ದಾವಣಗೆರೆ: ನ್ಯಾಮತಿಯ ಎಸ್ಬಿಐ ಬ್ಯಾಂಕ್ ದರೋಡೆ ಆಗಿ ದಿನಗಳೇ ಉರುಳಿದರೂ ಕಳ್ಳರು ಮಾತ್ರ ಪತ್ತೆಯಾಗಿಲ್ಲ. ಇತ್ತ 'ನಮ್ಮ ಚಿನ್ನ ನಮಗೆ ಕೊಡಿ' ಎಂದು ಬ್ಯಾಂಕ್ ಗ್ರಾಹಕರು ಪಟ್ಟು ಹಿಡಿದಿದ್ದಾರೆ. ಅಂತೆಯೇ ಬ್ಯಾಂಕ್ನಲ್ಲಿ ಚಿನ್ನ ಅಡವಿಟ್ಟ ಗ್ರಾಹಕರು ಸಭೆ ನಡೆಸಿ "ನಮ್ಮ ಚಿನ್ನ, ನಮ್ಮ ಹಕ್ಕು" ಧ್ಯೇಯ ವಾಕ್ಯದೊಂದಿಗೆ ಬೀದಿಗಿಳಿದು ಬ್ಯಾಂಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಕ್ಟೋಬರ್ 28 ರಂದು ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದ ಎಸ್ಬಿಐ ಬ್ಯಾಂಕ್ಗೆ ಕನ್ನ ಹಾಕಿದ್ದ ಕಳ್ಳರು, 12.95 ಕೋಟಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಕಳ್ಳತನವಾಗಿ 17 ದಿನ ಕಳೆದರೂ ಕಳ್ಳರ ಪತ್ತೆಯಾಗಿಲ್ಲ. ಇನ್ನು ದರೋಡೆಯಾದ ಎಸ್ಬಿಐ ಬ್ಯಾಂಕ್ ಅಲ್ಲಿ ಚಿನ್ನ ಅಡವಿಟ್ಟಿರುವ 509 ಜನ ಗ್ರಾಹಕರ ತಮ್ಮ ಆಭರಣಕ್ಕಾಗಿ ಕಾದು ಕುಳಿತಿದ್ದಾರೆ.
"ಬಂಗಾರ ಕಳ್ಳತನ ಆಗಿದ್ದರಿಂದ ನಮಗೆ ಸಮಸ್ಯೆ ಆಗಿದೆ. 500 ಗ್ರಾಂ ಬಂಗಾರಕ್ಕೆ 20 ಲಕ್ಷ ಸಾಲ ಕೊಟ್ಟಿದ್ದಾರೆ. ನಮಗೆ ಬಂಗಾರ ಬೇಕು" ಎಂದು ಕವಿತಾ ಅಳಲು ತೋಡಿಕೊಂಡರು.
ಕಳ್ಳತನವಾದ ಅಡವಿಟ್ಟ ಚಿನ್ನ, ಮನೆಯಲ್ಲಿ ಅತ್ತೆ ಸೊಸೆ ಗಲಾಟೆ...!
ಬಂಗಾರಕ್ಕಾಗಿ ತಮ್ಮ ಮನೆಗಳಲ್ಲಿ ಅತ್ತೆ-ಸೊಸೆ, ಗಂಡ-ಹೆಂಡತಿ ನಡುವೆ ಮನೆಯಲ್ಲಿ ಗಲಾಟೆ ಆರಂಭವಾಗಿದೆ ಎಂದು ಗ್ರಾಹಕರೇ ಹೇಳ್ತಿದ್ದಾರೆ. ನಮ್ಮ ಚಿನ್ನ ನಮಗೆ ಬೇಕೇ ಬೇಕು ಎಂದು ಕುಟುಂಬ ಸಮೇತರಾಗಿ ಬ್ಯಾಂಕ್ ಎದುರು ಗ್ರಾಹಕರು ಬ್ಯಾಂಕ್ ಸಿಬ್ಬಂದಿಗೆ ಆಗ್ರಹಿಸಿದರು.
"20 ತೊಲ ಬಂಗಾರ ಇಟ್ಟು ಸಾಲ ಪಡೆದಿದ್ದೆವು. ಮಕ್ಕಳ ವಿದ್ಯಾಭ್ಯಾಸ, ಕೃಷಿ ಚಟುವಟಿಕೆಗಳಿಗಾಗಿ ಮಾಡಲು ಬ್ಯಾಂಕ್ ಅಲ್ಲಿ ಬಂಗಾರ ಅಡವಿಟ್ಟಿದ್ವಿ, ಬಂಗಾರ ಕಳ್ಳತನವಾಗಿದೆ. ಅದೇ ಬಂಗಾರಕ್ಕಾಗಿ ಅತ್ತೆ-ಸೊಸೆ ಜಗಳ ಆಗ್ತಿದೆ. ಸಾವನ್ನಪ್ಪಿದ ತಂಗಿಯ ಬಂಗಾರವನ್ನು ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಡವಿಟ್ಟಿ. ನನಗೆ ಹಣ ಬೇಡ, ಬಂಗಾರ ಬೇಕು" ಎಂದು ಮಮತಾ ಅಲವತ್ತುಕೊಂಡರು.
ಬ್ಯಾಂಕ್, ಪೊಲೀಸ್ ಠಾಣೆ, ತಹಶೀಲ್ದಾರ್ಗೆ ಮನವಿ ನೀಡಿ ಗಡುವು..
ಬ್ಯಾಂಕ್ ಸಿಬ್ಬಂದಿಯು ನೊಂದ ಗ್ರಾಹಕರಿಗೆ ಕನಿಷ್ಠ ಮರ್ಯಾದೆ ಕೊಡುತ್ತಿಲ್ಲ ಎಂದು ಗ್ರಾಹಕರು ಆರೋಪ ಮಾಡಿದರು. ಅಲ್ಲದೆ ಸುರಹೊನ್ನೆ ಐಬಿ ಬಳಿ ಜಮಾಯಿಸಿ ಸಭೆ ಮಾಡಿ, "ನಮ್ಮ ಚಿನ್ನ ನಮ್ಮ ಹಕ್ಕು" ಎಂದು ಹೋರಾಟಕ್ಕಿಳಿದರು. ಬಳಿಕ ಬ್ಯಾಂಕ್, ಪೊಲೀಸ್ ಠಾಣೆ, ತಹಶೀಲ್ದಾರ್ಗೆ ಮನವಿ ನೀಡಿ ಚಿನ್ನ ಮರಳಿಸಿ ಎಂದು ಗ್ರಾಹಕರು ಗಡುವು ನೀಡಿದರು. ಇನ್ನು ಸುರಹೊನ್ನೆ ಐಬಿಯಿಂದ ಮೆರವಣಿಗೆ ಮೂಲಕ 200ಕ್ಕೂ ಅಧಿಕ ಗ್ರಾಹಕರು ತೆರಳಿ, ನ್ಯಾಯ ಒದಗಿಸುವಂತೆ ಮನವಿ ಮಾಡಿದರು.
ಬ್ಯಾಂಕ್ ಸಿಬ್ಬಂದಿ ಹೇಳಿದ್ದೇನು? ಬ್ಯಾಂಕ್ ಸಿಬ್ಬಂದಿ ಆನಂದ್ 'ಈಟಿವಿ ಭಾರತ'ಗೆ ಪ್ರತಿಕ್ರಿಯಿಸಿ "ಈ ವಿಚಾರವಾಗಿ ಉತ್ತರ ಕೊಡಲು ನನಗೆ ಅಧಿಕಾರ ಇಲ್ಲ. ಉತ್ತರ ಕೊಡಲು ರಿಜಿನಲ್ ಮ್ಯಾನೇಜರ್ ಇದ್ದಾರೆ. ಗ್ರಾಹಕರು ಮನವಿ ಪತ್ರ ಕೊಟ್ಟಿದ್ದಾರೆ, ಮೇಲಾಧಿಕಾರಿಗಳಿಗೆ ಈ ಮನವಿ ಪತ್ರ ರವಾನೆ ಮಾಡ್ತೇವೆ, ಅವರು ಏನ್ ಕೊಡ್ಬೇಕು ಎಂದು ನಿರ್ಧಾರ ಮಾಡ್ತಾರೋ ಅದನ್ನು ಕೊಡ್ತೇವೆ, ಕ್ಲೈಮ್ ಅಲ್ಲಿ ಏನ್ ಕೊಡ್ಬೇಕು, ಎಷ್ಟು ಕೊಡ್ಬೇಕು ಎಂಬುದರ ಬಗ್ಗೆ ನಮ್ಮ ಮೇಲಾಧಿಕಾರಿಗಳು ಈವರೆಗೆ ಹೇಳಿಲ್ಲ, ಒಬ್ಬರಿಗೊಂದು ಮತ್ತೊಬ್ಬರಿಗೊಂದು ಕ್ಲೈಮ್ ಕೊಡಲು ಬರುವುದಿಲ್ಲ. ಸಭೆ ನಡೆಸುವುದನ್ನು ಮಾಧ್ಯಮಗಳ ಮೂಲಕ ಗ್ರಾಹಕರ ಗಮನಕ್ಕೆ ತಂದು ಒಂದು ನಿರ್ಧಾರ ಮಾಡ್ತೇವೆ" ಎಂದರು.
ಇದನ್ನೂ ಓದಿ: ದಾವಣಗೆರೆ: ಗ್ಯಾಸ್ ಕಟರ್ ಬಳಸಿ 12.95 ಕೋಟಿ ಮೌಲ್ಯದ ಚಿನ್ನಾಭರಣ ಕಳವು; ಸಾಕ್ಷಿ ನಾಶಕ್ಕೆ ಕಳ್ಳರ ಖತರ್ನಾಕ್ ಪ್ಲಾನ್