ರಾಮನಗರ: ಕುಮಾರಸ್ವಾಮಿಯನ್ನು ಹುಚ್ಚಾಸ್ಪತ್ರೆಗೆ ಸೇರಿಸೋಣ. ಅವರ ತಂದೆ ವಿರುದ್ಧ 1985ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಬಂಗಾರಪ್ಪನವರ ಸಂಪುಟದಲ್ಲಿ ಮಂತ್ರಿಯಾಗಿದ್ದೆ. ನನ್ನ ಮತ್ತು ಎಸ್.ಎಂ. ಕೃಷ್ಣ ಸಂಬಂಧದ ಬಗ್ಗೆ ಅವನಿಗೆ ಏನು ಗೊತ್ತಿದೆ?. ಪಾಪಾ ಏನು ಮೆಂಟಲ್ ಆಗಿದ್ದಾನೆ. ಹುಚ್ಚಾಸ್ಪತ್ರೆಗೆ ಸೇರಿಸುವಂತೆ ಅವರ ಪಕ್ಷದವರಿಗೂ, ಹಿತೈಷಿಗಳಿಗೂ ಹೇಳೋಣ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
ಕನಕಪುರದಲ್ಲಿ ಜನರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್.ಎಂ. ಕೃಷ್ಣ ಅವರ ಅಳಿಯ ಕಾಫಿ ಡೇ ಸಿದ್ದಾರ್ಥ ಸಾವಿಗೆ ಕಾರಣ ಯಾರು ಅಂತಾ ಹೇಳ್ತೀರಾ ಎಂದು ಡಿಕೆಶಿಗೆ ಹೆಚ್ಡಿಕೆ ಪ್ರಶ್ನಿಸಿರುವ ಬಗ್ಗೆ ಮಾತನಾಡಿದ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಡಿ.ಕೆ ಶಿವಕುಮಾರ್ ಬಡವರ ಆಸ್ತಿ ಲೂಟಿ ಮಾಡಿದ್ದಾರೆ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಮಾತನಾಡಿ, ನಾನು ಯಾವ ಬಡವನ ಆಸ್ತಿ ಲೂಟಿ ಮಾಡಿದ್ದೇನೆ. ಆತನನ್ನು ಕರೆದುಕೊಂಡು ಬಂದು ನನ್ನ ಮುಂದೆ ನಿಲ್ಲಿಸಲಿ. ನಾವು ಬಡವರಿಗೆ ತೊಂದರೆ ನೀಡಿ ಆಸ್ತಿ ಕಿತ್ತುಕೊಂಡಿರುವುದು ನಮ್ಮ ಜಾಯಮಾನದಲ್ಲಿಲ್ಲ. ಕುಮಾರಸ್ವಾಮಿ ಅವರ ಬಗ್ಗೆ ಯೋಗೇಶ್ವರ್ ಅವರೇ ಈಗಾಗಲೇ ಮಾಹಿತಿ ನೀಡಿದ್ದಾರೆ. ಅವರ ಬಗ್ಗೆ ಯೋಗೇಶ್ವರ್ ಉತ್ತರ ನೀಡುತ್ತಾರೆ ಎಂದು ತಿಳಿಸಿದರು.
ಶಿವಕುಮಾರ್ ಅವರಿಗೆ ರಾಜಕೀಯಕ್ಕೆ ಬಂದ ಮೇಲೆ ಆಸ್ತಿ ಬಂದಿದೆ. ಅವರ ತಂದೆ ಏನಾಗಿದ್ದರು ಎಂಬ ಹೆಚ್ಡಿಕೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ನಾವು ಬಡವರು, ಹೊಲ ಉಳುಮೆ ಮಾಡಿಕೊಂಡಿದ್ದೆವು. ನಾನು ಬೆಂಗಳೂರಿನ ಎನ್ಪಿಎಸ್ ಶಾಲೆಯಲ್ಲಿ ಓದಿದವನು. ನನ್ನ ಇತಿಹಾಸ ಅಲ್ಲಿಂದ ಶುರುವಾಗಿದೆ ಎಂದು ತಿರುಗೇಟು ನೀಡಿದರು.
ನಿಮ್ಮನ್ನು ಜೈಲಿಗೆ ಹಾಕಲು ಷಡ್ಯಂತ್ರ ನಡೆಯುತ್ತಿದೆಯೇ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿ, ಮೊದಲಿಂದಲೂ ದೊಡ್ಡ ಸಂಚು ನಡೆದಿದೆ. ಈಗಲೂ ಷಡ್ಯಂತ್ರ ಮಾಡುತ್ತಿದ್ದಾರೆ. ಹೀಗಾಗಿ 10 ತಿಂಗಳಲ್ಲಿ ಸರ್ಕಾರ ತೆಗೆಯುವುದಾಗಿ ಹೇಳಿದ್ದಾರೆ ಎಂದು ದೂರಿದರು.
ಶಿವಕುಮಾರ್ ನನ್ನ ಮೇಲೆ ಕಲ್ಲು ಬಂಡೆ ಎಳೆದಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮಾತನಾಡಿ, ನಾನು ಯಾವ ರೀತಿ ಅವರ ಮೇಲೆ ಬಂಡೆ ಹಾಕಿದ್ದೇನೆ ಎಂದು ಅವರ ಪಕ್ಷದ ನಾಯಕರು ಹೇಳಲಿ. ಅವರ ಮಾತುಗಳನ್ನು ಕೇಳುತ್ತಿದ್ದರೆ, ಅವರಿಗೆ ಚಿಕಿತ್ಸೆ ಕೊಡಿಸುವುದು ಉತ್ತಮ ಎಂದು ಹೇಳಿದರು.
ಸಿಎಂ ಸದನದಲ್ಲಿ ಉತ್ತರ ನೀಡದೇ ರಣಹೇಡಿಯಂತೆ ಕದ್ದು ಓಡಿ ಹೋಗುತ್ತಾರೆ ಎಂಬ ವಿಜಯೇಂದ್ರ ಹೇಳಿಕೆ ಬಗ್ಗೆ ಮಾತನಾಡಿ, ಅವರು ಸದನದಲ್ಲಿ ಬಂದು ಮಾತನಾಡಲಿ, ಹೇಡಿ ಯಾರು ಅನ್ನೋದು ಗೊತ್ತಾಗುತ್ತದೆ ಎಂದರು.
ಕುಮಾರಸ್ವಾಮಿ ಮೇಲೆ ಕಣ್ಣಾಕಿದರೆ ಸರ್ವನಾಶವಾಗ್ತಾರೆ ಎಂಬ ಹೇಳಿಕೆ ಬಗ್ಗೆ ಮಾತನಾಡಿ, ನನ್ ಮೇಲೆ ಕಣ್ಣಾಕಿದ್ರೂ ಅದೇ ಪ್ರಾಬ್ಲಂ ಅಲ್ವಾ? ಎಂದರು.
ಇದನ್ನೂ ಓದಿ: ಡಿ.ಕೆ. ಶಿವಕುಮಾರ್ ಪಾಲಿಗೆ ನಾನು ನಾಗರ ಹಾವು ಇದ್ದ ಹಾಗೆ: ಹೆಚ್.ಡಿ. ಕುಮಾರಸ್ವಾಮಿ - H D Kumaraswamy