ಬೆಂಗಳೂರು: ಭಾನುವಾರ ರಾತ್ರಿ ಸುರಿದ ಮಳೆಯಿಂದ ನೀರು ನುಗ್ಗಿ ಹಾನಿಗೊಳಗಾದ ನಗರದ ವಿವಿಧ ಪ್ರದೇಶಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಬ್ಬಾಳ ಸಮೀಪದ ಯೋಗೇಶ್ವರ ನಗರ, ನಾಗವಾರ ಜಂಕ್ಷನ್ ಹಾಗೂ ಎಚ್ಬಿಆರ್ ಲೇಔಟ್ 5ನೇ ಬ್ಲಾಕ್, ಸಿಲ್ಕ್ ಬೋರ್ಡ್, ಜಯದೇವ ಜಂಕ್ಷನ್ ಸೇರಿದಂತೆ ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಕೈಗೊಳ್ಳಬೇಕಿರುವ ಅಗತ್ಯ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
ಯೋಗೇಶ್ವರ ನಗರದ ಮೇಲ್ಸೇತುವೆ ಬಳಿ ನೀರಿನ ಹರಿವು ಹಾಗೂ ರಾಜಕಾಲುವೆ ವೀಕ್ಷಿಸಿ, "ನೀರು ಹರಿವಿಗೆ ತೊಂದರೆ ಏಕೆ ಉಂಟಾಗಿದೆ?. ಕಾಮಗಾರಿಗಳು ನಡೆದ ನಂತರ ಕಟ್ಟಡ ತ್ಯಾಜ್ಯಗಳನ್ನು ಸ್ಥಳದಲ್ಲೇ ಏಕೆ ಬಿಡಲಾಗಿದೆ? ಕೂಡಲೇ ಎಲ್ಲೆಡೆ ಸ್ವಚ್ಛಗೊಳಿಸಿ. ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು. ಎಲ್ಲಾ ಕಡೆ ರಸ್ತೆ ಬದಿ ಚರಂಡಿಗಳು ಹಾಗೂ ಒಳಚರಂಡಿಗಳನ್ನು ಸ್ವಚ್ಛಗೊಳಿಸಬೇಕು" ಎಂದು ನಿರ್ದೇಶನ ನೀಡಿದರು.
ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ರಾಜಕಾಲುವೆ ವೀಕ್ಷಿಸಿ ಮಾತನಾಡಿ, "ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆ ಸ್ವಚ್ಛತೆ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಎಲ್ಲೆಲ್ಲಿ ಬಿಎಂಆರ್ಸಿಎಲ್ ಅವರಿಗೆ, ಕಾಮಗಾರಿ ನಡೆಸುವಾಗ ರಾಜಕಾಲುವೆಗಳಲ್ಲಿ ಕಟ್ಟಡ ತ್ಯಾಜ್ಯಗಳು ಉಳಿದಿದ್ದರೆ ಕೂಡಲೇ ತೆರವು ಮಾಡಬೇಕು ಎಂದು ಸೂಚನೆ ನೀಡಿದ್ದೇನೆ. ಕೆಲವೊಂದು ಕಡೆ ನೀರು ಹರಿಯುವ ಜಾಗಗಳು ಕಿರದಾಗಿದ್ದು, ಅವುಗಳ ಅಗಲೀಕರಣ ಮಾಡುವಂತೆ ತಿಳಿಸಲಾಗಿದೆ" ಎಂದರು.
ಮಾರುತಿ ಸೇವಾನಗರದಲ್ಲಿ ಸೋಮವಾರ ಬೆಳಗ್ಗೆ ಮರ ಬಿದ್ದು ನಾಲ್ವರು ಗಾಯಗೊಂಡಿದ್ದರು. ಬಾಣಸವಾಡಿಯ ಖಾಸಗಿ ಆಸ್ಪತ್ರೆಗೆ ಡಿಕೆಶಿ ಭೇಟಿ ನೀಡಿ ಗಾಯಗೊಂಡಿರುವವರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಹಾಗೂ ಗಾಯಾಳುಗಳ ಎಲ್ಲಾ ಖರ್ಚು ವೆಚ್ಚಗಳನ್ನು ಬಿಬಿಎಂಪಿಯಿಂದ ಭರಿಸಲಾಗುವುದು ಎಂದು ತಿಳಿಸಿದರು.
"ನಗರ ಸಂಚಾರದ ವೇಳೆ ಸಾಕಷ್ಟು ರಸ್ತೆಗುಂಡಿಗಳು ಕಂಡುಬಂದವು. ಮಳೆ ಹೆಚ್ಚಾದ ಕಾರಣಕ್ಕೆ ಸುಮಾರು ಅರ್ಧ ಅಡಿಗೂ ಆಳದ ಗುಂಡಿಗಳಾಗಿವೆ. ಇವುಗಳನ್ನು ಕೂಡಲೇ ಮುಚ್ಚಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪೊಲೀಸರಿಗೂ ಎಲ್ಲಿಲ್ಲಿ ರಸ್ತೆಗುಂಡಿಗಳಿವೆಯೋ ಅವುಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದೇನೆ. ಈಗಾಗಲೇ ನೂತನ ಆ್ಯಪ್ ಬಿಡುಗಡೆ ಮಾಡಿದ್ದು, ಅದರಲ್ಲಿ ಫೋಟೊ ತೆಗೆದು ಹಾಕಿದರೆ ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ತಿಳಿಸಿದರು.
"ಎಲ್ಲಾ ಕಡೆ ರಾಜಕಾಲುವೆಗಳಿಗೆ ರಕ್ಷಣಾ ಗೋಡೆಗಳ ನಿರ್ಮಾಣ ಹಾಗೂ ರಸ್ತೆ ನಿರ್ಮಾಣದ ತೀರ್ಮಾನ ಮಾಡಲಾಗಿದೆ. ಅಲ್ಲದೇ ಅನೇಕ ಕಡೆ ರಸ್ತೆ ಫುಟ್ಪಾತ್ಗಳಲ್ಲಿ ಕಟ್ಟಡ ನಿರ್ಮಾಣ ತ್ಯಾಜ್ಯ ಸುರಿಯಲಾಗಿದೆ. ಇದರ ಬಗ್ಗೆ ಕ್ರಮವಹಿಸಲಾಗುವುದು. ಇದರಿಂದ ಮೋರಿ ಮುಚ್ಚಿಕೊಳ್ಳುವುದು, ನೀರಿನ ಹರಿವಿಗೆ ತೊಂದರೆ ಉಂಟಾಗುತ್ತಿದೆ. ಅನೇಕ ಉದ್ಯಾನಗಳಲ್ಲೂ ಕಟ್ಟಡ ತ್ಯಾಜ್ಯಗಳನ್ನು ಸುರಿಯುತ್ತಿದ್ದು, ಇದರ ಬಗ್ಗೆ ಗಮನಹರಿಸಲಾಗುವುದು" ಎಂದರು.
"ಬೆಂಗಳೂರಿನಲ್ಲಿ ಅಂತಹ ಮಳೆ ಬಂದಿಲ್ಲ. ರಾಜ್ಯದ ಇತರೆಡೆ ಉತ್ತಮ ಮಳೆ ಬಂದಿದೆ. ಬೆಂಗಳೂರು ಸುತ್ತ ಯಾವ ಕೆರೆಗಳೂ ತುಂಬಿಲ್ಲ, ಅಕ್ಕಪಕ್ಕದ ಜಿಲ್ಲೆಗಳಲ್ಲೂ ಮಳೆ ಬಂದಿಲ್ಲ. ಪಶ್ಚಿಮ ಘಟ್ಟ ಸೇರಿದಂತೆ ಒಂದಷ್ಟು ಕಡೆ ಮಳೆ ಬಂದು ಅಣೆಕಟ್ಟುಗಳು ತುಂಬಿವೆ. ಬೆಂಗಳೂರು ನಗರದ ಒಳಗಿರುವ ಕೆರೆಗಳಲ್ಲೂ ಅಷ್ಟಾಗಿ ನೀರಿಲ್ಲ. ಅಪಾರ್ಟ್ಮೆಂಟ್ಗಳಿಗೆ ನೀರು ನುಗಿದ್ದರೆ ಸರಿ ಮಾಡೋಣ. ಜೊತೆಗೆ ಮಳೆಯೂ ಚೆನ್ನಾಗಿ ಬರಬೇಕು. ಕೆರೆಗಳು ತುಂಬಬೇಕು, ಅಂತರ್ಜಲ ಹೆಚ್ಚಾಗಬೇಕು. ಮಳೆ ಇನ್ನೂ ಸಾಲದು" ಎಂದರು.