ಮೈಸೂರು : ಶುಕ್ರವಾರ ರಾತ್ರಿ ಅರಮನೆ ಮುಂಭಾಗದ ಜಯ ಮಾರ್ತಾಂಡ ದ್ವಾರದ ಬಳಿ ದಸರಾ ಗಜಪಡೆಯ ಧನಂಜಯ್ ಆನೆ, ಕಂಜನ್ ಆನೆಯನ್ನ ಅಟ್ಟಾಡಿಸಿಕೊಂಡು ಹೋದ ಘಟನೆ ಕುರಿತು ದಸರಾ ಗಜಪಡೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಡಾ. ಪ್ರಭುಗೌಡ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿ 7.30ರ ಸಮಯದಲ್ಲಿ ಧನಂಜಯ್ ಮತ್ತು ಕಂಜನ್ ನಡುವೆ ಊಟದ ಸಮಯದಲ್ಲಿ ಗಲಾಟೆ ಆಗಿದೆ. ಧನಂಜಯ್ ಆನೆಗೆ ಊಟ ಮಾಡಿಸುತ್ತಿದ್ದ ಸಮಯದಲ್ಲಿ ಕಂಜನ್ ಆನೆಯು ಧನಂಜಯ್ ಆನೆಯ ಹಿಂಬದಿಯಲ್ಲಿ ಹೋಗುತ್ತಿತ್ತು. ಆ ಸಮಯದಲ್ಲಿ ಧನಂಜಯ್ ಹಿಂದೆ ತಿರುಗಿ ಕಂಜನ್ ಆನೆಯ ಮೇಲೆ ದಾಳಿಗೆ ಮುಂದಾಗಿದೆ ಎಂದರು.
ಹಾಗೆ ಅದನ್ನು ಓಡಿಸಿಕೊಂಡು ಹೋಗುತ್ತಿದ್ದಂತೆ ಕಂಜನ್ ಆನೆಯ ಕಾವಾಡಿ ಕೆಳಗೆ ಬಿದ್ದಿದ್ದಾನೆ. ಆನೆಗಳು ಓಡಿಕೊಂಡು ಹೋಗುತ್ತಿದ್ದ ಕಾರಣ ಕಾವಡಿ ಆನೆಯ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗದೇ ಕೆಳಗೆ ಬಿದ್ದಿದ್ದಾನೆ. ನಂತರ ಅರಮನೆಯ ಜಯ ಮಾರ್ತಾಂಡ ದ್ವಾರದಿಂದ ಮುಖ್ಯ ರಸ್ತೆ ತಲುಪುವ ವೇಳೆಗೆ ಧನಂಜಯ್ ಆನೆಯ ಮಾವುತ ಭಾಸ್ಕರ್ ಆನೆಯನ್ನು ಹತೋಟಿಗೆ ತಂದಿದ್ದಾನೆ.
ಆಗ ಗುದ್ದಾಟಕ್ಕೆ ಬ್ರೇಕ್ ಬಿದ್ದಿದೆ. ದಸರಾ ಗಜಪಡೆಯು ಪಳಗಿಸಿರುವ ಆನೆಗಳಾಗಿರುವುದರಿಂದ ಜನರಿಗೆ ಯಾವುದೇ ರೀತಿಯ ತೊಂದರೆ ಉಂಟು ಮಾಡುವುದಿಲ್ಲ. ಎರಡು ಗಂಡು ಆನೆಗಳು ಜಗಳ ಆಡುವುದು ಆನೆಗಳ ಕ್ಯಾಂಪ್ನಲ್ಲಿ ಸರ್ವೆ ಸಾಮಾನ್ಯ. ಆದರೆ, ನಗರ ಪ್ರದೇಶದಲ್ಲಿ ಕ್ಯಾಂಪ್ ಇರುವ ಕಾರಣ ಸ್ವಲ್ಪ ಹೈಲೈಟ್ ಆಗಿದೆ. ಇದಕ್ಕಾಗಿ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಮದ ಅಲ್ಲ ಗತ್ತು : ಧನಂಜಯ್ ಆನೆಯ ಹಾವಭಾವದಲ್ಲಿ ಯಾವುದೇ ರೀತಿಯ ಬದಲಾವಣೆ ಆಗಿಲ್ಲ. ನಾವು ಈಗಾಗಲೇ ಧನಂಜಯ್ ಆನೆಯನ್ನು ಪರಿಶೀಲನೆ ಮಾಡಿದ್ದೇವೆ. ಅದಕ್ಕೆ ಯಾವುದೇ ರೀತಿಯ ಮದ ಬಂದಿಲ್ಲ. ಅರಮನೆಯಲ್ಲಿ ಒಳ್ಳೆಯ ರೀತಿಯ ತಿಂಡಿ - ತಿನಿಸುಗಳು ಸಿಗುತ್ತವೆ. ಕಾರಣ ಗತ್ತು ಬರುವುದು ಸರ್ವೇಸಾಮಾನ್ಯ. ಅದನ್ನು ಮದ ಎಂದು ಕರೆಯುವುದಿಲ್ಲ. ಈ ಸಮಯದಲ್ಲಿ ಸ್ವಲ್ಪ ತುಂಟಾಟ ಮತ್ತು ಕಿತ್ತಾಟಗಳು ನಡೆಯುತ್ತವೆ. ನಾವು ಪ್ರತಿಯೊಂದು ಆನೆಗಳ ಕುರಿತು ಪ್ರತಿನಿತ್ಯ ಪರಿಶೀಲನೆ ನಡೆಸುತ್ತೇವೆ. ಯಾವಾಗಲೂ ನಿಗಾ ಇಡುತ್ತೇವೆ. ಏನಾದರೂ ಬದಲಾವಣೆ ಕಂಡು ಬಂದರೆ ಕಾವಾಡಿಗಳು ಮತ್ತು ಮಾವುತರನ್ನು ಕೇಳುತ್ತೇವೆ ಎಂದರು.
ಮಾವುತ - ಕಾವಾಡಿಗಳಿಗೆ ಜೊತೆಗಿರಲು ಸೂಚನೆ : ಈಗಾಗಲೇ ಮಾವುತರಿಗೆ ಹಾಗೂ ಕಾವಾಡಿಗಳಿಗೆ ಸೂಚನೆ ನೀಡಲಾಗಿದೆ. ಆನೆಗಳ ಚೈನ್ ಬಿಚ್ಚುವ ಸಮಯದಲ್ಲಿ ಇಬ್ಬರು ಕೂಡ ಆನೆಯ ಪಕ್ಕದಲ್ಲಿ ನಿಂತುಕೊಂಡು ಚೈನ್ ಬಿಚ್ಚಬೇಕು. ಆ ಸಮಯದಲ್ಲಿ ಆಹಾರಕ್ಕಾಗಿ ಎರಡು ಆನೆಗಳು ಕಿತ್ತಾಡಿಕೊಳ್ಳುವುದು ಸರ್ವೆ ಸಾಮಾನ್ಯ. ಜನರು ಇದಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಆಹಾರ ನೀಡುವ ಸಮಯದಲ್ಲಿ ಎರಡು ಗಂಡಾನೆಗಳನ್ನು ಒಟ್ಟಿಗೆ ನಿಲ್ಲಿಸಬಾರದು ಎಂದು ಸೂಚನೆ ನೀಡಲಾಗಿದೆ ಎಂದು ಡಿಸಿಎಫ್ ಡಾ. ಪ್ರಭುಗೌಡ ಮಾಹಿತಿ ನೀಡಿದರು.
ಇದನ್ನೂ ಓದಿ : ಮೈಸೂರು ಅರಮನೆ ಆವರಣದಲ್ಲಿ ದಿಢೀರ್ ಕಾದಾಟಕ್ಕಿಳಿದು ಹೊರಬಂದ ಆನೆಗಳು: ಬೆಚ್ಚಿಬಿದ್ದ ಜನ, ಮಾವುತರು! - Two elephants fight