ಬೆಂಗಳೂರು: ಹಿರಿಯ ರಾಜಕೀಯ ಮುತ್ಸದ್ಧಿ, ಮಾಜಿ ಸಿಎಂ, ಮಾಜಿ ರಾಜ್ಯಪಾಲರು, ಕೇಂದ್ರದ ಮಾಜಿ ಸಚಿವರೂ ಆದ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಸಂಬಂಧಿಯೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಂಬನಿ ಮಿಡಿದಿದ್ದಾರೆ. ಬೆಂಗಳೂರಿನ ಸದಾಶಿವ ನಗರದಲ್ಲಿರುವ ಎಸ್.ಎಂ. ಕೃಷ್ಣ ಅವರ ನಿವಾಸದ ಬಳಿ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್, "ನನ್ನ ರಾಜಕೀಯ ಬದುಕಿನ ಮಾರ್ಗದರ್ಶಕ ಎಸ್.ಎಂ. ಕೃಷ್ಣ ಅವರ ಅಗಲಿಕೆ ಅಪಾರ ನೋವು ತಂದಿದೆ, ಕರ್ನಾಟಕ ರಾಜಕೀಯ ರಂಗದ ಧೃವ ನಕ್ಷತ್ರವೊಂದು ಕಳಚಿ ಬಿದ್ದಂತಾಗಿದೆ" ಎಂದರು.
"ಎಸ್.ಎಂ.ಕೃಷ್ಣ ಅವರು ಓರ್ವ ಸಜ್ಜನ, ಸುಶಿಕ್ಷಿತ ರಾಜಕಾರಣಿ, ಅಜಾತಶತ್ರು, ದೂರದೃಷ್ಟಿಯ ನಾಯಕ. ರಾಜಕೀಯದ ಒಂದೊಂದೇ ಮೆಟ್ಟಿಲುಗಳನ್ನು ಸಾವಧಾನವಾಗಿ ಏರಿದವರು. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರನ್ನು ಇಡೀ ಜಗತ್ತೇ ತಿರುಗಿನೋಡುವಂತೆ ಮಾರ್ಪಡಿಸಿದವರು ಎಸ್.ಎಂ.ಕೃಷ್ಣ. ಬೆಂಗಳೂರನ್ನು ಸಿಲಿಕಾನ್ ಸಿಟಿ, ಐಟಿ- ಬಿಟಿ ನಗರಿಯನ್ನಾಗಿಸಿ ದೇಶದ ಆರ್ಥಿಕತೆಗೆ ಅತಿದೊಡ್ಡ ಹಾಗೂ ದೂರದೃಷ್ಟಿಯ ಕೊಡುಗೆ ನೀಡಿದವರು" ಎಂದು ಸ್ಮರಿಸಿದರು.
"ಎಸ್.ಎಂ.ಕೃಷ್ಣ ಅವರು ನಾಡಿನ ಹಲವು ಜನಪರ ಯೋಜನೆಗಳಿಗೆ ಅಡಿಗಲ್ಲು ಹಾಕಿದ ಪ್ರವರ್ತಕ. ಮೆಟ್ರೋ ರೈಲು, ದೇವನಹಳ್ಳಿ ವಿಮಾನ ನಿಲ್ದಾಣ ನಿರ್ಮಾಣದ ಹಿಂದಿನ ಶಕ್ತಿಯಾಗಿದ್ದ ಅವರು ಕೈಗಾರಿಕಾ ಹಾಗೂ ಕೃಷಿ ವಲಯಕ್ಕೆ ಸಮಾನ ಅವಕಾಶಗಳನ್ನು ನೀಡಿ ಅಭಿವೃದ್ಧಿಯಲ್ಲಿಯೂ ಸಮತೋಲನ ಕಾಯ್ದುಕೊಂಡ ಸಮಚಿತ್ತದ ಆಡಳಿತಗಾರ. ರಾಜ್ಯದ ವಿಚಾರ ಬಂದಾಗ ಎಲ್ಲಾ ಬಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಎಲ್ಲಾ ಪಕ್ಷಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದ್ದರು. ಸದಾ ಅಭಿವೃದ್ಧಿ, ರಾಷ್ಟ್ರ ಹಾಗೂ ರಾಜ್ಯದ ಪರವಾಗಿ ಯೋಚನೆ ಮಾಡುತ್ತಿದ್ದ ಕಾಯಕಜೀವಿ" ಎಂದು ಹೇಳಿದರು.
"ದ್ವಾಪರಯುಗದ ಕೃಷ್ಣನ ಬಗ್ಗೆ ನಾವು ಕೇಳಿದ್ದೇವೆ, ಓದಿದ್ದೇವೆ. ಓರ್ವ ರಾಜಕೀಯ ಮುತ್ಸದ್ಧಿಯಾಗಿ ಆ ಕೃಷ್ಣನಂತೆ ಈ ಎಸ್.ಎಂ.ಕೃಷ್ಣ ಅವರು ನಮ್ಮ ನಡುವೆ ಬದುಕಿದವರು. ಅವರ ರಾಜಕೀಯ ಉಚ್ಛ್ರಾಯ ಕಾಲದಲ್ಲಿ ಜೊತೆಯಾಗಿ ಇದ್ದವನು ನಾನು. ನನಗೆ ರಾಜಕೀಯ ಮಾರ್ಗದರ್ಶಕರಾಗಿ, ಎಡವಿದಾಗ ಕೈ ಹಿಡಿಯುತ್ತಾ, ತಪ್ಪು ಮಾಡಿದಾಗ ತಿದ್ದುತ್ತಾ, ಒಳ್ಳೆಯ ಕೆಲಸ ಮಾಡಿದಾಗ ಬೆನ್ನು ತಟ್ಟುತ್ತಾ ಪ್ರೋತ್ಸಾಹ ನೀಡುತ್ತಿದ್ದ ರಾಜಕೀಯ ದಿಗ್ದರ್ಶಕ. ಅವರ ಚಿಂತನೆಗಳು ಹೊಸ ಪೀಳಿಗೆಗೆ ಹಳೆ ತಲೆಮಾರನ್ನು ಬೆಸೆಯುವ ಕೊಂಡಿಯಾಗಿದ್ದವು" ಎಂದರು.
"ಕಾವೇರಿ ನೀರು ವಿಚಾರದಲ್ಲಿ ಅಧಿಕಾರ ಹೋದರೂ ಚಿಂತೆಯಿಲ್ಲ ಎಂದು ನಾಡಿನ ಹಿತಕ್ಕಾಗಿ ಹೋರಾಟ ಮಾಡಿದವರು. ಕಾವೇರಿಯ ವರಪುತ್ರನನ್ನು ಈ ನಾಡು ಕಳೆದುಕೊಂಡಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಬಂಧುಗಳು, ಅಭಿಮಾನಿಗಳು, ಸ್ನೇಹಿತರು, ಹಿತೈಷಿಗಳಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ನೀಡಲಿ" ಎಂದು ಡಿಕೆಶಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಎಸ್.ಎಂ.ಕೃಷ್ಣ ಜೊತೆಗಿನ ಒಡನಾಟ ನೆನೆದು ಖರ್ಗೆ ಭಾವುಕ: ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅವರ ಜೊತೆಗಿನ ಒಡನಾಟ ನೆನೆದು ಭಾವುಕರಾದರು.
ದೆಹಲಿಯಲ್ಲಿ ಮಾತನಾಡಿದ ಅವರು, ಯಾವ ಇಲಾಖೆಯಲ್ಲೂ ಮಧ್ಯಪ್ರವೇಶ ಮಾಡುತ್ತಿರಲಿಲ್ಲ. ಮುಕ್ತವಾಗಿ ಮಂತ್ರಿಗಳಿಗೆ ಕೆಲಸ ಮಾಡಲು ಬಿಡುತ್ತಿದ್ದರು. ಒಳ್ಳೆ ಕೆಲಸ ಮಾಡಿದರೆ ಶ್ಲಾಘನೆ ಮಾಡುತ್ತಿದ್ದರು. ಒಳ್ಳೆಯ ಆಡಳಿತಗಾರನನ್ನು ಕಳೆದುಕೊಂಡಿದ್ದೇವೆ. ವಿಧಾನಸೌಧ, ವಿಕಾಸಸೌಧ ಕಟ್ಟಿಸುವ ಕೆಲಸ ಮಾಡಿದರು. ರಾಜ್ಕುಮಾರ್ ಅಪಹರಣ ಕಾಲದಲ್ಲಿ ನಾನು ಗೃಹ ಮಂತ್ರಿಯಾಗಿದ್ದೆ. ಆಗ ಸಂಪೂರ್ಣ ಸಹಕಾರ ನೀಡಿದರು. ವೀರಪ್ಪನ್, ತೆಲಗಿ ಕೆಲಸದಲ್ಲೂ ಸಾಕಷ್ಟು ಜೊತೆಯಾಗಿ ಕೆಲಸ ಮಾಡಿದ್ದೆವು" ಎಂದು ಸ್ಮರಿಸಿದರು.
"ಅನೇಕ ಘಟನೆಗಳು ನೆನಪಿಗೆ ಬರುತ್ತವೆ. ಕಾವೇರಿ ವಿಚಾರದಲ್ಲಿ ಹೋರಾಟ ಆಗಿರಬಹುದು, ಹೀಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಕೇಂದ್ರದಲ್ಲೂ ಸಾಕಷ್ಟು ಕೆಲಸ ಮಾಡಿದರು. ರಾಜ್ಯ ಮತ್ತು ಕೇಂದ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೆವು" ಎಂದು ದುಃಖಿತರಾದರು.
"ಎಸ್.ಎಂ. ಕೃಷ್ಣ ನಿಧನ ನನಗೆ ದುಖಃ ತಂದಿದೆ. ಆಘಾತವಾಗಿದೆ. ಈ ನಡುವೆ ಆಸ್ಪತ್ರೆಯಲ್ಲಿ ನಾನು ಅವರನ್ನು ಭೇಟಿಯಾಗಿದ್ದೆ. ಗುಣಮುಖವಾಗುತ್ತಿದ್ದರು. ಆದರೆ ಈಗ ನಿಧನವಾಗಿದ್ದಾರೆ. ಒಬ್ಬ ಒಳ್ಳೆ ವ್ಯಕ್ತಿ, ಒಳ್ಳೆಯ ರಾಜಕಾರಣಿ. ಜನರ ಜೊತೆಯಲ್ಲಿ ಎಂದೂ ದ್ವೇಷವನ್ನು ಇಟ್ಟುಕೊಂಡ ವ್ಯಕ್ತಿಯಲ್ಲ. ತನ್ನದೇ ಆದ ಸ್ಟೈಲ್ನಲ್ಲಿ ರಾಜಕೀಯ ಮಾಡಿದ್ದರು. ಪ್ರತ್ಯಕ್ಷವಾಗಿ ಪರೋಕ್ಷವಾಗಿ ನನಗೂ ಸಹಾಯ ಮಾಡಿದ್ದರು. ನಾನು ಅವರ ಜೊತೆಗೆ ಅನೇಕ ವರ್ಷ ಮಂತ್ರಿಯಾಗಿ ಸಹಪಾಠಿಯಾಗಿ ಕೆಲಸ ಮಾಡಿದೆ. ಅವರು ಕೆಲಸಗಳು ಯಾವಾಗಲೂ ಕ್ಲೀನ್ ಆಗಿ ಇರಬೇಕು ಎಂದು ಬಯಸುತ್ತಿದ್ದರು. ದೇವರಾಜು ಅರಸು ಕಾಲದಲ್ಲೂ ನಾವಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದೆವು" ಎಂದು ಕಂಬನಿ ಮಿಡಿದರು.