ಕ್ಷೇತ್ರ ಗೆಲ್ಲಬೇಕು ಅಂತ ನಿರ್ಧಾರ ಮಾಡಿದ್ದಾರೆ. ಯಾರ ಪರವೂ ಯಾರು ಇಲ್ಲ. ಎಲ್ಲರೂ ಗೆಲವಿಗಾಗಿ ಶ್ರಮ ಹಾಕ್ತಿದ್ದಾರೆ. ಜಮೀರ್ ಸಾಹೇಬರು ನಮ್ಮ ದೊಡ್ಡ ನಾಯಕರು. ಅವರು ಕೂಡ ಎಲ್ಲ ಅಭ್ಯರ್ಥಿಗಳ ಪರ ಇದ್ದಾರೆ. ನಾನು ಕಾಂಗ್ರೆಸ್ನ ಪಕ್ಷದ ಶಿಸ್ತಿನ ಸಿಪಾಯಿ. ಎಲ್ಲರೂ ಒಟ್ಟಾಗಿ ಕ್ಷೇತ್ರ ಚುನಾವಣೆ ಎದುರಿಸುತ್ತೇವೆ ಎಂದು ಪ್ರತಿಕ್ರಿಯೆ ನೀಡಿದರು.
ಒಬ್ಬೊಬ್ಬರದ್ದು ಒಂದು ಅಭಿಪ್ರಾಯ ಇರುತ್ತೆ, ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರಬೇಕಾಗುತ್ತದೆ: ಡಿ.ಕೆ.ಸುರೇಶ್- ಯೋಗೇಶ್ವರ್ ಸೇರ್ಪಡೆಗೆ ಕಾಂಗ್ರೆಸ್ ಕಾರ್ಯಕರ್ತರ ಬೇಸರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿ.ಕೆ.ಸುರೇಶ್, ಒಬ್ಬೊಬ್ಬರದ್ದು ಒಂದೊಂದು ಅಭಿಪ್ರಾಯ ಇರುತ್ತೆ. ಆದರೆ ಪಕ್ಷ ತೆಗೆದುಕೊಂಡ ತೀರ್ಮಾನಕ್ಕೆ ಎಲ್ಲರೂ ಬದ್ಧರಿರಬೇಕಾಗುತ್ತದೆ. ಸಿ.ಪಿ.ಯೋಗೇಶ್ವರ್ ನಾಮಪತ್ರ ಸಲ್ಲಿಸಲು ಹೋಗುತ್ತಿದ್ದೇವೆ. ಆ ನಂತರ ಎಲ್ಲರನ್ನೂ ಕರೆದು ಸಭೆ ಮಾಡ್ತೇವೆ. ಎಲ್ಲರ ಅಸಮಾಧಾನ ಬಗೆಹರಿಸ್ತೇವೆ ಎಂದು ತಿಳಿಸಿದರು.
ಸಿ.ಪಿ.ಯೋಗೇಶ್ವರ್ಗೆ ಸಿ.ಟಿ.ರವಿ ಸಹಕಾರ ಇದೆ. ನಾನು ಅದರ ವಿಶ್ಲೇಷಣೆ ಮಾಡಲ್ಲ. ಸಿ.ಟಿ.ರವಿ ಹೇಳಿಕೆ ಬಗ್ಗೆ ಅಷ್ಟೇ ಮಾತನಾಡ್ತೇನೆ. ಸಾಧಕ ಬಾಧಕ ಚರ್ಚೆ ಮಾಡಲ್ಲ. ನೀವೇ ವಿಶ್ಲೇಷಣೆ ಮಾಡಿ. ಒಂದು ವಾರದಲ್ಲಿ ನಡೆದ ನಡವಳಿಕೆಗಳನ್ನು ಗಮನಿಸಿ ನೀವು ವಿಶ್ಲೇಷಿಸಿ, ರಾಜ್ಯದ ಜನರಿಗೆ ಬೆಳಕು ಚೆಲ್ಲಬೇಕು ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.
ನಾನೇ ಚುನಾವಣೆಗೆ ನಿಲ್ಲಲ್ಲ ಎಂದಿದ್ದೆ- ಡಿಕೆ ಸುರೇಶ್: ಡಿಕೆ ಸುರೇಶ್ ಸ್ಪರ್ಧೆಗೆ ಧೈರ್ಯವಿಲ್ಲ ಎಂಬ ನಿಖಿಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಾನು, ಶಿವಕುಮಾರ್ ಧೈರ್ಯ ತೋರುವ ಪ್ರಶ್ನೆ ಅಲ್ಲ. ನನ್ನನ್ನು ಚುನಾವಣೆಯಲ್ಲಿ ತಿರಸ್ಕಾರ ಮಾಡಿದ್ದಾರೆ. ತಕ್ಷಣ ಚುನಾವಣೆಗೆ ಹೋಗುವುದು ಸಮಂಜಸವಲ್ಲ. ನಾನೇ ಚುನಾವಣೆಗೆ ನಿಲ್ಲಲ್ಲ ಅಂದಿದ್ದೆ ಎಂದರು.
ಶಿಗ್ಗಾಂವಿ ಟಿಕೆಟ್ಗಾಗಿ ಬಹಳಷ್ಟು ಜನ ಆಕಾಂಕ್ಷಿಗಳಿದ್ದಾರೆ. ಹಿಂದೆ ಸೋತವರೂ ಆಕಾಂಕ್ಷಿಗಳಿದ್ದಾರೆ. ಎಲ್ಲರನ್ನೂ ಒಮ್ಮತಕ್ಕೆ ಪಡೆದು ಟಿಕೆಟ್ ಘೋಷಣೆ ಮಾಡಲಾಗುವುದು. ಯಾರಿಗೆ ಕೊಡಬೇಕು ಅಂತ ತೀರ್ಮಾನಿಸಲಾಗುವುದು. ಮಾಜಿ ಮುಖ್ಯಮಂತ್ರಿಗಳ ಕ್ಷೇತ್ರವದು. ಹಾಗಾಗಿ ಎಚ್ಚರಿಕೆಯಿಂದ ಚಿಂತನೆ ಮಾಡ್ತಿದ್ದೇವೆ. ಜಮೀರ್ ಅವರಿಗೆ ಉಸ್ತುವಾರಿ ನೀಡಿದ್ದಾರೆ. ಅವರು ಅಲ್ಲಿಗೆ ಹೋಗಿ ಚರ್ಚೆ ಮಾಡ್ತಾರೆ ಎಂದು ಹೇಳಿದರು.
ಚನ್ನಪಟ್ಟಣದಲ್ಲಿ ಜೆಡಿಎಸ್ ಮುಖಂಡರ ಆಪರೇಷನ್ ವಿಚಾರವಾಗಿ ಪ್ರತಿಕ್ರಿಯಿಸಿ ಯಾರೆಲ್ಲ ಬರ್ತಾರೆ ಕಾದು ನೋಡೋಣವೆಂದು ಸೂಚ್ಯವಾಗಿ ತಿಳಿಸಿದರು.
ಇದನ್ನೂ ಓದಿ: ದಕ್ಷಿಣ ಕನ್ನಡ ಪರಿಷತ್ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ಗೆ ಗೆಲುವು