ಮೈಸೂರು: ಜನವಸತಿ ಪ್ರದೇಶಗಳಲ್ಲಿ ಉಪಟಳ ನೀಡುವ ಚಿರತೆಗಳನ್ನು ಸೆರೆ ಹಿಡಿದು ಅವುಗಳಿಗೆ ಮೈಕ್ರೋ ಚಿಪ್ ಅಳವಡಿಸಿ ಪುನಃ ಕಾಡಿಗೆ ಬಿಡಲಾಗುತ್ತದೆ. ಹಾಗಾದರೆ ಮೈಕ್ರೋ ಚಿಪ್ ಅಳವಡಿಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?. ಅದರ ಉಪಯೋಗವೇನು?, ತಾಯಿ ಚಿರತೆಯಿಂದ ಮರಿ ಚಿರತೆಗಳನ್ನು ಹೇಗೆ ಒಂದುಗೂಡಿಸಲಾಗುತ್ತದೆ?. ಈ ಕೆಲಸದಲ್ಲಿ ಚಿರತೆ ಕಾರ್ಯಪಡೆಯ ಕೆಲಸ ಹೇಗಿರುತ್ತದೆ ಎಂಬ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಬಸವರಾಜು 'ಈಟಿವಿ ಭಾರತ'ಕ್ಕೆ ವಿವರಿಸಿದ್ದಾರೆ.
ಮೈಕ್ರೋ ಚಿಪ್ ಅಳವಡಿಕೆ ಏಕೆ, ಹೇಗೆ?: ಕೆಲವೊಮ್ಮೆ ಚಿರತೆಗಳನ್ನು ಸೆರೆಹಿಡಿದಾಗ ಯಾವುದಾದರೊಂದು ಅರಣ್ಯ ಪ್ರದೇಶಕ್ಕೆ ಬಿಡುತ್ತಿದ್ದೆವು. ಇದರಿಂದ ಅವುಗಳು ಮತ್ತೆ ಜನವಸತಿ ಪ್ರದೇಶಗಳಿಗೆ ಬಂದಾಗ ಇದು ಮೊದಲು ಸಿಕ್ಕ ಚಿರತೆ ಇರಬಹುದೇ? ಅಥವಾ ಹೊಸ ಚಿರತೆಯೇ? ಎಂದು ತಿಳಿಯುತ್ತಿರಲಿಲ್ಲ. ಮೈಕ್ರೋ ಚಿಪ್ ಅಳವಡಿಸುತ್ತಿರುವ ಪ್ರಮುಖ ಉದ್ದೇಶಗಳಲ್ಲಿ ಒಂದು ಅದರ ಐಡೆಂಟಿಫಿಕೇಷನ್. ಈ ಚಿರತೆಯನ್ನು ಹಿಂದೆ ಯಾವ ಸ್ಥಳದಲ್ಲಿ ಹಿಡಿದಿದ್ದೆವು ಎಂಬ ದತ್ತಾಂಶ ಮೈಕ್ರೋ ಚಿಪ್ನಲ್ಲಿ ಸಿಗುತ್ತದೆ. ಅದರೊಳಗೆ ಈ ಹಿಂದೆ ಎಲ್ಲಿ ಸೆರೆಯಾಗಿತ್ತು, ಯಾವ ಪ್ರಾಣಿಗಳ ಮೇಲೆ ದಾಳಿ ನಡೆಸಿತ್ತು, ಹೀಗೆ ಎಲ್ಲಾ ಮಾಹಿತಿಯನ್ನು ಚಿಪ್ನಲ್ಲಿ ಸಂಗ್ರಹಿಸಲಾಗಿರುತ್ತದೆ. ಮೈಕ್ರೋ ಚಿಪ್ ರೀಡರ್‌ನಲ್ಲಿ ಆ ಚಿರತೆ ಬಗ್ಗೆ ಪೂರ್ತಿ ಮಾಹಿತಿ ದೊರೆಯುತ್ತದೆ. ಇನ್ನು ಎರಡನೆಯದು, ಇದನ್ನು ಪುನಃ ಅರಣ್ಯ ಪ್ರದೇಶಕ್ಕೆ ಬಿಡಬೇಕೇ ಅಥವಾ ರೆಸ್ಕ್ಯೂ ಸೆಂಟರ್ಗೆ ಬಿಡಬೇಕೇ ಎಂಬ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಕೂಲವಾಗುತ್ತದೆ.
ಇದು ಒಂದು ಸಣ್ಣ ನೀಡಲ್. ಸೂಜಿ ಗಾತ್ರ ಇರುತ್ತದೆ. ನಾವು ಯಾವ ರೀತಿ ಇಂಜೆಕ್ಷನ್ ತೆಗೆದುಕೊಳ್ಳುತ್ತೇವೋ ಅದೇ ರೀತಿ ಇರುತ್ತದೆ. ಅದರೊಳಗೆ ಎಲ್ಲಾ ಮಾಹಿತಿಯನ್ನು ತುಂಬಲಾಗಿರುತ್ತದೆ. ಇದನ್ನು ಹೆಣ್ಣು ಚಿರತೆಗಳಿಗೆ ಬಾಲದ ಬುಡದ ಎಡ ಭಾಗಕ್ಕೆ ಅಳವಡಿಸಬೇಕು. ಗಂಡು ಚಿರತೆಗಳಿಗೆ ಬಾಲದ ಬುಡದ ಬಲ ಭಾಗದಲ್ಲಿ ಅಳವಡಿಸಲಾಗುತ್ತದೆ. ಇದರ ಜೊತೆಗೆ ಇದು ಮೈಕ್ರೋ ಚಿಪ್ ಅಳವಡಿಸಿರುವ ಚಿರತೆಯೇ? ಎಂದು ನೋಡಿದಾಕ್ಷಣ ತಿಳಿಯಬೇಕು. ಅದಕ್ಕಾಗಿ ಕಿವಿಯ ಭಾಗವನ್ನು ವಿ ಷೇಪ್ ಅಥವಾ ಯು ಶೇಪ್ನಲ್ಲಿ ಕಟ್ ಮಾಡಲಾಗುತ್ತದೆ. ಈ ರೀತಿ ಮಾಡಿದಾಗ ದೂರದಿಂದಲೇ ಇದು ಹಿಂದೆ ಹಿಡಿದಿದ್ದ ಚಿರತೆಯೇ? ಎಂಬ ಬಗ್ಗೆ ಮಾಹಿತಿ ದೊರೆಯುತ್ತದೆ.
ಮರಿಗಳನ್ನು ತಾಯಿ ಚಿರತೆ ಜೊತೆ ಸೇರಿಸುವುದು ಹೇಗೆ?: ಇದು ಸವಾಲಿನ ಕೆಲಸ. ಏಕೆಂದರೆ ಯಾವುದೇ ಒಂದು ಕಾಡುಪ್ರಾಣಿಯೂ ಶೇ.100ರಷ್ಟು ಮನುಷ್ಯನನ್ನು ಅವೈಡ್ ಮಾಡುತ್ತವೆ. ಕಬ್ಬಿನ ಗದ್ದೆಗಳಲ್ಲಿ ಓಡಾಟ ಮಾಡುವುದಿರಬಹುದು, ಯಾವುದೋ ಕೃಷಿ ಜಮೀನಿನಲ್ಲಿ ಓಡಾಟ ಮಾಡುವುದಾಗಿರಬಹುದು, ಎಲ್ಲೆಡೆ ಅವೈಡ್ ಮಾಡುತ್ತವೆ. ಕಬ್ಬಿನ ಗದ್ದೆಗಳಲ್ಲಿ ಚಿರತೆ ಮರಿಗಳನ್ನು ಹಾಕಿರುತ್ತವೆ. ಜನರು ಸಾಮಾನ್ಯವಾಗಿ ಅದನ್ನೆತ್ತಿ ಮುದ್ದಾಡುತ್ತಾರೆ. ಆದರೆ ಇದು ಚಿರತೆಗಳಿಗೆ ಹಿಡಿಸುವುದಿಲ್ಲ. ಮನುಷ್ಯನ ವಾಸನೆಯನ್ನು ಅವು ಸ್ವೀಕರಿಸುವುದಿಲ್ಲ. ತಾಯಿಯೇ ಆ ಮರಿಗಳನ್ನು ಗುರುತಿಸಿ ಕರೆದುಕೊಂಡು ಹೋಗುವಂತೆ ಏರ್ಪಾಡು ಮಾಡಲಾಗುತ್ತದೆ. ಅಷ್ಟು ಮಾಡಿದರೂ ಕೆಲವೊಮ್ಮೆ ಮರಿಗಳನ್ನು ತೆಗೆದುಕೊಂಡು ಹೋಗುವುದಿಲ್ಲ. ಆ ಸಮಯದಲ್ಲಿ ತಾಯಿ ಚಿರತೆಯನ್ನು ಸೆರೆ ಹಿಡಿಯಬೇಕಾಗುತ್ತದೆ.
ಸೆರೆ ಹಿಡಿದ ಮೇಲೆ ಅವುಗಳನ್ನು ರೆಸ್ಕ್ಯೂ ಸೆಂಟರ್ನಲ್ಲಿಟ್ಟು, ಮರಿಗಳ ಜೊತೆ ಬಿಡಲಾಗುತ್ತದೆ. ತಾಯಿ ಮತ್ತು ಮರಿಗಳ ನಡುವೆ ಕಳೆದು ಹೋದ ಬಾಂಧವ್ಯವನ್ನು ಏರ್ಪಡಿಸಲಾಗುತ್ತದೆ. ಮರಿಗಳೊಂದಿಗೆ ಯಾವ ರೀತಿ ಹೊಂದಾಣಿಕೆ ಮಾಡಿಕೊಳ್ಳುತ್ತವೆ ಎಂಬುದನ್ನು ತಿಳಿದು ಒಂದೊಂದೇ ಮರಿಗಳನ್ನು ತಾಯಿ ಮರಿ ಜೊತೆ ಬಿಡಬೇಕು. ತಾಯಿ ಚಿರತೆ ಮರಿಗಳ ಜೊತೆ ಹೊಂದಿಕೊಂಡ ನಂತರ ಅವುಗಳನ್ನು ಅರಣ್ಯಕ್ಕೆ ಬಿಡುವ ವ್ಯವಸ್ಥೆಯಾಗುತ್ತದೆ. ಇಲ್ಲಿಂದ ಕೇಜ್ಗಳ ಮುಖಾಂತರ ತಾಯಿ ಚಿರತೆ ಮತ್ತು ಮರಿ ಚಿರತೆಗಳನ್ನು ತೆಗೆದುಕೊಂಡು ಹೋದಾಗ, ಮೊದಲು ತಾಯಿ ಚಿರತೆ ಕಾಡಿನೊಳಗೆ ಓಡಿಹೋಗುತ್ತದೆ. ಆದ್ದರಿಂದ ಕಾಡಿನೊಳಗೂ ಸಹ ತಾಯಿ ಮತ್ತು ಮರಿ ಚಿರತೆಗಳು ಹೊಂದಿಕೊಳ್ಳುವತನಕ ಸಾಕಿ ಕಾಡಿನೊಳಗೆ ಬಿಡಲಾಗುತ್ತದೆ. ವರಕೂಡು ಬಳಿ ಅತಿ ಹೆಚ್ಚು ದಿನ ಚಿರತೆ ಸೆರೆ ಕಾರ್ಯಾಚರಣೆ ನಡೆಯಿತು ಎಂದು ಡಿಸಿಎಫ್ ಬಸವರಾಜು ತಿಳಿಸಿದರು.
ಏನಿದು ಚಿರತೆ ಟಾಸ್ಕ್ ಫೋರ್ಸ್?: ಮೈಸೂರು ವೃತ್ತದಲ್ಲಿ ಚಿರತೆಯು ಕಾಡು ಪ್ರಾಣಿಗಳು, ಮನುಷ್ಯರ ಮೇಲೆ ದಾಳಿ ನಡೆಸುತ್ತಿತ್ತು. ಇದಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ (2023) ಚಿರತೆ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಈ ಚಿರತೆ ಟಾಸ್ಕ್ ಫೋರ್ಸ್ ನುರಿತ ಸಿಬ್ಬಂದಿಯ ತಂಡ. ಈ ಬಗ್ಗೆ ವಿಶೇಷ ತರಬೇತಿ ನೀಡಲಾಗಿದೆ. ಕಾರ್ಯಪಡೆಯಲ್ಲಿ ಒಬ್ಬರು ಡಿಸಿಎಫ್, ಒಬ್ಬರು ಎಸಿಎಫ್, ಒಬ್ಬರು ಆರ್ಎಫ್ಒ, ನಾಲ್ವರು ಡಿಆರ್ಎಫ್ಓಗಳಿದ್ದು, ಇವರೊಂದಿಗೆ 8 ಮಂದಿ ಗಸ್ತು ಅರಣ್ಯ ಪಾಲಕರು, 45 ಜನ ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ.
ಒಂದು ಕಂಟ್ರೋಲ್ ರೂಂ ಇರುತ್ತದೆ. ಕಾಡುಪ್ರಾಣಿಗಳ ಮೇಲೆ ದಾಳಿ ನಡೆಯುವ ಬಗ್ಗೆ, ಜಾನುವಾರುಗಳ ಮೇಲೆ, ಮನುಷ್ಯರ ಮೇಲೆ ದಾಳಿ ನಡೆಸಿರುವ ಬಗ್ಗೆ ಮಾಹಿತಿ ದೊರೆತಾಗ ಅಲ್ಲಿಗೆ ಈ ಟಾಸ್ಕ್ ಫೋರ್ಸ್ ಧಾವಿಸಿ, ಸೆರೆ ಮಾಡುವ ಕಾರ್ಯ ಮಾಡುತ್ತದೆ. ಸಿಗಲಿಲ್ಲವೆಂದಾಗ ಅಲ್ಲಿ ಕ್ಯಾಮರಾ, ಬೋನ್ಗಳನ್ನಿರಿಸಿ ಕಾರ್ಯಾಚರಣೆ ಮಾಡಲಾಗುತ್ತದೆ. ಸೆರೆಸಿಕ್ಕ ನಂತರ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಕೆಲವೊಂದು ಬಾರಿ ಪ್ರಾಣಿಗಳು ಸೆರೆಸಿಕ್ಕದಿದ್ದಾಗ ಪಶುವೈದ್ಯರ ಮೂಲಕ ಅರವಳಿಕೆ ಮದ್ದು ನೀಡಲಾಗುತ್ತದೆ. ನೆಟ್ ಗನ್ ಬಳಸಲಾಗುತ್ತದೆ. ನಮ್ಮ ಸಿಬ್ಬಂದಿಯ ಸುರಕ್ಷತೆಯ ಜೊತೆಗೆ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಚಿರತೆ ದಾಳಿಗೆ ಪ್ರಮುಖ ಕಾರಣವೇನು?: ಕಳೆದೊಂದು ವರ್ಷದಿಂದ ಯಾವುದೇ ಒಂದು ಕಂಪ್ಲೆಂಟ್ ಬಂದರೂ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಭಯ ಹೋಗಲಾಡಿಸಲು ಜನಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ. ಈ ಸಮಸ್ಯೆಗಳು ಕಾಡಿಗೆ ಮಾತ್ರ ಸೀಮಿತವಾಗಿಲ್ಲ. ಈ ಎಲ್ಲಾ ಸಮಸ್ಯೆಗಳು ಕಾಡಿನ ಹೊರಗೂ ಬರುತ್ತಿವೆ. ಅದರ ಮೇಲೆ ಸಂಪೂರ್ಣ ಹಿಡಿತ ಅರಣ್ಯ ಇಲಾಖೆಗೆ ಮಾತ್ರ ಇಲ್ಲ. ಎಲ್ಲಾ ಇಲಾಖೆಯವರಿಗೂ ಜವಾಬ್ದಾರಿ ಇರುತ್ತದೆ. ಮಾಂಸ ಮತ್ತು ಮಾಂಸದ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದಿದ್ದಾಗ ಅಲ್ಲಿ ಬೀದಿ ನಾಯಿಗಳು ಹೆಚ್ಚಾಗುತ್ತವೆ. ಈ ಬೀದಿ ನಾಯಿಗಳು ಚಿರತೆಗಳಿಗೆ ಸುಲಭ ಆಹಾರವಾದ್ದರಿಂದ ಅವುಗಳನ್ನು ತಿನ್ನಲು ಚಿರತೆಗಳು ಬರುತ್ತವೆ.
ನಮ್ಮ ಹಳ್ಳಿಗಳಲ್ಲಿ ಬೀದಿ ದೀಪದ ವ್ಯವಸ್ಥೆ ಸರಿಯಾಗಿರುವುದಿಲ್ಲ. ಕಬ್ಬು ಸರಿಯಾದ ಸಮಯದಲ್ಲಿ ಕಟಾವು ಮಾಡದಿರುವುದು, ಕೆಲವು ಕಡೆ ರೈತರು ರಾತ್ರಿ ವೇಳೆಯಲ್ಲಿ ಜಮೀನಿಗೆ ನೀರು ಹಾಯಿಸಲು ಹೋಗುತ್ತಾರೆ. ಈ ರೀತಿಯ ಹತ್ತಾರು ಕಾರಣಗಳು ಅರಣ್ಯದ ಹೊರಗೂ ಸಹ ಇರುವುದರಿಂದ ಪ್ರಯತ್ನ ಮೀರಿ ನಾವು ಇದರಲ್ಲಿ ಖಂಡಿತವಾಗಿ ಯಶಸ್ಸು ಕಂಡಿದ್ದೇವೆ. ಇನ್ನು ಮುಂದೆ ಬರುವಂತಹ ಸವಾಲುಗಳನ್ನೂ ಎದುರಿಸಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇವೆ ಎಂದು ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಬಸವರಾಜು ವಿವರಿಸಿದರು.