ಬೆಂಗಳೂರು : “ಬೆಂಗಳೂರಿನಲ್ಲಿ 50 x 80 ಅಡಿ ವಿಸ್ತೀರ್ಣವರೆಗಿನ ನಿವೇಶನಗಳಲ್ಲಿ 4 ಯುನಿಟ್ ಮನೆ ಕಟ್ಟಿಕೊಳ್ಳುವವರು ನೋಂದಾಯಿತ ವಾಸ್ತುಶಿಲ್ಪಿ (ಆರ್ಕಿಟೆಕ್ಟ್) ಅಥವಾ ಇಂಜಿನಿಯರ್ ಮೂಲಕ ತಮ್ಮ ಕಟ್ಟಡದ ನಕ್ಷೆಗಳಿಗೆ ಆನ್ಲೈನ್ ಮೂಲಕ ಸ್ವಯಂ ಅನುಮತಿ ಪಡೆಯುವ “ನಂಬಿಕೆ ನಕ್ಷೆ” ಯೋಜನೆ ಜಾರಿಗೆ ತರಲಾಗಿದೆ” ಎಂದು ಡಿಸಿಎಂ ಡಿ. ಕೆ ಶಿವಕುಮಾರ್ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಶಿವಕುಮಾರ್ ಅವರು, "ನಂಬಿಕೆ ನಕ್ಷೆ ಜತೆಗೆ ಬೆಂಗಳೂರಿಗರ ಸಮಸ್ಯೆಗೆ ಪರಿಹಾರ ನೀಡಲು ಹೊಸ ಆಸ್ತಿ ತೆರಿಗೆ ಪದ್ಧತಿ ಹಾಗೂ ಆಸ್ತಿ ತೆರಿಗೆ ಖಾತಾ ವಿತರಣೆಯಂತಹ ಕ್ರಾಂತಿಕಾರಕ ಹೆಜ್ಜೆ ಇಡಲಾಗಿದೆ ಎಂದು ತಿಳಿಸಿದರು. ಬೆಂಗಳೂರಿನ ನಾಗರಿಕರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಈ ಪಾರದರ್ಶಕ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.
ನಂಬಿಕೆ ನಕ್ಷೆ : ಬ್ರ್ಯಾಂಡ್ ಬೆಂಗಳೂರಿನ ಪರಿಕಲ್ಪನೆಯಡಿ ಈ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಿಂದಾಗಿ ಸಾರ್ವಜನಿಕರು ತಮ್ಮ ಕಟ್ಟಡದ ನಕ್ಷೆಗೆ ಅನುಮತಿ ಪಡೆಯಲು ಪಾಲಿಕೆ ಕಚೇರಿಗಳನ್ನು ಅಲೆಯುವಂತಿಲ್ಲ. ಜತೆಗೆ ಅಧಿಕಾರಿಗಳಿಗೆ ಲಂಚ ನೀಡುವ ಪರಿಸ್ಥಿತಿಯೂ ನಿರ್ಮಾಣವಾಗುವುದಿಲ್ಲ.
ಅನುಮತಿ ನೀಡುವ ವಾಸ್ತುಶಿಲ್ಪಿಗಳು ಹಾಗೂ ಇಂಜಿನಿಯರ್ಗಳು ಸರ್ಕಾರದ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿರಬೇಕು. ಕಟ್ಟಡದ ನಕ್ಷೆ ನಿಯಮಾನುಸಾರವಾಗಿ ತನ್ನದೇ ಆದ ರೀತಿಯಲ್ಲಿ ತಂತ್ರಜ್ಞಾನದ ಮೂಲಕ ಪರಿಶೀಲನೆ ಮಾಡಲಾಗುವುದು. ಆನ್ಲೈನ್ನಲ್ಲೇ ಶುಲ್ಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕಳೆದ ವರ್ಷ 9 ಸಾವಿರ ಕಟ್ಟಡ ನಕ್ಷೆ ಅನುಮತಿ ನೀಡಲಾಗಿದೆ. ಈ ಬಾರಿ 10 ಸಾವಿರ ನಕ್ಷೆ ಅನುಮತಿ ನೀಡಬಹುದು ಎಂದು ಅಂದಾಜು ಮಾಡಲಾಗಿದೆ ಎಂದು ಹೇಳಿದರು.
ನಾವು ನಾಗರಿಕರನ್ನು ನಂಬಬೇಕು. ಪ್ರಮಾಣಿಕೃತ ಇಂಜಿನಿಯರ್ ಹಾಗೂ ವಾಸ್ತುಶಿಲ್ಪಿಗಳನ್ನು ನಂಬಬೇಕು. ಬ್ರ್ಯಾಂಡ್ ಬೆಂಗಳೂರಿಗೆ ಸಂಬಂಧಿಸಿದಂತೆ ನಮಗೆ ಬಂದ 70 ಸಾವಿರಕ್ಕೂ ಹೆಚ್ಚು ಸಲಹೆಗಳಲ್ಲಿ ಜನರು ತಮಗಾಗುತ್ತಿರುವ ತೊಂದರೆ ಬಗ್ಗೆ ಮಾಹಿತಿ ನೀಡಿದ್ದರು. ನಾವು ಒಂದೊಂದಾಗಿ ಅವರ ಸಮಸ್ಯೆ ಬಗೆಹರಿಸಿ ಅವರ ಸಲಹೆಗಳನ್ನು ಜಾರಿಗೊಳಿಸುತ್ತಿದ್ದೇವೆ. ಈ ಯೋಜನೆಯನ್ನು ಮೊದಲ ಹಂತದಲ್ಲಿ ರಾಜರಾಜೇಶ್ವರಿನಗರ ಹಾಗೂ ದಾಸರಹಳ್ಳಿ ವಲಯದ ಎಲ್ಲ ವಾರ್ಡ್ಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡುತ್ತೇವೆ. ನಂತರ ಬೆಂಗಳೂರಿಗೆ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಹೊಸ ತೆರಿಗೆ ಪದ್ಧತಿ : 2020ರಲ್ಲಿ ಬಿಜೆಪಿ ಸರ್ಕಾರ ತೆರಿಗೆ ಕಾಯ್ದೆ ವಿಚಾರವಾಗಿ ತಿದ್ದುಪಡಿ ಮಾಡಿದರು. ಅದರಲ್ಲಿ ತೆರಿಗೆ ಪಾವತಿ ವಿಚಾರದಲ್ಲಿ ಅನೇಕ ಏರುಪೇರುಗಳಾದವು. ʼಮನೆ ಬಾಗಿಲಿಗೆ ಬಂತು ಸರ್ಕಾರʼ ಕಾರ್ಯಕ್ರಮದಲ್ಲಿ ಈ ಬಗ್ಗೆ ಅನೇಕ ದೂರುಗಳು ವ್ಯಕ್ತವಾದವು. ಇದಕ್ಕೆ ಪರಿಹಾರ ನೀಡಲು ಬಜೆಟ್ ಅಧಿವೇಶನದಲ್ಲಿ ತಿದ್ದುಪಡಿ ತಂದು ಎಲ್ಲೆಲ್ಲಿ ದಂಡದ ಸಮಸ್ಯೆ ಇದೆ, ಅಲ್ಲೆಲ್ಲ 31-07-2024 ವರೆಗೂ ತೆರಿಗೆ ಕಟ್ಟಿದವರಿಗೆ ದಂಡ ಹಾಗೂ ಬಡ್ಡಿ ಮನ್ನಾ ಮಾಡುವ ತೀರ್ಮಾನ ಮಾಡಿದ್ದೇವೆ. ಬೆಂಗಳೂರಿನ ನಾಗರಿಕರು ಇದರ ಉಪಯೋಗ ಪಡೆಯಬೇಕು. ದಂಡವನ್ನು ಶೇ. 200 ರಿಂದ ಶೇ. 100ಕ್ಕೆ ಇಳಿಸಿದ್ದೇವೆ. ಇನ್ನು ನಾವು 5 ವರ್ಷದವರೆಗೂ ಲೆಕ್ಕಾಚಾರದಲ್ಲಿ ತೆರಿಗೆ ಬಾಕಿ ವಸೂಲಿ ಮಾಡಲು ತೀರ್ಮಾನಿಸಿದ್ದೇವೆ ಎಂದರು.
ಪ್ರಸ್ತುತ ಇದ್ದ ಯುನಿಟ್ ವಿಸ್ತೀರ್ಣ ಮೌಲ್ಯ (UAV) ಆಸ್ತಿ ತೆರಿಗೆ ಪದ್ಧತಿಯನ್ನು 2008ರಲ್ಲಿ ಜಾರಿಗೊಳಿಸಲಾಗಿತ್ತು. ಆಗ ಆಸ್ತಿಗಳನ್ನು 18 ವರ್ಗೀಕರಣ ಮಾಡಲಾಗಿತ್ತು. ಇದರಿಂದ ತೆರಿಗೆ ಪಾವತಿಯಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಮಾರ್ಗಸೂಚಿ ದರವನ್ನು ಬೆಂಗಳೂರಿನ ವ್ಯಾಪ್ತಿಯಲ್ಲಿ ಏಕರೂಪದ ಆಸ್ತಿ ತೆರಿಗೆ ನಿಗದಿ ಮಾಡಲಾಗಿದೆ. ಈ ವ್ಯವಸ್ಥೆಯಿಂದ ತೆರಿಗೆ ಪದ್ಧತಿ ಸರಳೀಕರಣ ಮಾಡಲಾಗಿದೆ. ಈಗ ನಾವು 6 ವರ್ಗೀಕರಣಗಳನ್ನು ಮಾಡಿದ್ದು, ವಸತಿ (ಸ್ವಂತ ಬಳಕೆ ಹಾಗೂ ಬಾಡಿಗೆದಾರರ ಬಳಕೆ), ವಾಣಿಜ್ಯ, ಕೈಗಾರಿಕಾ, ಸ್ಟಾರ್ ಹೋಟೆಲ್, ವಿನಾಯಿತಿ ನೀಡಲಾದ ಹಾಗೂ ಸಂಪೂರ್ಣ ಖಾಲಿ ಜಮೀನುಗಳು ಎಂಬ ವರ್ಗೀಕರಣ ಮಾಡಲಾಗಿದೆ ಎಂದು ತಿಳಿಸಿದರು.
ಕಳೆದ ಬಾರಿ ಆಸ್ತಿ ತೆರಿಗೆ ದರಗಳನ್ನು ಪರಿಷ್ಕರಣೆ ಮಾಡಿದ್ದು 2016ರಲ್ಲಿ. ಆಗ ವಸತಿ ಆಸ್ತಿಗಳಿಗೆ ಶೇ 20ರಷ್ಟು, ವಸತಿಯೇತರ ಉದ್ದೇಶದ ಆಸ್ತಿಗಳಿಗೆ ಶೇ 25ರಷ್ಟು ಏರಿಕೆಯಾಗಿತ್ತು. ಕಳೆದ ಎಂಟು ವರ್ಷಗಳಿಂದ ಆಸ್ತಿ ಮೌಲ್ಯ ಏರಿಕೆಯಾಗಿರಲಿಲ್ಲ. ಈಗ ನಾವು ಈ ಬಗ್ಗೆ ಚರ್ಚೆ ಮಾಡಿ ಇದನ್ನು ಕಡಿಮೆ ಮಾಡಲು, ಆಸ್ತಿ ತೆರಿಗೆ ಹೆಚ್ಚಳದ ಮಿತಿಯನ್ನು ಶೇ.10ಕ್ಕೆ ನಿಗದಿಪಡಿಸಲಾಗಿದೆ. ಬೆಂಗಳೂರಿನಲ್ಲಿ 18 ಲಕ್ಷ ಆಸ್ತಿ ಮಾಲೀಕರು ತೆರಿಗೆ ವ್ಯಾಪ್ತಿಯಲ್ಲಿ ಒಳಪಡುತ್ತಿಲ್ಲ. ಇವರೆಲ್ಲರೂ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯೊಳಗೆ ಬರಬೇಕು ಎಂದರು.
ಆಸ್ತಿ ತೆರಿಗೆ ಸಂಖ್ಯೆ ನಿಯೋಜನೆ ಮತ್ತು ಬಿಬಿಎಂಪಿ ಖಾತಾ ವಿತರಣೆ : ಯಾರೆಲ್ಲಾ ಆಸ್ತಿ ತೆರಿಗೆ ಪಾವತಿಗೆ ತಮ್ಮನ್ನು ತಾವು ಘೋಷಣೆ ಮಾಡಿಕೊಂಡಿಲ್ಲವೋ ಅವರಿಗೆ ಒಂದು ಅವಕಾಶ ನೀಡಲಾಗುತ್ತಿದೆ. ಈ ಮೂಲಕ ನಾಗರಿಕರು ತಮ್ಮ ಆಸ್ತಿಯನ್ನು ಸ್ವಯಂ ಘೋಷಣೆ ಮಾಡಿಕೊಂಡವರಿಗೆ ಆಸ್ತಿ ತೆರಿಗೆ ಸಂಖ್ಯೆ ಮತ್ತು ಬಿಬಿಎಂಪಿ ಖಾತಾ ನೀಡಲಾಗುವುದು. ಬಿಬಿಎಂಪಿಯಿಂದ ದಾಖಲೆ ಸರಿಯಾಗಿ ಇರುವರಿಗೆ ಎ ಖಾತಾ ನೀಡುತ್ತೇವೆ. ಕನ್ವರ್ಷನ್ ಮಾಡಿಕೊಳ್ಳದೇ, ಯೋಜನೆ ಇಲ್ಲದವರಿಗೆ ಬಿ ಖಾತಾ ನೀಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ : ಬಿಜೆಪಿಯವರು ರಾಜಕೀಯ ಟೀಕೆ ಬಿಟ್ಟು ರಚನಾತ್ಮಕ ಸಲಹೆ ಕೊಟ್ಟರೆ ಸ್ವೀಕರಿಸಲು ಸಿದ್ಧ: ಡಿ ಕೆ ಶಿವಕುಮಾರ್