ಬೆಂಗಳೂರು: ಕೃಷ್ಣ ಜಲಭಾಗ್ಯ ನಿಗಮದಲ್ಲಿ ಪರಿಹಾರ ಕೊಡಿಸುವ ನೆಪದಲ್ಲಿ ಅಕ್ರಮ ನಡೆದಿದ್ದು, ಇದರಲ್ಲಿ ಒಂದಷ್ಟು ಜನ ಶಾಮೀಲಾಗಿದ್ದಾರೆ. ನಮ್ಮ ರೈತರನ್ನು ಉಳಿಸಲು ತನಿಖಾ ತಂಡ ರಚಿಸಲಾಗುವುದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ಪ್ರಶ್ನೋತ್ತರ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಕೃಷ್ಣ ಜಲಭಾಗ್ಯ ನಿಗಮದ ಅಡಿ ಸಮರ್ಪಕವಾದ ನೀರಾವರಿ ಕೆಲಸಗಳು ನಡೆಯುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದರು.
ನ್ಯಾಯಾಲಯಗಳಲ್ಲಿ ಭೂಸ್ವಾಧೀನದ ಕುರಿತು ಪ್ರಕರಣಗಳು ನಡೆಯುತ್ತಿವೆ. ವಿಜಯಪುರ, ಬಾಗಲಕೋಟೆ, ರಾಯಚೂರು ಭಾಗದಲ್ಲಿ ನ್ಯಾಯಾಲಯದ ಮೂಲಕ ಎಕರೆಗೆ 74 ಲಕ್ಷ ಹಾಗೂ ಸಬ್ಅರ್ಬ್ ಭೂಮಿಗೆ 1 ಕೋಟಿ 26 ಲಕ್ಷ ಪರಿಹಾರ ಪಡೆಯುತ್ತಿದ್ದಾರೆ. ಸುಮಾರು 285 ಪ್ರಕಣಗಳಲ್ಲಿ ಈ ರೀತಿಯಾಗಿದೆ. 367 ಪ್ರಕರಣಗಳಿಗೆ ಪುನರ್ ವಸತಿ ಕಲ್ಪಿಸುವ ವಿಚಾರವಾಗಿ ಒಂದು ಎಕರೆಗೆ 5 ಕೋಟಿ 18 ಲಕ್ಷ ಪರಿಹಾರ ನೀಡಬೇಕು ಎಂದು ಕೋರ್ಟ್ ಆದೇಶ ಮಾಡಿದೆ. ಪೆರಿಫೆರಲ್ ರಿಂಗ್ ರಸ್ತೆಗೆ ಬೆಂಗಳೂರಿನಲ್ಲೇ ಇಷ್ಟು ದೊಡ್ಡ ಮೊತ್ತದ ಪರಿಹಾರ ನೀಡಲು ಆಗುತ್ತಿಲ್ಲ ಎಂದರು.
ಭೂ ಸ್ವಾಧೀನ ಪ್ರಕರಣಗಳನ್ನು ನಡೆಸುತ್ತಿರುವ ಎಲ್ಲ ಸರ್ಕಾರಿ ವಕೀಲರನ್ನು ಹಿಂದಕ್ಕೆ ಪಡೆಯಲಾಗುವುದು. ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗುವುದು. ಇದರ ಬಗ್ಗೆ ಕಾನೂನು ಸಚಿವರ ಬಳಿ ಚರ್ಚೆ ನಡೆಸಲಾಗುವುದು. ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ ಸಚಿವ ಸಂಪುಟ ಉಪಸಮಿತಿ ಮಾಡಿ ಎಕರೆಗೆ 25 ಲಕ್ಷ ಪರಿಹಾರ ನೀಡಬೇಕು ಎಂದು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಈಗ ದುಪ್ಪಟ್ಟು ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ. ಇದಕ್ಕೆ ಎಲ್ಲಿಂದ ಹಣ ತರುವುದು? ಎಂದು ಪ್ರಶ್ನಿಸಿದರು.
ಕೃಷ್ಣ ಜಲಭಾಗ್ಯ ನಿಗಮದ ಅಡಿ ಕೈಗೊಂಡಿರುವ ಕಾರ್ಯಕ್ರಮಗಳು ಮುಗಿಯಲು ಹೆಚ್ಚಿನ ಅನುದಾನದ ಅವಶ್ಯಕತೆಯಿದೆ. ನಮ್ಮ ಸರ್ಕಾರ ಆದ್ಯತೆ ಮೇರೆಗೆ ಕೆಲಸ ಮಾಡುತ್ತಿದೆ. ಈ ಯೋಜನೆಯ ಬಗ್ಗೆ ಪುನರ್ ಪರಿಶೀಲನೆ ನಡೆಸಿದಾಗ ಗಾಬರಿ ಹುಟ್ಟಿಸುವ ಸಂಗತಿಗಳು ಬೆಳಕಿಗೆ ಬಂದಿವೆ. ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಕಾಲದಲ್ಲಿ ಈ ಅಣೆಟಕಟ್ಟು ನಿರ್ಮಾಣದ ವೇಳೆ ಅನೇಕ ಜನರು 1-2 ಸಾವಿರ ರೂಪಾಯಿಗೆ ಜಮೀನು ಬಿಟ್ಟುಕೊಟ್ಟಿದ್ದಾರೆ. 5 ವರ್ಷದ ಹಿಂದೆಯೂ ರೈತರು ಎಕರೆಗೆ 5 ಸಾವಿರ ಪಡೆದು ಜಮೀನು ನೀಡಿದ್ದಾರೆ ಎಂದರು.
ತರೀಕೆರೆ, ಕಡೂರು, ಅರಸೀಕೆರೆ ಭಾಗದ 197 ಕೆರೆಗಳಿಗೆ ಭದ್ರಾ ನೀರು: ತರೀಕೆರೆ, ಕಡೂರು, ಚಿಕ್ಕಮಗಳೂರು ಹಾಗೂ ಅರಸೀಕೆರೆ ತಾಲೂಕಿನ 197 ಕೆರೆಗಳಿಗೆ ಭದ್ರಾ ನೀರನ್ನು ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಅಡಿ ಕಡೂರು ತಾಲೂಕಿನ ಯಾವುದೇ ಕೆರೆಗಳನ್ನು ತುಂಬಿಸುವ ಯೋಜನೆ ಸರ್ಕಾರದ ಮುಂದಿಲ್ಲ ಆದರೆ ಎರಡನೇ ಹಂತದಲ್ಲಿ ವಿಷ್ಣ ಸಮುದ್ರ ಕೆರೆ ತುಂಬಿಸುವ ಆಲೋಚನೆಯಿದೆ. ಎತ್ತಿನಹೊಳೆಯಿಂದ ಯಾವುದೇ ಕಾರಣಕ್ಕೂ ನೀರು ಹರಿಸಲು ಆಗುವುದಿಲ್ಲ ಎಂದು ಭದ್ರಾ ಮೇಲ್ದಂಡೆ ಯೋಜನೆಯ 3 ಮತ್ತು 4 ನೇ ಹಂತದ ಕಾಮಗಾರಿ ಪ್ರಾರಂಭ ಮಾಡುವ ಬಗ್ಗೆ ಶಾಸಕ ಕೆ.ಎಸ್.ಆನಂದ್ ಅವರ ಪ್ರಶ್ನೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಉತ್ತರ ನೀಡಿದರು.
ಇದನ್ನೂ ಓದಿ: ಎಲೆಕ್ಟ್ರಿಕಲ್ ಎಂಜಿನಿಯರ್ಗಳ ನೇಮಕಾತಿಗೆ ಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್ - DCM D K Shivakumar